Advertisement

ತೆರಿಗೆ ಸಂಗ್ರಹ ಪ್ರಗತಿ ಪರಿಶೀಲಿಸಿದ ಮುಖ್ಯಮಂತ್ರಿ

05:31 PM Jun 14, 2021 | Team Udayavani |

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ರಾಜ್ಯದ ತೆರಿಗೆ ಸಂಗ್ರಹಣಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರಗತಿ ಪರಿಶೀಲನೆ ನಡೆಸಿದರು.

Advertisement

ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಅಬಕಾರಿ ಇಲಾಖೆಗಳ ತೆರಿಗೆ ಸಂಗ್ರಹ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು, ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಪ್ರತಿಕೂಲ ಪರಿಸ್ಥಿತಿ ಇದ್ದಾಗ್ಯೂ ತೆರಿಗೆ ಸಂಗ್ರಹ ತೃಪ್ತಿಕರವಾಗಿದ್ದು, ಕೋವಿಡ್ ನಿಯಂತ್ರಣ ನಿರ್ಬಂಧಗಳನ್ನು ಹಿಂಪಡೆದ ನಂತರ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿದರು.

ವಾಣಿಜ್ಯ ತೆರಿಗೆ:

ರಾಜ್ಯದಲ್ಲಿ 2020-21ರಲ್ಲಿ 82,443 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಗೆ ಎದುರಾಗಿ 82,462 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ 65,659 ಕೋಟಿ ರೂ. ಜಿ.ಎಸ್.ಟಿ. ಮೂಲಕ, ಪೆಟ್ರೋಲ್/ ಡೀಸೆಲ್ ಮೇಲಿನ ತೆರಿಗೆ ಮೂಲಕ 15,861 ಕೋಟಿ ರೂ. ಹಾಗೂ ವೃತ್ತಿ ತೆರಿಗೆ ಮೂಲಕ 942 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.

ಪ್ರಸ್ತುತ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಒಟ್ಟು 11,409 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ವಾರ್ಷಿಕ ಗುರಿಯ ಶೇ. 14.92 ರಷ್ಟು ಸಾಧನೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

Advertisement

ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದ್ದು, ಸ್ಟೇಟ್ ಜಿಎಸ್ ಟಿ ಸಂಗ್ರಹದಲ್ಲಿಯೂ ದ್ವಿತೀಯ ಸ್ಥಾನದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.

2022 ಕ್ಕೆ ಜಿ.ಎಸ್.ಟಿ. ಪರಿಹಾರ ವ್ಯವಸ್ಥೆ ಅಂತ್ಯವಾಗಲಿದೆ. ಇದನ್ನು ಇನ್ನಷ್ಟು ವರ್ಷಗಳ ಕಾಲ ವಿಸ್ತರಿಸುವಂತೆ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಅಬಕಾರಿ ಇಲಾಖೆ:

ರಾಜ್ಯದಲ್ಲಿ 2021-22ನೇ ಸಾಲಿಗೆ ಅಬಕಾರಿ ಇಲಾಖೆಯ ತೆರಿಗೆ ಸಂಗ್ರಹ ಗುರಿ 24,580 ಕೋಟಿ ರೂ. ಗಳಾಗಿದ್ದು, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಒಟ್ಟು 4284.05 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕಳೆದ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಿಗೆ ಹೋಲಿಸಿದರೆ, ಈ ವರ್ಷ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. 2020-21ರಲ್ಲಿ 23,332.10 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ ಬೆಳವಣಿಗೆ ದರ ಶೇ. 8.10 ರಷ್ಟಿದೆ ಎಂದು ಅಧಿಕಾರಿಗಳು ವಿವರಿಸಿದರು. ತೆರಿಗೆ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಆರ್ಥಿಕ ಇಲಾಖೆ ಕಾರ್ಯದರ್ಶಿಗಳಾದ ಏಕ್ ರೂಪ್ ಕೌರ್ ಹಾಗೂ ಪಿ.ಸಿ. ಜಾಫರ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ.ಎಸ್. ಶ್ರೀಕರ್, ಅಬಕಾರಿ ಇಲಾಖೆ ಆಯುಕ್ತ ಬಿ.ಲೋಕೇಶ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next