Advertisement

ಎಲ್ಲೋ ಹುಟ್ಟಿ ಎಲ್ಲೋ ಸ್ಪರ್ಧೆ ಮಾಡಿ ಶಾಸಕ ಸಂಸದರಾದ ನಿದರ್ಶನವಿಲ್ಲವೇ?

01:12 AM Mar 13, 2019 | Team Udayavani |

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖೀಲ್‌ ಸ್ಪರ್ಧೆ ಮಾಡುವುದನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಎಲ್ಲೋ ಹುಟ್ಟಿ,ಎಲ್ಲೋ ಸ್ಪರ್ಧೆ ಮಾಡಿ, ಶಾಸಕ-ಸಂಸದರಾದವರು ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. 

Advertisement

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ಸದಾನಂದಗೌಡರು ಮಂಗಳೂರಿನಿಂದ ಬಂದು ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿಲ್ಲವೇ?. ಯಡಿಯೂರಪ್ಪನವರು ಮಂಡ್ಯದಲ್ಲಿ ಹುಟ್ಟಿಶಿವಮೊಗ್ಗದಲ್ಲಿ ರಾಜಕೀಯ ಮಾಡುತ್ತಿಲ್ಲವೇ?. ನಾನು ಹಾಸನದಲ್ಲಿ ಹುಟ್ಟಿ ರಾಮನಗರದಲ್ಲಿ ರಾಜಕೀಯ ಮಾಡ್ತಿಲ್ವೇ?. ಶೋಭಾ ಕರಂದ್ಲಾಜೆಯವರು 2008ರಲ್ಲಿ ಯಶವಂತಪುರದಲ್ಲಿ ಸ್ಪರ್ಧಿಸಿ, ಗೆದ್ದು, ನಂತರ ಉಡುಪಿ-ಚಿಕ್ಕಮಗಳೂರು ಸಂಸದರಾಗಲಿಲ್ಲವೇ?. ಯಾರು, ಎಲ್ಲಿ ಬೇಕಾದರೂ ನಿಲ್ಲಬಹುದು ಎಂದರು.

ರಾಜಕಾರಣದಲ್ಲಿ ಪರ-ವಿರೋಧ ಇದ್ದೇ ಇರುತ್ತದೆ. ಮಂಡ್ಯದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ನಾನುಅರ್ಥ ಮಾಡಿಕೊಳ್ಳಬಲ್ಲೆ. ಮಂಡ್ಯ ಜಿಲ್ಲೆಯ ಪ್ರೀತಿ  ಅಭಿಮಾನವನ್ನು ದುರುಪಯೋಗ ಪಡಿಸಿಕೊಳ್ಳುವ ಕುಟುಂಬ ನಮ್ಮದಲ್ಲ. ಮಂಡ್ಯ ಜಿಲ್ಲೆಗೂ ನಮ್ಮ ಕುಟುಂಬಕ್ಕೂ ಹಲವು ವರ್ಷಗಳ ಸಂಬಂಧ ಇದೆ. ಯಾರ ಕೊಡುಗೆ ಏನು ಎಂಬುದನ್ನು ಆ ಜಿಲ್ಲೆಯ ಜನರು ತೀರ್ಮಾನ ಮಾಡುತ್ತಾರೆಯೇ ಹೊರತು ಯಾವುದೋ ಪಕ್ಷದ ಮುಖಂಡರು ಮಾಡುವುದಿಲ್ಲ ಎಂದರು.

“ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ನಾನು ಆರಾಮವಾಗಿ ಇದ್ದೇನೆ. ನನಗೆ ಯಾವುದೇ ಆತಂಕ, ಟೆನ್ಷ್‌ನ್‌ ಇಲ್ಲ. ನಾನು ಏನು ಕೆಲಸ ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ. ಸೀಟು ಹಂಚಿಕೆ ಬಗ್ಗೆ ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು. 

ಗೌಡರ ಜೊತೆ ಸಿಎಂ ಸಭೆ
ಸೀಟು ಹಂಚಿಕೆ ಕುರಿತು ದೆಹಲಿಯಲ್ಲಿ ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ ಸಭೆ ನಡೆದ ಬೆನ್ನಲ್ಲೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಂಗಳವಾರ ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ, ಸಚಿವ ಸಾ.ರಾ.ಮಹೇಶ್‌ ಸೇರಿದಂತೆ ಕೆಲವು ನಾಯಕರ ಜತೆ ಸಮಾಲೋಚನೆ ನಡೆಸಿದರು. ಮೈಸೂರು ಕ್ಷೇತ್ರವನ್ನು ಬಿಟ್ಟು ಕೊಡದಿರಲು ಪಟ್ಟು ಹಿಡಿದಿರುವುದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸುದೀರ್ಘ‌ ಚರ್ಚೆ ನಡೆಸಿದರು. ಮಾರ್ಚ್‌ 14ರಂದು ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ ಇದ್ದು, ಅಲ್ಲಿ ಬಹುತೇಕ ಅಂತಿಮಗೊಳ್ಳುವುದರಿಂದ ಅಲ್ಲಿಯವರೆಗೂ ಕಾದು ನೋಡಲು
ನಿರ್ಧರಿಸಲಾಯಿತು ಎಂದು ತಿಳಿದು ಬಂದಿದೆ.

Advertisement

ಡಿಕೆಶಿ ಗೋ-ಬ್ಯಾಕ್‌’
ಸುಮಲತಾರನ್ನು ಚುನಾವಣಾ ಸ್ಪರ್ಧೆಯಿಂದಹಿಂದಕ್ಕೆ ಸರಿಸಲು ದೇವೇಗೌಡರಿಂದ ರಾಜಕೀಯ ಸುಪಾರಿ ಪಡೆದುಕೊಂಡಿರುವ ಡಿ.ಕೆ.ಶಿವಕುಮರ್‌ ವಿರುದ್ಧ ಮಂಡ್ಯ ಕಾಂಗ್ರೆಸ್ಸಿಗರು “ಗೋ-ಬ್ಯಾಕ್‌ ಡಿಕೆಶಿ’ ಅಭಿಯಾನ ಆರಂಭಿಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್‌ ಪಕ್ಷ ಸಂಘಟಿಸಲು ಜಿಲ್ಲೆಗೆ ಬರುವುದಾದರೆ ಸ್ವಾಗತ. ನಮ್ಮ ಕಷ್ಟ-ಸುಖ ಕೇಳ್ಳೋದಕ್ಕೆ ಅಂತಲೇ ಸುಮಲತಾರನ್ನು ಗೆಲ್ಲಿಸಿಕೊಂಡು ಬರುತ್ತೇವೆ. ಜೆಡಿಎಸ್‌ ಪರ ಏಜೆಂಟರಾಗಿ, ನಿಖೀಲ್‌ ಪರವಾಗಿ ಚುನಾವಣೆ ಮಾಡುವಂತೆ ಸಭೆ ಕರೆದರೆ ನಾವು ಬಹಿಷ್ಕರಿಸುತ್ತೇವೆ. ಕಾಂಗ್ರೆಸ್‌ನಿಂದ ಸುಮಲತಾಗೆ ಟಿಕೆಟ್‌ ಕೊಡದಿದ್ದರೂ ಅವರೇ ನಮ್ಮ ಅಭ್ಯರ್ಥಿ. ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಿಕೊಂಡು ಬರುತ್ತೇವೆ. ನೀವು ನಿಮ್ಮ ರಾಮನಗರ ಕ್ಷೇತ್ರಕ್ಕಷ್ಟೇ ಸೀಮಿತವಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, “ಗೋ-ಬ್ಯಾಕ್‌ ಡಿಕೆಶಿ’ ಅಭಿಯಾನ ಶುರು ಮಾಡುವ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next