ಕುಂದಾಪುರ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಗುರುವಾರ ರಾತ್ರಿ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಆ ಬಳಿಕ ಅಲ್ಲೇ ಸಮೀಪದ ಸಕ್ಕಟ್ಟುವಿನ ಜೋತಿಷಿ ಯೊಬ್ಬರನ್ನು ಭೇಟಿಯಾಗಿದ್ದು, ರಾಜ ಕೀಯ ವಲಯದಲ್ಲಿ ತೀವ್ರ ಕುತೂ ಹಲಕ್ಕೆ ಕಾರಣವಾಗಿತ್ತು. ತಮ್ಮ ಪಕ್ಷದ ರಾಜಕೀಯ ಭವಿಷ್ಯದ ಕುರಿತು ಜೋತಿಷಿಯವರಲ್ಲಿ ಮುಖ್ಯಮಂತ್ರಿ ಗಳು ಕೇಳಿದ್ದಾರೆ ಎಂದು ತಿಳಿದು ಬಂದಿದೆ.
ಕರಾವಳಿ ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಯ ಬಿಸಿ ಕಾವೇರುತ್ತಿದ್ದು, ಪ್ರಚಾರದ ಭರಾಟೆಯೂ ಜೋರಿದ್ದು, ಮತ್ತೂಂದೆಡೆ ರಾಜಕೀಯ ಪಕ್ಷಗಳ ಮುಖಂಡರಿಂದ ಧಾರ್ಮಿಕ ಕೇಂದ್ರಗಳ ಭೇಟಿಯೂ ಭರ್ಜರಿ ಯಾಗಿಯೇ ನಡೆಯುತ್ತಿದೆ. ಇವೆಲ್ಲದರ ಮಧ್ಯೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜೋತಿಷಿ ಸಕ್ಕಟ್ಟುವಿನ ಮಂಜುನಾಥಯ್ಯ ಅವರ ಮನೆಗೂ ಭೇಟಿ ನೀಡಿದ್ದಾರೆ.
ಸಿಎಂ ಭೇಟಿ ಕುರಿತು “ಉದಯವಾಣಿ’ ಜತೆ ಮಾತನಾಡಿದ ಮಂಜುನಾಥಯ್ಯ ಪುತ್ರ ಮಂಜುನಾಥಯ್ಯ ಅವರು, ಬೆಂಗಳೂರಿನ ಪ್ರಸಿದ್ಧ ಜ್ಯೋತಿಷಿ ರಾಜಗುರು ದ್ವಾರಕಾನಾಥ ಮತ್ತು ನಮ್ಮ ತಂದೆ ಪರಿಚಿತರಾಗಿದ್ದು, ಕುಮಾರ ಸ್ವಾಮಿ ಅವರು ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ. ಆಗ ಸೌಕೂರಿಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದರಂತೆ ಗುರುವಾರ ನಮ್ಮ ಮನೆಗೆ ಭೇಟಿ ನೀಡಿದ್ದಾರೆ. ಈ ಬಾರಿ ನಮಗೆ ರಾಜಕೀಯ ಚೆನ್ನಾಗಾಗುತ್ತಾ ಎಂದು ಸಿಎಂ ಕೇಳಿದ್ದಾರೆ. ಅವರಿಗೆ ಒಳ್ಳೆಯದಾಗುತ್ತೆ ಎಂದು ಆಶೀರ್ವಾದ ಮಾಡಿ, ಧೈರ್ಯ ತುಂಬಿದ್ದೇವೆ ಎಂದವರು ಹೇಳಿದರು.
ಇನ್ನೂ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎಚ್‌ಡಿಕೆ, ಇದೊಂದು ಸೌಹಾರ್ದ ಭೇಟಿಯಷ್ಟೇ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ರಾಜಕೀಯ ಉದ್ದೇಶಕ್ಕೆ ಇಲ್ಲಿಗೆ ಭೇಟಿ ನೀಡಿಲ್ಲ. ಕೊಪ್ಪಕ್ಕೆ ತೆರಳುವ ಮಾರ್ಗ ಮಧ್ಯೆ ಇಲ್ಲಿಗೆ ಬಂದಿದ್ದೇನೆ ಅಷ್ಟೇ ಎಂದವರು ಹೇಳಿದ್ದಾರೆ.