Advertisement

ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಡಿಸಿಎಂ ಗರಂ

06:55 AM Jul 31, 2018 | Team Udayavani |

ಬೆಂಗಳೂರು: ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.

Advertisement

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಜನರ ಕೆಲಸಗಳು ತಾಲೂಕು ಮಟ್ಟದಲ್ಲೇ ಆಗಬೇಕು. ನಾನು ನೋಡಿದಂತೆ ಅಧಿಕಾರಿಗಳಿಂದ ಕೆಲಸ ಆಗುತ್ತಿಲ್ಲ. ಹೀಗಾಗಿಯೇ ಅವರು ಜನಪ್ರತಿನಿಧಿಗಳ ಬಳಿ ಬರುವಂತಾಗಿದೆ. ಅದರ ಬದಲು ಅಧಿಕಾರಿಗಳ ದಂಡು ಹಳ್ಳಿಗಳಿಗೆ ಹೋಗಿ ಕ್ಯಾಂಪ್‌ ಹಾಕಬೇಕು. ಆ ಮೂಲಕ ಜನರು ಕಚೇರಿಗೆ ಅರೆಯುವುದನ್ನು ತಪ್ಪಿಸಬೇಕು. ಕೆಲಸದಲ್ಲಿ ವಿಫ‌ಲರಾದ ಅಧಿಕಾರಿಗಳಿಗೆ ಜವಾಬ್ದಾರಿ ನಿಗದಿಮಾಡಬೇಕು ಎಂದು ಹೇಳಿದರು.

ಅಧಿಕಾರಿಗಳು ಸರ್ಕಾರವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಎಲ್ಲದಕ್ಕೂ ಅಧಿಕಾರಿಗಳೇ ಜವಾಬ್ದಾರರು. ಯಾವ ತಪ್ಪನ್ನೂ ನಾವು ಸಹಿಸುವುದಿಲ್ಲ. ಹಾಗೆಂದು ಅಧಿಕಾರಿಗಳಿಗೆ ತೊಂದರೆ ನೀಡುವುದೂ ಇಲ್ಲ. ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳ ಜತೆ ಸರ್ಕಾರ ಇರುತ್ತದೆ. ಒಟ್ಟಾರೆ ಸರ್ಕಾರದ ಯೋಜನೆಗಳು ಅನುಷ್ಠಾನವಾಗಬೇಕು ಅಷ್ಟೆ ಎಂದು ಸೂಚಿಸಿದರು.

31 ಇಲಾಖೆಗಳ ಕಾರ್ಯವೈಖರಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಪ್ರಥಮ ಸ್ಥಾನ ಸಿಕ್ಕಿದ್ದು, ಕೇಂದ್ರ ಸರ್ಕಾರವೇ ಪ್ರಶಸ್ತಿ ನೀಡಿದೆ. ಇದರ ಮಧ್ಯೆ ಮುಖ್ಯಮಂತ್ರಿಗಳು 2.18 ಲಕ್ಷ ಕೋಟಿ ರೂ. ಬಜೆಟ್‌ ಮಂಡಿಸಿದ್ದಾರೆ ಎಂದರೆ ಸರ್ಕಾರದಲ್ಲಿ ಹಣ ಇದೆ ಎಂದು ಅರ್ಥ. ಆದರೆ, ಅದರ ಅನುಷ್ಠಾನ ಸರಿಯಾಗಿ ಆಗಬೇಕಿದೆ. ಆ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ತಾಕೀತು ಮಾಡಿದರು.

ಪ್ರಶ್ನೆಗಳ ಸುರಿಮಳೆ:
ಒಂದು ಪಹಣಿ ಮಾಡಿಸಲು ರೈತ ವರ್ಷಗಟ್ಟಲೆ ಸರ್ಕಾರಿ ಕಚೇರಿ ಸುತ್ತಾಡಬೇಕಾಗುತ್ತದೆ. ಯಾವುದೇ ಒಂದು ಕೆಲಸಕ್ಕೆ ಈ ರೀತಿ ಸಮಯ ಬೇಕು ಎಂದರೆ ಅಧಿಕಾರಿಗಳು ಯಾವ ರೀತಿ ಕೆಲಸ ಮಾಡುತ್ತಾರೆ? ಗ್ರಾಮೀಣ ಸಾರಿಗೆ ಪರಿಸ್ಥಿತಿ ಹೇಗಿದೆ ಎಂಬುದು ನಿಮಗೆ ಗೊತ್ತೇ? ಶಾಲೆಗೆ ಹೋಗಲು ಮಕ್ಕಳಿಗೆ ಎಷ್ಟು ಸಮಸ್ಯೆ ಇದೆ ಎಂಬುದು ಗೊತ್ತಿದೆಯೇ? ಶಾಲೆಗಳ ಕಟ್ಟಡದ ಸ್ಥಿತಿ ಚಿಂತಾಜನಕವಾಗಿದ್ದು, ಕಟ್ಟಡಗಳ ಹೆಂಚು ಕಿತ್ತು ಹೋಗಿವೆ. ಯಾರಾದರೂ ಹೋಗಿ ನೋಡಿದ್ದೀರಾ? ಶಾಲೆಯಲ್ಲಿ ಶಿಕ್ಷಕರಿಲ್ಲ ಎಂದರೆ ಯಾರು ನೋಡಬೇಕು? ಒಮ್ಮೆಯಾದರೂ ಹೋಗಿ ನೋಡಿದ್ದೀರಾ? ಎಂದು ಪ್ರಶ್ನೆಗಳ ಸುರಿಮಳೆಗೈದರು.

Advertisement

ಅಲ್ಲದೆ, 5 ಲಕ್ಷ ಗಿಡ ನೆಟ್ಟಿದ್ದೇವೆ ಎಂದು ಜಿಲ್ಲಾ ಪಂಚಾಯ್ತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳು ಹೇಳುತ್ತಾರೆ. ಪ್ರತಿ ವರ್ಷ 5 ಲಕ್ಷ ಗಿಡ ನೆಡುತ್ತಾರೆ. ಆದರೆ, ಕಾಡು ಮಾತ್ರ ಬೆಳೆಯುತ್ತಿಲ್ಲ. ಇದಕ್ಕೆ ಕಾರಣವೇನು? ಇದುವರೆಗೆ ನೀವು ನಿಮ್ಮ ಜಿಲ್ಲೆಗಳಲ್ಲಿ ಇರುವ ಸಮಸ್ಯೆಗಳ ಪಟ್ಟಿ ಮಾಡಿದ್ದೀರಾ? ಪ್ರಮುಖ 10 ಸಮಸ್ಯೆಗಳು ಯಾವವು ಎಂಬುದನ್ನು ಗೊತ್ತು ಮಾಡಿಕೊಂಡಿದ್ದೀರಾ? ಆಸ್ಪತ್ರೆಗಳ ಸ್ಥಿತಿ ಹೇಗಿದೆ ಎಂಬುದನ್ನು ಗಮನಿಸಿದ್ದೀರಾ? ನಾವು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯಾವೇ? ಎಷ್ಟು ಜನ ಜಿಲ್ಲಾಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದೀರಿ ಎಂದು ಪ್ರಶ್ನಿಸಿದರು.

ಸಿಎಂ ಪರ ಬ್ಯಾಟಿಂಗ್‌ ಮಾಡಿ:
ಮುಖ್ಯಮಂತ್ರಿಗಳು ಏನೇ ಹೇಳಿದರೂ ಅದನ್ನು ತಿರುಚಿ ಬೇರೆ ಅರ್ಥ ಕಲ್ಪಿಸಲಾಗುತ್ತಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಸರ್ಕಾರ ಯಾವ ಭಾಗಕ್ಕೂ ಅನ್ಯಾಯ ಮಾಡಿಲ್ಲ. ಹೀಗಾಗಿ ನಮ್ಮ ಸರ್ಕಾರ ಆ ಭಾಗಕ್ಕೆ ಎಷ್ಟು ಹಣ ಕೊಟ್ಟಿದೆ ಎಂಬುದನ್ನು ಅಧಿಕಾರಿಗಳು ಹೇಳಬೇಕು. ಆ ಭಾಗದ 13 ಜಿÇÉೆಗೆ ಎಷ್ಟು ಅನುದಾನ ನೀಡಿದ್ದೇವೆ ಎಂದು ಹೇಳಬೇಕು ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳ ಪರ ಬ್ಯಾಟಿಂಗ್‌ ಮಾಡುವಂತೆ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next