Advertisement

ಮುಖ್ಯಮಂತ್ರಿ ಬೊಮ್ಮಾಯಿ ಕೂಡಲೇ ರಾಜೀನಾಮೆ ನೀಡಲಿ: ಸಿದ್ದರಾಮಯ್ಯ ಆಗ್ರಹ

12:43 PM Mar 04, 2023 | Team Udayavani |

ಬೆಂಗಳೂರು: ಲೋಕಾಯುಕ್ತ ಪ್ರಕರಣದಲ್ಲಿ ಕೇವಲ ಪ್ರಶಾಂತ್‌ ಮಾಡಾಳ್‌ ಬಂಧಿಸುವುದಲ್ಲ, ಅವರ ತಂದೆ ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ಬಂಧಿಸಬೇಕು ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

Advertisement

ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಇಂದು ಕೆಪಿಸಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧದ ಎಲ್ಲಾ ಭ್ರಷ್ಟಾಚಾರದ ಆರೋಪಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ದಾಖಲೆ ಕೇಳುತ್ತಾರೆ, ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಜಾರ್ಜ್‌ ಅವರು ತಪ್ಪು ಮಾಡದಿದ್ದರೂ ರಾಜೀನಾಮೆ ನೀಡಿದ್ದರು, ದೇವೇಗೌಡರು ನಮ್ಮ ವಿರುದ್ಧ ಒಂದಂಕಿ ಲಾಟರಿ ಆರೋಪ ಮಾಡಿದಾಗ ಕೂಡಲೇ ಪತ್ರಿಕಾಗೋಷ್ಠಿ ಕರೆದು ಅದನ್ನು ಸಿಬಿಐ ಗೆ ವಹಿಸಿದ್ದೆ, ಪರೇಶ್‌ ಮೇಸ್ತಾ ಎಂಬ ಯುವಕ ಕಾಲುಜಾರಿ ಬಿದ್ದು ಸತ್ತಾಗ ಅದನ್ನು ಕೊಲೆ ಎಂದು ದೊಂಬಿ, ಗಲಾಟೆ ಎಬ್ಬಿಸಿದರು, ಅದನ್ನು ಕೂಡ ಸಿಬಿಐ ತನಿಖೆಗೆ ವಹಿಸಿದ್ದೆ, ಈ ಯಾವುದೇ ಪ್ರಕರಣದಲ್ಲಿ ನಾವು ಬಿಜೆಪಿಯವರಿಂದ ದಾಖಲೆ ಕೇಳಿಲ್ಲ, ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 8 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೆ, ಇಂದು ಆ ಎಲ್ಲಾ ಪ್ರಕರಣಗಳಲ್ಲಿ ಸಿಬಿಐ ಬಿ ರಿಪೋರ್ಟ್‌ ನೀಡಿದೆ. ನಮ್ಮ ಮೇಲಿನ ಎಲ್ಲಾ ಆರೋಪಗಳು ಸುಳ್ಳು ಎಂದು ಸಾಬೀತಾಗಿದೆ. ಈ ಬಸವರಾಜ ಬೊಮ್ಮಾಯಿಗೆ ಮಾನ ಮರ್ಯಾದಿ ಇದೆಯಾ? ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ. ಒಂದನ್ನಾದರೂ ತನಿಖೆ ಮಾಡಿಸಿದರಾ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸೇರಿಕೊಂಡು ಮಂತ್ರಿಗಳು, ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು ಇಂತಿಷ್ಟು ಲಂಚ ಕಲೆಕ್ಷನ್ ಮಾಡಿಕೊಡಬೇಕು ಎಂದು ನಿಗದಿ ಮಾಡಿದ್ದಾರೆ. ಅವರಿಗೆ ಈ ಬಾರಿ ಜಾತಿ, ಧರ್ಮಗಳ ಆಧಾರದಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅರಿವಾಗಿದೆ. ಮುಂದಿನ ಚುನಾವಣೆಯಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಲು ಕನಿಷ್ಠ 100 ಕೋಟಿ ಖರ್ಚು ಮಾಡಿದರೂ ಆಶ್ಚರ್ಯ ಇಲ್ಲ. ಬೊಮ್ಮಾಯಿಗೆ ಮಾನ ಮರ್ಯಾದಿ ಇದ್ದರೆ ಮಾಡಾಳ್‌ ವಿರೂಪಾಕ್ಷಪ್ಪನನ್ನು ಈ ಕೂಡಲೇ ಬಂಧಿಸಬೇಕು ಮತ್ತು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನಿಮ್ಮ ಭ್ರಷ್ಟಾಚಾರಕ್ಕೆ ಇದಕ್ಕಿಂತ ದಾಖಲೆ ಬೇರೆ ಬೇಕೆ ಎಂದರು.

8 ಕೋಟಿಗೂ ಅಧಿಕ ಮೊತ್ತದ ಹಣ, ಆಭರಣಗಳನ್ನು ಲೋಕಾಯುಕ್ತದವರು ಮಾಡಾಳ್‌ ವಿರೂಪಾಕ್ಷಪ್ಪ ಅವರ ಮನೆಯಿಂದ ಸೀಜ್‌ ಮಾಡಿದ್ದಾರೆ. ನನ್ನ ಪ್ರಕಾರ ಬೊಮ್ಮಾಯಿ ಈಗಾಗಲೇ ರಾಜೀನಾಮೆ ಕೊಟ್ಟುಬಿಡಬೇಕಿತ್ತು. ಸಿದ್ದರಾಮಯ್ಯ ಅವರ ಸರ್ಕಾರ ಎಐಸಿಸಿಗೆ ಎಟಿಎಂ ಆಗಿತ್ತು ಎಂದು ಅಮಿತ್‌ ಶಾ ಅವರು ನಿನ್ನೆ ಆರೋಪ ಮಾಡಿದ್ದಾರೆ, ಇದಕ್ಕೇನು ಹೇಳ್ತೀರಿ ಶಾ? ಗಡಿಪಾರಾಗಿದ್ದ, ಜೈಲಿಗೆ ಹೋಗಿದ್ದ ಶಾ ಅವರಿಂದ ನಾವು ಪಾಠ ಕಲಿಯಬೇಕಾ? ದೇಶದ ದುರಂತ ಎಂದು ವ್ಯಂಗ್ಯವಾಡಿದರು.

ಮರ್‌ ಜಾ ಮೋದಿ ಎಂದು ಕಾಂಗ್ರೆಸ್‌ ನವರು ಹೇಳುತ್ತಾರೆ ಎಂದು ಮೋದಿ ಅವರು ಜನರ ಸಿಂಪತಿ ಗಳಿಸಲು ನಾಟಕ ಮಾಡುತ್ತಿದ್ದಾರೆ. ನಿಮ್ಮ ಬಳಿ ಇಂಟಲಿಜೆನ್ಸ್‌ ಇದೆ, ಹೀಗೆ ಕೂಗಿದವರನ್ನು ಜೈಲಿಗೆ ಹಾಕೋದಲ್ವಾ ಮೋದಿಜಿ? ಇನ್ನು ಯಾಕೆ ಸುಮ್ಮನಿದ್ದೀರಿ? ಮೋದಿ ಅವರಿಗೆ ಯಡಿಯೂರಪ್ಪ ಅವರ ಮೇಲೆ ನಿಜವಾಗಿ ಕಾಳಜಿ ಇಲ್ಲ. ಅವರ ಮೇಲೆ ಇದ್ದಕ್ಕಿದ್ದಂತೆ ಸಿಂಪತಿ ಬಂದಂತೆ ನಾಟಕ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಕೇಂದ್ರ ನಾಯಕರು ಕೇಳಿದಷ್ಟು ದುಡ್ಡು ಕಳಿಸುತ್ತಿರಲಿಲ್ಲ ಎಂದು ಕಾಣುತ್ತೆ ಅದಕ್ಕೆ ಅವರನ್ನು ಅಧಿಕಾರದಿಂದ ಇಳಿಸಿ, ಆರ್‌ಎಸ್‌ಎಸ್‌ ನ ಕೈಗೊಂಬೆಯಂತೆ ಕೆಲಸ ಮಾಡುವ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಪಾಪ ಯಡಿಯೂರಪ್ಪ ಅವರು ಕಣ್ಣೀರು ಹಾಕುತ್ತಾ ಅಧಿಕಾರದಿಂದ ಇಳಿಯುವ ಹಾಗೆ ಮಾಡಿದ್ರಲ್ಲ ಮೋದಿಜಿ, ಈಗ ಓಟಿಗಾಗಿ ಅವರ ಕೈ ಹಿಡಿದುಕೊಂಡು ಹೊಗಳುತ್ತೀರ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next