ಬೆಂಗಳೂರು: ಶಿಕಾರಿಪುರದಲ್ಲಿ ಶುಕ್ರವಾರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನೀಡಿದ ಹೇಳಿಕೆ ರಾಷ್ಟ್ರ ಮಟ್ಟದಲ್ಲಿ ಭಾರಿ ಮಹತ್ವ ಪಡೆದುಕೊಂಡಿದ್ದು, ಭಾರಿ ರಾಜಕೀಯ ಲೆಕ್ಕಾಚಾರಗಳಿಗೂ ಕಾರಣವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸಚಿವ ಆರ್. ಅಶೋಕ್ ಅವರು ಸಾಥ್ ನೀಡಿದ್ದು, ರಾಜಕೀಯ ವಿದ್ಯಮಾನ ಚರ್ಚೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಯಡಿಯೂರಪ್ಪನವರು ನಿನ್ನೆ ನೀಡಿದ್ದು ಸಲಹೆ ಅಷ್ಟೇ
ಯಡಿಯೂರಪ್ಪನವರು ನಿನ್ನೆ ನೀಡಿದ್ದು ಸಲಹೆ ಅಷ್ಟೇ. ಕ್ಷೇತ್ರದ ಜನ ಪದೆ ಪದೇ ಹೇಳುತ್ತಿದ್ದರು, ಹಾಗಾಗಿ ಆ ಹೇಳಿಕೆ ನೀಡಿದ್ದಾರೆ. ವಿಜಯೇಂದ್ರ ಬಗ್ಗೆ ಮಾತ್ರವಲ್ಲ, ಇಡಿ ರಾಜ್ಯದ ಬಗ್ಗೆ ಮೋದಿ, ಅಮಿತ್ ಶಾ ತೀರ್ಮಾನ ಮಾಡುತ್ತಾರೆ. ಯಡಿಯೂರಪ್ಪ ಅಂದರೆ ಒಂದು ದೊಡ್ಡ ಶಕ್ತಿ. ನಾಲ್ಕು ದಶಕಗಳಿಂದ ಯಡಿಯೂರಪ್ಪ ಇದ್ದಾರೆ. ಅವರು ಹೇಳಿಕೆಯಿಂದ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ. ಸಿಎಂ ಸ್ಥಾನದಿಂದ ಇಳಿದಾಗಲೇ ಇಕ್ಕಟ್ಟು ಸೃಷ್ಟಿ ಮಾಡಲಿಲ್ಲ, ಈಗ ಸೃಷ್ಟಿ ಮಾಡುತ್ತಾರಾ ಎಂದು ಸಿಎಂ ಬೊಮ್ಮಾಯಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಯಡಿಯೂರಪ್ಪರು ತಮಗೆ ಅನಿಸಿದ್ದನ್ನು ಮಾಧ್ಯಮದ ಮುಂದೆ ಹೇಳುತ್ತಾರೆ. ಆ ಕ್ಷಣ ಕ್ಷೇತ್ರದ ಜನರ ಒತ್ತಾಯಕ್ಕೆ ಯಡಿಯೂರಪ್ಪ ಹಾಗೆ ಹೇಳಿದ್ದಾರೆ. ಅದು ಸಲಹೆ ಅಷ್ಟೇ ಎಂದರು.
ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧೆ ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲವಾಗಿದ್ದು, ನಾನು ಚುನಾವಣೆಗೆ ನಿಲ್ಲುವುದಿಲ್ಲ, ಶಿಕಾರಿಪುರದ ಜನ ಸ್ಪರ್ಧಿಸಲು ಒತ್ತಾಯ ಮಾಡಿದರಾದರೂ ನಾನು ನಿಲ್ಲುವುದಿಲ್ಲ, ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಿದೆ. ಅಲ್ಲಿಯ ಜನ ಒತ್ತಾಯ ಮಾಡಿದ ಕಾರಣ ನಾನು ಹಾಗೆ ಹೇಳಿದ್ದೇನೆ ಎಂದು ಯಡಿಯೂರಪ್ಪ ಭಾರಿ ಚರ್ಚೆಯ ಬಳಿಕ ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದರು.