Advertisement
ಬೊಮ್ಮಾಯಿ ತಮ್ಮ ಸರಳ ನಡೆ ಹಾಗೂ ಚುರುಕಿನ ಆಡಳಿತದಿಂದ ಜನರ ವಿಶ್ವಾಸ ಗಳಿಸುತ್ತಿದ್ದು, ಅಧಿವೇಶನ ದಲ್ಲೂ ವಿಪಕ್ಷಗಳನ್ನು ಯಶಸ್ವಿಯಾಗಿ ಎದುರಿಸಿ, ನಾಯಕತ್ವದ ಬಗ್ಗೆ ಬಿಜೆಪಿ ನಾಯಕರಿಗಿದ್ದ ಆತಂಕವನ್ನು ದೂರ ಮಾಡುವ ಪ್ರಯತ್ನ ಮಾಡಿದ್ದಾರೆ.
Related Articles
Advertisement
ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಲೆ ಏರಿಕೆ ವಿಷಯದ ಚರ್ಚೆಯಲ್ಲಿ ಕುಮಾರವ್ಯಾಸನ ಕಾವ್ಯದ ಮೂಲಕ ನಾಯಕನಾದವನು ಹೇಗಿರಬೇಕು ಎಂದು ತಿಳಿಸಿದ್ದರು. ಅದೇ ಕುಮಾರ ವ್ಯಾಸನ ಕಾವ್ಯದ ಮೂಲಕವೇ ತಮ್ಮ ನಾಯಕತ್ವ ಹೇಗಿದೆ ಎನ್ನುವುದನ್ನು ಸಮರ್ಥಿಸಿಕೊಳ್ಳುವ ಮೂಲಕ ವಿಪಕ್ಷ ನಾಯಕರಿಗೆ ತಕ್ಕ ಉತ್ತರ ಕೊಡಬಲ್ಲೆ ಎಂಬ ಸಂದೇಶ ರವಾನಿಸಿದರು.
ವಿಪಕ್ಷ ನಾಯಕರಿಗೆ ಮುಖ್ಯ ಮಂತ್ರಿ ರಾಜಕೀಯವಾಗಿಯೂ ಸಮರ್ಥವಾಗಿಯೇ ಉತ್ತರ ನೀಡಿರು ವುದು ಮೆಚ್ಚುಗೆಗೆ ಪಾತ್ರವಾಗಿದೆ.
ಸಚಿವರ ಬೆನ್ನಿಗೆ:
ಪ್ರಶ್ನೋತ್ತರ ಕಲಾಪ, ನಿಲುವಳಿ ಸೂಚನೆ ಮೇಲಿನ ಉತ್ತರ, ಮಸೂ ದೆಗಳ ಮೇಲಿನ ಚರ್ಚೆ ಸಂದರ್ಭ ದಲ್ಲಿ ಸಂಬಂಧಪಟ್ಟ ಇಲಾಖೆಗಳ ಸಚಿವರು ಉತ್ತರಿಸಲು ಪರದಾಡ ಬೇಕಾಗಿ ಬಂದಾಗ ಅವರ ಸಹಾಯಕ್ಕೆ ಬಂದಿರುವುದೂ ಗಮನ ಸೆಳೆದಿದೆ.
ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮಸೂದೆಯನ್ನು ಮುಜರಾಯಿ ಸಚಿವರ ಬದಲಾಗಿ ತಾನೇ ಮಂಡಿಸಿ, ಅತ್ಯಂತ ಸೂಕ್ಷ್ಮ ಮಸೂದೆಗೂ ಗೊಂದಲವಿಲ್ಲದೆ ಅಂಗೀಕಾರ ಪಡೆದು ಕೊಳ್ಳುವಲ್ಲಿ ಜಾಣ್ಮೆ ತೋರಿದ್ದಾರೆ.
ವಿಪಕ್ಷಗಳ ಸಹಕಾರವೇ ಶ್ರೀರಕ್ಷೆ :
ನಾಯಕತ್ವ ಬದಲಾವಣೆ ಬಳಿಕ ಕಂಡುಬಂದಿದ್ದ ಬಿಜೆಪಿ ಶಾಸಕರ ಅಸಮಾ ಧಾನ ತಣ್ಣಗಾದಂತೆ ಕಾಣಿಸುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ದೊರೆಯದಿದ್ದರೂ, ಹದಿನೈದು ದಿನಗಳಲ್ಲಿ ಎರಡು ಶಾಸಕಾಂಗ ಸಭೆಗಳನ್ನು ಕರೆದಿದ್ದರೂ ನಾಯಕತ್ವದ ವಿರುದ್ಧ ಬಹಿರಂಗವಾಗಿ ಯಾರೂ ಮಾತಾಡಿಲ್ಲ. ಇದು ಬೊಮ್ಮಾಯಿಗೆ ಹೆಚ್ಚು ಅನುಕೂಲವಾಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ನಾಯಕರ ಪರೋಕ್ಷ ಸಹಕಾರವೂ ಸಿಕ್ಕಿತ್ತು.
ಬಸವರಾಜ ಬೊಮ್ಮಾಯಿ ಅವರು ಆರೆಸ್ಸೆಸ್ ಮೂಲದವರಾಗಿರದೆ ಜನತಾ ಪರಿವಾರದ ಮೂಲಕ ಸಮಾಜವಾದಿ ಚಿಂತನೆಯ ಹಿನ್ನೆಲೆಯಿಂದ ಬಂದವರಾಗಿರುವುದರಿಂದ ಹಾಗೂ ಮಾಜಿ ಸಿಎಂ ಎಸ್.ಆರ್. ಬೊಮ್ಮಾಯಿ ಅವರ ಪುತ್ರರೆಂಬ ಕಾರಣಕ್ಕೆ ಸಿದ್ದರಾಮಯ್ಯ ಕೂಡ ಸುಗಮ ಕಲಾಪ ನಡೆಯಲು ಸಹಕಾರ ನೀಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಸಿದ್ದರಾಮಯ್ಯ ವಿಷಯಾಧಾರಿತ ಆರೋಪ ಮಾಡಿದರೂ, ಸುಗಮ ಕಲಾಪಕ್ಕೆ ಅಡ್ಡಿಯಾಗದಂತೆ ಎಲ್ಲ ಕಾರ್ಯಕಲಾಪಗಳಲ್ಲಿ ಭಾಗವಹಿಸುವ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಪರೋಕ್ಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಹಕಾರ ತೋರಿಸಿದ್ದಾರೆ ಎನ್ನಲಾಗುತ್ತಿದೆ.