Advertisement

ಸಾಮಾಜಿಕ ನ್ಯಾಯ ಭಾಷಣದ ಸರಕಲ್ಲ: ಸಿಎಂ ಬೊಮ್ಮಾಯಿ

08:06 PM Oct 09, 2022 | Team Udayavani |

ಬೆಂಗಳೂರು: ಸಾಮಾಜಿಕ ನ್ಯಾಯ ಭಾಷಣದ ಸರಕಲ್ಲ. ಅದರ ಅನುಷ್ಠಾನಕ್ಕೆ ಬದ್ಧತೆ ಜತೆಗೆ ನಾವು ಮಾಡುವ ಕೃತಿಯಲ್ಲೂ ಇರಬೇಕಾಗುತ್ತದೆ. ಆದರೆ ಅಧಿಕಾರದ ಚುಕ್ಕಾಣಿ ಹಿಡಿದ ಇದುವರೆಗಿನ ಬಹುತೇಕ ಜನ ಬರೀ ಬಾಯಿಮಾತುಗಳಿಂದ ಭ್ರಮೆಯಲ್ಲಿಡುವ ಕೆಲಸ ಮಾಡಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಪಕ್ಷಗಳಿಗೆ ತೀಕ್ಷ್ಣವಾಗಿ ಹೇಳಿದರು.

Advertisement

ವಿಧಾನಸೌಧದ ಎದುರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ರವಿವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇವಲ ಬಾಯಿ ಮಾತುಗಳಿಂದ ಶೋಷಿತ, ದಮನಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ಅದರ ಅನುಷ್ಠಾನಕ್ಕೆ ಬದ್ಧತೆ ಇರಬೇಕಾಗುತ್ತದೆ. ಭಾಷಣದ ಮೂಲಕ ಬಹಳಷ್ಟು ಜನ ನಿಮ್ಮನ್ನು (ವಾಲ್ಮೀಕಿ ಸಮುದಾಯವನ್ನು) ಯಾಮಾರಿಸುವ ಕೆಲಸ ಮಾಡುತ್ತಾರೆ. ಆದರೆ ಬಿಜೆಪಿ ಸರಕಾರ ಯಾವಾಗಲೂ ಬಡ, ಶೋಷಿತ ಸಮುದಾಯದ ಪರವಾದ ಕಾರ್ಯಕ್ರಮಗಳನ್ನು ಅನುಸರಿಸಿಕೊಂಡು ಬಂದಿದೆ. ಮಹರ್ಷಿ ವಾಲ್ಮೀಕಿ ಜಯಂತಿ, ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ, 75 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಸಹಿತ ಹತ್ತಾರು ಕಾರ್ಯಕ್ರಮಗಳನ್ನು ಕಾಣಬಹುದು. ಮುಂದಿನ ದಿನಗಳಲ್ಲೂ ವಿಧಾನಸೌಧದಿಂದ ಹೊರಡುವ ಪ್ರತಿಯೊಂದು ಆದೇಶಗಳೂ ಸಾಮಾಜಿಕ ನ್ಯಾಯದ ಪರವಾಗಿ ಇರುತ್ತವೆ ಎಂದು ಭರವಸೆ ನೀಡಿದರು.

ರಾಜಕೀಯ ಲೆಕ್ಕಾಚಾರ ಮಾಡುವವರು ನನಗೆ ಹಲವಾರು ರೀತಿಯಲ್ಲಿ ಹೇಳಿದರು. ಹೀಗೆ ಮೀಸಲಾತಿ ಪ್ರಮಾಣ ಹೆಚ್ಚಳದಿಂದ ತಾಂತ್ರಿಕವಾಗಿ ಮತ್ತು ಕಾನೂನು ಚೌಕಟ್ಟಿನಲ್ಲಿ ಸಮಸ್ಯೆ ಆಗಬಹುದು ಎಂದರು. ಆದರೆ ಸಮಾನತೆ ನೀಡಲು ಸಂವಿಧಾನದಲ್ಲೂ ಅವಕಾಶ ಇದೆ ಅಲ್ಲವೇ? ಒಂದು ಹೆಜ್ಜೆ ಮುಂದೆ ಇಡೋಣ, ಅನಂತರ ಏನುಗುತ್ತದೆ ನೋಡೋಣ ಎಂದು ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಮುಂದೆ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳಿಗೆ ಸಂಬಂಧಿಸಿ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಕಾನೂನಿನಡಿ ಏನೆಲ್ಲ ಸಾಧ್ಯವಿದೆಯೋ ಅದನ್ನು ಸರಕಾರ ಮಾಡಲಿದೆ ಎಂದು ತಿಳಿಸಿದರು.

ಬಸವಣ್ಣನ ಅನುಭವ ಮಂಟಪದಲ್ಲಿ ಮಾದಿಗರ ಚನ್ನಯ್ಯ, ಅಂಬಿಗರ ಚೌಡಯ್ಯ, ಡೊಹರ ಕಕ್ಕಯ್ಯ ಸಹಿತ ಎಲ್ಲ ಸಮುದಾಯದವರೂ ಇದ್ದರು. ಎಲ್ಲರೂ ಸೇರಿ ಜ್ಞಾನ ಭಂಡಾರವನ್ನು ಕೊಟ್ಟರು. ಅದೇ ರೀತಿ, ನನ್ನ ಸಚಿವ ಸಂಪುಟದಲ್ಲೂ ಗೋವಿಂದ ಕಾರಜೋಳ, ಶ್ರೀರಾಮುಲು ಸಹಿತ ಎಲ್ಲ ಸಮುದಾಯದ ಪ್ರತಿನಿಧಿಗಳು ರಾಜ್ಯದ ಅಭಿವೃದ್ಧಿಗೆ ಒಮ್ಮತದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

Advertisement

ಸಚಿವ ರಾಮುಲು ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಕಲಿಯುಗದ ರಾಮ. ಮುಖ್ಯಮಂತ್ರಿಗಳು ರಾಮನಂತೆ ನ್ಯಾಯ ಮತ್ತು ಧರ್ಮವಂತ. ಕಲಿಯುಗದ ಬಸವಣ್ಣ ಎಂದು ಹೊಗಳಿದರು.

ಶಾಸಕ ನರಸಿಂಹ ನಾಯಕ (ರಾಜುಗೌಡ), ಸಚಿವ ಗೋವಿಂದ ಕಾರಜೋಳ ಸಹಿತ ಹಲವು ಪ್ರಮುಖರು ಮಾತನಾಡಿದರು.

ಪ್ರಶಸ್ತಿ ಪ್ರದಾನ
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರಿಗೆ “ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ರಾಜ್ಯ ಬುಡಕಟ್ಟು ಸಂಶೋಧನ ಸಂಸ್ಥೆ ನಿರ್ದೇಶಕ ರಾಜೇಶ್‌ ಜಿ. ಗೌಡ, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಮಠದ ಸಿದ್ದರಾಮೇಶ್ವರ ಸ್ವಾಮೀಜಿ ಮತ್ತಿತರರು ಇದ್ದರು.

ಮುಖ್ಯಮಂತ್ರಿಗೆ ಸಾಷ್ಟಾಂಗ ನಮಸ್ಕರಿಸಿದ ರಾಜುಗೌಡ
ವಾಲ್ಮೀಕಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದರಿಂದ ವಿಧಾನಸೌಧ ಮುಂಭಾಗ ಶಾಸಕ ರಾಜುಗೌಡ ಅವರು ಸಿಎಂ ಬೊಮ್ಮಾಯಿ ಅವರಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸಿದರು. ಮುಖ್ಯಮಂತ್ರಿಗಳು ಮೀಸಲಾತಿ ಎಂಬ ಜೇನುಗೂಡಿಗೆ ಕೈಹಾಕಿ, ನಮಗೆ ಜೇನುತುಪ್ಪ ತಿನ್ನಿಸಿ ತಾವು ಜೇನುಗಳಿಂದ ಕಚ್ಚಿಸಿಕೊಳ್ಳುತ್ತಿದ್ದಾರೆ. ಸಚಿವ ಸ್ಥಾನವೂ ನಮಗೆ ಬೇಡ. ಜೀವ ಇರುವವರೆಗೂ ನಾವು ನಿಮ್ಮ ಸೇವಕರಾಗಿರುತ್ತೇವೆ. ಮುಂದಿನ ದಿನಗಳಲ್ಲಿ ನಿಮಗೆ ಯಾರಾದರೂ ತೊಂದರೆ ಕೊಟ್ಟರೆ ನಿಮ್ಮ ಮುಂದೆ ಸೈನಿಕರಂತೆ ನಿಂತು ಹೋರಾಟ ನಡೆಸುತ್ತೇವೆ’ ಎಂದು ಭಾವುಕರಾದರು.

2023ರ ಚುನಾವಣೆ ನ ಭೂತೋ ನ ಭವಿಷ್ಯತಿ…
2023ರ ವಿಧಾನಸಭೆಯು ಚುನಾವಣೆಯು ನ ಭೂತೋ ನ ಭವಿಷ್ಯತಿ ಆಗಲಿದೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಅಹಿಂದ ಮುಖವಾಡ ಹಾಕಿಕೊಂಡು ಹಿಂದುಳಿದವರಿಗೆ ಮೋಸ ಮಾಡಿದ್ದು ಸಾಕು. ಬಿಜೆಪಿ ಸರ್ಕಾರವು ಮೀಸಲಾತಿ ಹೆಚ್ಚಳ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದವರ ಏಳಿಗೆಗಾಗಿ ನುಡಿದಂತೆ ನಡೆದಿದೆ. ಹಿಂದುಳಿದ ಜನಾಂಗವೇ ರಾಜ್ಯದಲ್ಲಿ ಎರಡು ಕೋಟಿ ಇದೆ. ವಿಧಾನಸಭೆ ಚುನಾವಣೆಯಲ್ಲಿ ಇವರೆಲ್ಲರೂ ಎದ್ದುನಿಂತರೆ ಎದುರಾಳಿಗಳು ಧೂಳಿಪಟ ಆಗಲಿದ್ದಾರೆ. ಮುಂಬರುವ ಚುನಾವಣೆ ನ ಭೂತೋ ನ ಭವಿಷ್ಯತಿ ಎನ್ನುವ ಫ‌ಲಿತಾಂಶ ನೀಡಲಿದೆ ಎಂದರು.

ಸಮುದಾಯದ ಲಾಭ ಪಡೆದ ಬಹುತೇಕ ಎಲ್ಲರೂ ಸಮುದಾಯದ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರು. ಆದರೆ, ಬಸವರಾಜ ಬೊಮ್ಮಾಯಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ಮೂಲಕ ಸಾಮಾಜಿಕ ನ್ಯಾಯದ ಬಗ್ಗೆ ತಮ್ಮ ಬದ್ಧತೆ ಪ್ರದರ್ಶಿಸಿದ್ದಾರೆ.
-ಪ್ರಸನ್ನಾನಂದಪುರಿ ಸ್ವಾಮೀಜಿ, ಮಹರ್ಷಿ ವಾಲ್ಮೀಕಿ ಗುರುಪೀಠ

Advertisement

Udayavani is now on Telegram. Click here to join our channel and stay updated with the latest news.

Next