ಬೆಂಗಳೂರು: ಆರ್ಥಿಕ ಶಿಸ್ತು ಕಾಪಾಡಿಕೊಂಡು ತೆರಿಗೆ ಸಂಗ್ರಹ ಹೆಚ್ಚು ಮಾಡಿದ್ದರ ಒಟ್ಟಾರೆ ಪರಿಣಾಮವಾಗಿ ರಾಜಸ್ವ ಸ್ವೀಕೃತಿ ಹೆಚ್ಚಾಗಿದೆ. ಸಾಲ ಕಡಿಮೆ ಮಾಡಿ ಆದಾಯ ಹೆಚ್ಚಿಸಿದ್ದೇವೆ. ಹಿಂದಿನ ಯಾವ ಸರಕಾರಗಳಿಂದಲೂ ಇದು ಸಾಧ್ಯವಾಗಿರಲಿಲ್ಲ. ಕೋವಿಡ್ ಕಾಲದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿತ್ತು. ಕರ್ನಾಟಕದ ಆರ್ಥಿಕತೆ ಹಳಿಗೆ ಬರಲು ಐದಾರು ವರ್ಷ ಬೇಕೆಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ನಾವು ಕೇವಲ ಎರಡೇ ವರ್ಷಗಳಲ್ಲಿ ವ್ಯವಸ್ಥೆಯನ್ನು ಸುಧಾರಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಆಯವ್ಯಯ ಮಂಡನೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಅತ್ಯಂತ ದಕ್ಷ ಆಡಳಿತ, ಹಣಕಾಸಿನ ನಿರ್ವಹಣೆ ಮಾಡುವುದು ಒಂದು ಸರಕಾರದ ಜವಾಬ್ದಾರಿ. ಆ ನಿಟ್ಟಿನಲ್ಲಿ ನಡೆದುಕೊಂಡಿದ್ದರಿಂದ ಹೊಸ ಯೋಜನೆ ಘೋಷಣೆ ಮಾಡಲು ಸಾಧ್ಯವಾಗಿದೆ. ರೈತರ ಪರವಾಗಿ ನಮ್ಮ ಸರಕಾರ ಇದೆ. ನೀರಾವರಿ ಕ್ಷೇತ್ರಕ್ಕೆ 25 ಸಾವಿರ ಕೋಟಿ ರೂ. ಕೊಟ್ಟಿದ್ದೇವೆ. ಸರಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮಾಡಿದ್ದೇವೆ. ಪದವಿ ಮುಗಿದು ಮೂರು ವರ್ಷ ಕೆಲಸ ಸಿಗದೆ ಇರುವವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲಿ ಎಂದು 2,000 ರೂ. ಕೊಡಲು ನಿರ್ಧರಿಸಿದ್ದೇವೆ ಎಂದರು.
ರೈತ ಕುಟುಂಬದಲ್ಲಿ ಆಕಸ್ಮಿಕ ಅವಘಡದಿಂದ ಸಾವಾದಾಗ ಆ ಕುಟುಂಬಕ್ಕೆ ನೆರವಾಗಲು ಜೀವವಿಮೆ ಯೋಜನೆ ಜಾರಿ ಮಾಡುತ್ತಿದ್ದೇವೆ. ಜೀವನ ಜ್ಯೋತಿ ಯೋಜನೆ ಮಾಡಿ ರೈತ ಕುಟುಂಬಕ್ಕೆ 2 ಲಕ್ಷ ರೂ. ವಿಮಾ ಪರಿಹಾರ ನೀಡಲಾಗುತ್ತದೆ. ಶಾಲಾ ಕಾಲೇಜು ಮಕ್ಕಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಿದ್ದೇವೆ. ವಿದ್ಯಾರ್ಥಿಗಳ ಅನುಕೂಲಕ್ಕೆ 1 ಸಾವಿರ ಬಸ್ ಓಡಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಕಳೆದ ವರ್ಷದ ಬಜೆಟ್ ಅನುಷ್ಠಾನ ಆಗಿಲ್ಲ ಎಂದು ವಿಪಕ್ಷಗಳು ಮಾಡುತ್ತಿರುವ ಟೀಕೆಗೆ ಉತ್ತರಿಸಿ ಬಜೆಟ್ ಗಾತ್ರ 2022-23ಕ್ಕೆ 2,65,720 ಕೋಟಿ ರೂ. ಇತ್ತು. ಈ ವರ್ಷ 3,09,182 ಕೋಟಿ ರೂ. ತಲುಪಿದೆ. ಇದು ಕಳೆದ ಬಾರಿಗಿಂತ ಹೆಚ್ಚಾಗಿದೆ. ಇದು ನಮ್ಮ ಹಣಕಾಸಿನ ಬೆಳವಣಿಗೆಯ ಪ್ರತೀಕ. ರೈಲ್ವೇ ಯೋಜನೆ ಪೂರ್ಣವಾಗಲು 7,650 ಅನುದಾನ ಮೀಸಲಿಟ್ಟಿದ್ದೇವೆ. 6 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾಗಿದೆ. ಸಾಗರ ಮಾಲಾ ಯೋಜನೆ ಮೂಲಕ ಬಂದರುಗಳ ಅಭಿವೃದ್ಧಿ ಮಾಡುತ್ತಿದ್ದೇವೆ. ಶಿವಮೊಗ್ಗ ಮತ್ತು ವಿಜಯಪುರ ವಿಮಾನ ನಿಲ್ದಾಣ ಈ ವರ್ಷ ಉದ್ಘಾಟನೆ ಆಗಲಿದೆ. ಅನುಷ್ಠಾನ ಆಗಿಲ್ಲ ಎಂದರೆ ಇದೆಲ್ಲ ಏನು ಎಂದು ಬೊಮ್ಮಾಯಿ ಪ್ರಶ್ನಿಸಿದರು.
ನಮ್ಮದು ಜವಾಬ್ದಾರಿಯುತ ಪಕ್ಷ ಹಾಗೂ ಸರಕಾರ. ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಈ ಬಜೆಟ್ ಮಾಡಿದ್ದೇವೆ ಎಂದರು.
ವೇತನ ಆಯೋಗ
ಸರಕಾರಿ ನೌಕರರರಿಗೆ 7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಲು ನಿರ್ಧಾರ ಮಾಡಿದ್ದೇವೆ. ಹಿಂದಿನ ಮುಖ್ಯ ಕಾರ್ಯದರ್ಶಿ ಸುಧಾಕರ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಅವರು ವರದಿ ನೀಡಿದ ಕೂಡಲೇ ಜಾರಿ ಮಾಡುತ್ತೇವೆ. ಈ ಬಜೆಟ್‌ನಲ್ಲಿ ಅದಕ್ಕಾಗಿಯೇ 6 ಸಾವಿರ ಕೋಟಿ ರೂ. ಮೀಸಲು ಇಟ್ಟಿದ್ದೇವೆ. ಈ ವರ್ಷವೇ ಜಾರಿ ಮಾಡಬೇಕೆಂಬ ಉದ್ದೇಶ ಇದೆ. ಮಧ್ಯಂತರ ವರದಿ ಅಥವಾ ಪೂರ್ಣ ವರದಿ ಕೊಟ್ಟ ಅನಂತರ 7ನೇ ವೇತನ ಜಾರಿ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ತೆರಿಗೆ ಇಲ್ಲದೆ ಆಡಳಿತದಲ್ಲಿ ಸುಧಾರಣೆ ತಂದು ಬಜೆಟ್ ಮಂಡಿಸಿದ್ದೇವೆ. ನಮ್ಮ ಹಿಂದಿನ ಸಾಧನೆಯನ್ನು ಜನರು ನೋಡಿದ್ದಾರೆ. ಈಗನ ಬಜೆಟ್ ಮೇಲೆ ಭರವಸೆ ಇಡುತ್ತಾರೆಂಬ ನಂಬಿಕೆ ಇದೆ. ಮತ್ತೊಮ್ಮೆ ಜನ ನಮ್ಮನ್ನು ಆಯ್ಕೆ ಮಾಡುತ್ತಾರೆಂಬ ವಿಶ್ವಾಸ ಇದೆ. ಕೋವಿಡ್ ಇಲ್ಲದ ಕಾಲದಲ್ಲೂ ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತೆ. 60 ವರ್ಷಗಳ ಕಾಲ ಆಗದ ಸಾಲವನ್ನು ಅವರು ಮಾಡಿದ್ದರು. ಅವರು ಮಾಡಿಟ್ಟು ಹೋದ ಸಾಲ ತೀರಿಸುವ ಕಷ್ಟ ನಮಗೆ ಬಂದಿದೆ ಎಂದು ಟೀಕಿಸಿದರು.
ಹೂ ಇರಿಸಿ ಚೆನ್ನಾಗಿ ಕಾಣುತ್ತಿದ್ದರು
ಕಾಂಗ್ರೆಸ್ ನಾಯಕರು ಕಿವಿ ಮೇಲೆ ಹೂ ಇರಿಸಿಕೊಂಡು ಅಂದವಾಗಿ ಕಾಣುತ್ತಿದ್ದರು. ಹಿಂದೆ ಇವರು ಜನರ ಕಿವಿಗೆ ಹೂ ಇಟ್ಟಿದ್ದರು. ಈಗ ಜನರು ಇವರಿಗೆ ಹೂ ಇಟ್ಟು ಕಳುಹಿಸಿದ್ದಾ ರೆ. ಮುಂದಿನ ಚುನಾವಣೆಯಲ್ಲಿ ಇವರಿಗೆ ಮತ್ತೆ ಸೋಲೇ ಗತಿ. ಕೇಸರಿ ಬಣ್ಣದ ಹೂ ಇರಿಸಿಕೊಂಡು ಬಂದು ಬಿಜೆಪಿ ಪರವಾಗಿ ಚೆನ್ನಾಗಿ ಪ್ರಚಾರ ಮಾಡಿದರು ಎಂದು ಕಾಂಗ್ರೆಸ್ ನಾಯಕರನ್ನು ಸಿಎಂ ಬೊಮ್ಮಾಯಿ ಲೇವಡಿ ಮಾಡಿದರು.