ನವದೆಹಲಿ: ಮನೀಶ್ ಸಿಸೋಡಿಯಾ ಅವರ ಬಂಧನದ ಮೂಲಕ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸರಕಾರದ ಕೆಲಸವನ್ನು ಹಾಳು ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
”ಮನೀಶ್ ಸಿಸೋಡಿಯಾ ಬಿಜೆಪಿಗೆ ಸೇರಿದರೆ, ನಾಳೆ ಅವರು ಮುಕ್ತರಾಗುತ್ತಾರೆ. ಭ್ರಷ್ಟಾಚಾರ ವಿಷಯವಲ್ಲ, ಮಂತ್ರಿಗಳು ಮಾಡಿದ ಒಳ್ಳೆಯ ಕೆಲಸವನ್ನು ನಿಲ್ಲಿಸುವುದು ಉದ್ದೇಶವಾಗಿತ್ತು” ಎಂದು ಸಿಸೋಡಿಯಾ ಅವರ ಬಂಧನದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗಿನ ತನ್ನ ಮೊದಲ ಸಂವಾದದಲ್ಲಿ ಕೇಜ್ರಿವಾಲ್ ಕಿಡಿ ಕಾರಿದ್ದಾರೆ.
“ಬಿಜೆಪಿಯು ಆಮ್ ಆದ್ಮಿ ಪಕ್ಷದ ಓಟವನ್ನು ನಿಲ್ಲಿಸಲು ಬಯಸುತ್ತಿದೆ. ನಾವು ಪಂಜಾಬ್ ಗೆದ್ದಾಗಿನಿಂದ ಅವರಿಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೇಜ್ರಿವಾಲ್ ಹೇಳಿದರು.
”ಶಿಕ್ಷಣ ಸಚಿವರಾಗಿ ಮನೀಶ್ ಸಿಸೋಡಿಯಾ ಅವರು ಇಡೀ ಶಿಕ್ಷಣ ಮಾದರಿಯನ್ನು ಪರಿವರ್ತಿಸಿದ್ದಾರೆ. ಸತ್ಯೇಂದ್ರ ಜೈನ್ ದೆಹಲಿಗೆ ಮೊಹಲ್ಲಾ ಚಿಕಿತ್ಸಾಲಯಗಳನ್ನು ನೀಡಿದರು” ಎಂದರು.
ಆಪಾದಿತ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು ಭಾನುವಾರ ಬಂಧಿಸಲಾಗಿದೆ. ಅವರನ್ನು ಪ್ರಕರಣದಲ್ಲಿ ನಂಬರ್ ಒನ್ ಆರೋಪಿ ಎಂದು ಹೆಸರಿಸಲಾಗಿದೆ. ಅವರು ಈಗಾಗಲೇ ಸಚಿವ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅವರು ನಿರ್ವಹಿಸುತ್ತಿದ್ದ 18 ಖಾತೆಗಳನ್ನು ಉಳಿದ ಐದು ಸಚಿವರಲ್ಲಿ ಇಬ್ಬರ ನಡುವೆ ಹಂಚಿಕೆ ಮಾಡಲಾಗಿದೆ.