Advertisement

ಧರ್ಮಸ್ಥಳಕ್ಕೆ ನಿಯೋಜಿತ ಮುಖ್ಯಮಂತ್ರಿ ಎಚ್‌ಡಿಕೆ

01:41 PM May 23, 2018 | Team Udayavani |

ಬೆಳ್ತಂಗಡಿ: ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಜತೆ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

Advertisement

ದೇವಸ್ಥಾನಕ್ಕೆ ಬೆಳಗ್ಗೆ 9.30ರ ಸುಮಾರಿಗೆ ಆಗಮಿಸಿದ ಕುಮಾರಸ್ವಾಮಿ ಅವರನ್ನು ವಿಶೇಷ ಮೆರವಣಿಗೆಯೊಂದಿಗೆ
ದೇವಸ್ಥಾನಕ್ಕೆ ಕರೆತರಲಾಯಿತು. ಬಳಿಕ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಎಚ್‌.ಡಿ.ಕೆ. ಅವರು ನಾಡು
ಸಮೃದ್ಧವಾಗಿರುವಂತೆ ಬೇಡಿದರು. ಬಳಿಕ ದೇವಸ್ಥಾನ ಬಳಿ ಕುಳಿತು ಕೆಲಕಾಲ ಧ್ಯಾನ ಮಾಡಿದರು. ಈ ವೇಳೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಡಿ. ಹರ್ಷೇನ್ದ್ರ ಕುಮಾರ್‌ ಜೆಡಿಎಸ್‌ ಮುಖಂಡರು ಉಪಸ್ಥಿತರಿದ್ದರು.

ಪೂಜೆ ಬಳಿಕ ಎಚ್‌.ಡಿ.ಕೆ. ಅವರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಬೀಡಿಗೆ
ತೆರಳಿ ಮಾತುಕತೆ ನಡೆಸಿದರು. ಈ ವೇಳೆ ಹೆಗ್ಗಡೆ ಅವರನ್ನು ಗೌರವಿಸಲಾಯಿತು. ಹೆಗ್ಗಡೆ ದಂಪತಿ ಅವರೂ ಕುಮಾರಸ್ವಾಮಿ ದಂಪತಿಯನ್ನು ಗೌರವಿಸಿ ವಿಗ್ರಹ ಕೊಡುಗೆಯಾಗಿ ನೀಡಿದರು.

ದೇವಸ್ಥಾನ ದಿಂದ ವಿಶ್ರಾಂತಿ ಗೃಹಕ್ಕೆ ತೆರಳಿದ ಕುಮಾರಸ್ವಾಮಿ ಅವರು ಸುಮಾರು 30 ನಿಮಿಷಗಳ ಕಾಲ ಪಕ್ಷದ ಮುಖಂಡರ ಜತೆ ಚರ್ಚೆ ನಡೆಸಿದರು ಎನ್ನಲಾಗಿದೆ. 11 ಗಂಟೆ ಸುಮಾರಿಗೆ ಧರ್ಮ ಸ್ಥಳದಿಂದ ಶೃಂಗೇರಿಯತ್ತ ಕುಮಾರಸ್ವಾಮಿ ಪ್ರಯಾಣ ಬೆಳೆಸಿದರು.

ಬಿಗಿ ಭದ್ರತೆ
ದೇವಸ್ಥಾನದ ಸುತ್ತ ಹಾಗೂ ದ್ವಾರದ ಬಳಿ ಬಿಗಿ ಭದ್ರತೆ ನಿಯೊಜಿ ಸಲಾಗಿತ್ತು. ಎಸ್ಪಿ ರವಿಕಾಂತೇ ಗೌಡ ಅವರು ಭದ್ರತೆ
ಪರಿಶೀಲನೆ ಹಾಗೂ ಎಚ್‌. ಡಿ.ಕೆ. ಅವರ ಜತೆಗಿದ್ದರು. ಸ್ಥಳೀಯ ಠಾಣೆಗಳ ಸಿಬಂದಿ, ಸಂಚಾರ ಠಾಣೆಯ ಸಿಬಂದಿ, ಗೃಹರಕ್ಷಕ ದಳದ ಸಿಬಂದಿ ಸಹಿತ ಭದ್ರತ ದಳದ ಸಿಬಂದಿ ಹೆಚ್ಚಿನ ಭದ್ರತೆ ಒದಗಿಸಿದರು. ಕುಮಾರಸ್ವಾಮಿ ಅವರು ಆಗಮಿಸುವ ವೇಳೆಗೆ ಕೆಲಕಾಲ ಪ್ರವೇಶವನ್ನೂ ನಿರ್ಬಂಧಿಸಲಾಗಿತ್ತು.

Advertisement

ಹೆಲಿಪ್ಯಾಡ್‌ ಬಳಿ ಅಭಿಮಾನಿಗಳು
ಎಚ್‌.ಡಿ. ಕುಮಾರ ಸ್ವಾಮಿ ಅವರು ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಧರ್ಮಸ್ಥಳಕ್ಕೆ ಪತ್ನಿ ಜತೆ ಸಮೇತರಾಗಿ ಹೆಲಿಪ್ಯಾಡ್‌ಗೆ ಅಗಮಿಸಿದರು. ಈ ವೇಳೆ ಗಣ್ಯರು ಸ್ವಾಗತಿಸಲು ನೆರೆದಿದ್ದು, ಆಭಿಮಾನಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಸಿಬಂದಿ ಪರದಾಡಬೇಕಾಯಿತು.

ಈ ವೇಳೆ ಮಾಜಿ ಸಚಿವ ಅಮರನಾಥ ಶೆಟ್ಟಿ, ಜೆ.ಡಿ.ಎಸ್‌. ಜಿಲ್ಲಾಧ್ಯಕ್ಷ ಮಹಮದ್‌ ಕುಂಞಿ, ಉಪಾಧ್ಯಕ್ಷ ಜಗನ್ನಾಥ್‌, ಎಂ.ಬಿ. ಸದಾಶಿವ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಮತಿ ಎಸ್‌. ಹೆಗ್ಡೆ, ಯುವ ಜೆಡಿಎಸ್‌ ಜಿಲ್ಲಾಧ್ಯಕ್ಷ ಅಕ್ಷಿತ್‌ ಸುವರ್ಣ, ಪ್ರವೀಣ್‌ ಚಂದ್ರ ಜೈನ್‌, ಸೂರಜ್‌, ರಾಜಶ್ರೀ ಎಸ್‌. ಹೆಗ್ಡೆ , ವಸಂತ್‌ ಪೂಜಾರಿ, ಜಿಲ್ಲಾ ವಕ್ತಾರ ಸುಶೀಲ್‌ ನೊರೊನ್ಹಾ , ರಮೀಜಾ ಬಾನು, ಜೈನ್‌, ಮಧುಸೂದನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next