ಮಡಿಕೇರಿ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಭಾನುವಾರ ಜಲಪ್ರಳಯಕ್ಕೆ ಗುರಿಯಾಗಿರುವ ಕೊಡಗಿನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.
ಮೈಸೂರು ವಿಮಾನ ನಿಲ್ದಾಣದಿಂದ ಹೊರಟ ಸಿಎಂ ಸೋಮವಾರಪೇಟೆ,ಶುಂಠಿ ಕೊಪ್ಪ, ಮಾದಾಪುರ, ಮುಕ್ಕೋಡ್ಲು, ಹಾರಂಗಿ ಹಿನ್ನೀರು ಪ್ರದೇಶ,ಸಿದ್ದಾಪುರ, ಕುಶಾಲನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ಗಂಟೆ 15 ನಿಮಿಷಗಳ ಕಾಲ ವೈಮಾನಿಕ ಸಮೀಕ್ಷೆ ನಡೆಸಿದರು.
ಕುಶಾಲನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತ್ರರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಪಿಎಂ ಮೋದಿ ಕರೆ
ಮಡಿಕೇರಿಯಲ್ಲಿ ಸಿಎಂ ಸುದ್ದಿಗೋಷ್ಠಿ ನಡೆಸುತ್ತಿರುವಾಗಲೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿದ್ದಾರೆ. ಮಧ್ಯದಲ್ಲೇ ಎದ್ದು ಹೋದ ಸಿಎಂ ಎಚ್‌ಡಿಕೆ ಕೆಲ ಹೊತ್ತು ಮೊಬೈಲ್‌ನಲ್ಲಿ ಮಾತನಾಡಿ ಪರಿಸ್ಥಿತಿಯ ಕುರಿತು ವಿವರ ನೀಡಿದ್ದಾರೆ.
” ಪ್ರವಾಹ ಪರಿಸ್ಥಿತಿ ಕುರಿತು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದ್ದೇನೆ . ಜನರನ್ನು ರಕ್ಷಣೆ ಮಾಡುವುದು ಮತ್ತು ಪರಿಹಾರ ಕಾರ್ಯಗಳಲ್ಲಿ ಸಾಧ್ಯವಾದಷ್ಟು ನೆರವನ್ನು ನಾವು ನೀಡುತ್ತೇವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರ ಸುರಕ್ಷತೆ ಮತ್ತು ಯೋಗ ಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಬಿರುಸಿನ ರಕ್ಷಣಾ ಕಾರ್ಯ
ರಕ್ಷಣಾ ಕಾರ್ಯ ಮುಂದುವರಿದಿದ್ದು ಇಂದು ಕಾಲೂರಿನಲ್ಲಿ 2 ತಿಂಗಳ ಹಸುಗೂಸು , ಬಾಣಂತಿ ಸೇರಿ ನೂರಕ್ಕು ಹೆಚ್ಚು ಜನರನ್ನು ರಕ್ಷಿಸಿ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಇನ್ನೂ 60 ಮಂದಿ ಸಂಕಷ್ಟದಲ್ಲಿದ್ದು ಯೋಧರು , ರಕ್ಷಣಾ ಪಡೆಗಳು ಕಾರ್ಯಾಚರಣೆ ಮುಂದುವರಿಸಿದ್ದು, ರಕ್ಷಣೆಗಾಗಿ ಹರಸಾಹಸ ಪಡುತ್ತಿದ್ದಾರೆ.
ದಟ್ಟ ಮಂಜು ಆವರಿಸಿಕೊಂಡಿರುವುದು, ಗುಡ್ಡಗಳು ಕುಸಿದಿರುವುದು ರಕ್ಷಣೆಗೆ ಅಡ್ಡಿಯಾಗುತ್ತಿದೆ.
ಕಾರು ತಡೆದು ಆಕ್ರೋಶ
ಬಡಾವಣೆಯೊಂದರಲ್ಲಿ ಮಹಿಳೆಯರು ಸಿಎಂ ಕಾರು ತಡೆದು ಆಕ್ರೋಶ ಹೊರ ಹಾಕಿದರು. ನಮ್ಮ ಬಡಾವಣೆಗೆ ಭೇಟಿ ಕೊಡಿ ನಮಗೆ ನೀವು ಅನ್ನ ನೀರು ಏನೂ ಕೊಡುವುದು ಬೇಡ. ಬಂದು ನೋಡಿ ಹೋಗಿ ಎಂದು ಮನವಿ ಮಾಡಿದರು.
ಭಾನುವಾರ ಮಕ್ಕಂದೂರು ಸುತ್ತಾಮುತ್ತಲ ಪ್ರದೇಶದ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಸೇನಾ ಪಡೆ ಹಾಗೂ ಎನ್‌ಡಿಆರ್‌ಎಫ್ ತಂಡ ಕಾರ್ಯೋನ್ಮುಖವಾಗಿವೆ. ಕೆಲ ಪ್ರದೇಶದಲ್ಲಿ ಜನರು ರಕ್ಷಣೆಗಾಗಿ ಮೊರೆ ಇಡುತ್ತಿದ್ದಾರೆ.
ರಾಷ್ಟ್ರಪತಿಗಳಿಂದ ಕರೆ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಖ್ಯಮಂತ್ರಿ ಎಚ್‌ಡಿಕೆ ಅವರಿಗೆ ದೂರವಾಣಿ ಕರೆ ಮಾಡಿ ಕೊಡಗು ಜಿಲ್ಲೆಯ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಈವರೆಗೆ 3500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಮುಖ್ಯಮಂತ್ರಿಯವರು ರಾಷ್ಟ್ರಪತಿಗಳಿಗೆ ಮಾಹಿತಿ ನೀಡಿದ್ದಾರೆ.