ನವದೆಹಲಿ: ಸುಪ್ರೀಂಕೋರ್ಟ್ ನ ಹಾಲಿ ಸಿಜೆಐ ರಂಜನ್ ಗೋಗೊಯಿ ಅವರು ಮುಂದಿನ ತಿಂಗಳು ನಿವೃತ್ತಿಯಾಗಲಿರುವ ಹಿನ್ನೆಲೆಯಲ್ಲಿ ಮುಂದಿನ ಸಿಜೆಐ ಆಗಿ ಜಸ್ಟೀಸ್ ಶಾರದ್ ಅರವಿಂದ್ ಬೋಬ್ಡೆ ಅವರನ್ನು ನೇಮಕ ಮಾಡುವಂತೆ ಶಿಫಾರಸು ಮಾಡಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುವುದಾಗಿ ವರದಿ ತಿಳಿಸಿದೆ.
ಸುಪ್ರೀಂಕೋರ್ಟ್ ನಿಂದ ನಿವೃತ್ತಿಯಾಗಲಿರುವ ಎಲ್ಲಾ ಸಿಜೆಐ ಕೂಡಾ ಇದೇ ಪ್ರಕ್ರಿಯೆಯನ್ನು ಅನುಸರಿಸುತ್ತಾರೆ. ತಮ್ಮ ನಂತರ ಮುಂದಿನ ಸಿಜೆಐ ಯಾರಾಗಬೇಕು ಎಂಬ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವುದು ಪದ್ಧತಿಯಾಗಿದೆ.
ಸಿಜೆಐ ರಂಜನ್ ಗೋಗೊಯಿ ನಂತರ ಸುಪ್ರೀಂಕೋರ್ಟ್ ನಲ್ಲಿ ಎರಡನೇ ಹಿರಿಯ ಜಡ್ಜ್ ಆಗಿದ್ದಾರೆ. ಜಸ್ಟೀಸ್ ಎಸ್.ಎ.ಬೋಬ್ಡೆ ಅವರು ಮುಂದಿನ ನೂತನ ಸಿಜೆಐ ಆಗಿ ನೇಮಕ ಮಾಡುವಂತೆ ಗೋಗೋಯಿ ಅವರು ಕಾನೂನು ಸಚಿವಾಲಯಕ್ಕೆ ಶಿಫಾರಸು ಪತ್ರ ಬರೆದಿದ್ದಾರೆ.
ಜಸ್ಟೀಸ್ ಗೋಗೋಯಿ ಅವರು 2018ರ ಅಕ್ಟೋಬರ್ 3ರಂದು ಸುಪ್ರೀಂಕೋರ್ಟ್ ನ 46ನೇ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಗೋಗೋಯಿ ನವೆಂಬರ್ 17ರಂದು ನಿವೃತ್ತಿಯಾಗಲಿದ್ದಾರೆ. ತಮ್ಮ ನಂತರದ ಸ್ಥಾನಕ್ಕೆ ಹಿರಿಯ ಜಡ್ಜ್ ಗಳ ಹೆಸರನ್ನು ಶಿಫಾರಸು ಮಾಡುವುದು ಸಂಪ್ರದಾಯವಾಗಿದೆ.
ಯಾರಿವರು ಬೋಬ್ಡೆ:
1956ರ ಏಪ್ರಿಲ್ 24ರಂದು ಎಸ್ ಎ ಬೋಬ್ಡೆ ಅವರು ಮಹಾರಾಷ್ಟ್ರದ ನಾಗ್ ಪುರ್ ನಲ್ಲಿ ಜನಿಸಿದ್ದರು. ಜಸ್ಟೀಸ್ ಬೋಬ್ಡೆ ಅವರು ನಾಗಪುರ್ ಯೂನಿರ್ವಸಿಟಿಯಲ್ಲಿ ವಿದ್ಯಾಭ್ಯಾಸ. 2000ನೇ ಇಸವಿಯಲ್ಲಿ ಬಾಂಬೆ ಹೈ ಕೋರ್ಟ್ ನಲ್ಲಿ ಹೆಚ್ಚುವರಿ ಜಡ್ಜ್ ಆಗಿ ನೇಮಕಗೊಂಡಿದ್ದರು. 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನ ಚೀಫ್ ಜಸ್ಟೀಸ್ ಆಗಿ ನೇಮಕಗೊಂಡಿದ್ದರು.