Advertisement

ಸದ್ದಿಲ್ಲದೆ ಕನ್ನಡ ಸೇವೆ ಮಾಡುತ್ತಿರುವ ಚಿದಾನಂದ ಸೊಲ್ಲಾಪೂರ

10:11 PM Oct 31, 2022 | Team Udayavani |

ರಬಕವಿ-ಬನಹಟ್ಟಿ : ಕವಿ ಈಶ್ವರ ಸಣಕಲ್ಲರು ಮರಾಠಿಮಯವಾಗಿದ್ದ ರಬಕವಿಯ ಭಾಗದಲ್ಲಿ ಕನ್ನಡವನ್ನು ಬಿತ್ತಿ ಬೆಳೆದವರು. ಅಂತಹವರ ನಾಡಿನಲ್ಲಿ ಹುಟ್ಟಿ ಅವರ ಪ್ರೇರಣೆಯಿಂದ ನಿತ್ಯ ಕನ್ನಡದ ಸೇವೆ ಮಾಡುತ್ತಾ ಎಲೆ ಮರೆ ಕಾಯಿಯಂತೆ ಕನ್ನಡಕ್ಕಾಗಿ ಸದಾ ಸೇವೆಯನ್ನು ಮಾಡುತ್ತಾ ಬಂದಿರುವ ರಬಕವಿಯ ಕನ್ನಡ ಪ್ರೇಮಿ ಚಿದಾನಂದ ಸೋಲ್ಲಾಪೂರ ನಿಜಕ್ಕೂ ಕನ್ನಡದ ಕಟ್ಟಾಳು.

Advertisement

1986ರಲ್ಲಿ ಕರ್ನಾಟಕ ಯುವಕ ಸಂಘ ಸ್ಥಾಪಿಸಿ ಅಂದಿನಿಂದ ಕನ್ನಡ ನಾಡು ನುಡಿಯ ಸೇವೆ ಸಲ್ಲಿಸುವುದರ ಜೊತೆಗೆ ಶೈಕ್ಷಣಿಕ, ಸಾಮಾಜೀಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಗಡಿನಾಡಿನಲ್ಲಿ ಆಗಾಗ ದಿನಾಚರಣೆ ಅಲ್ಲಿಯ ಕನ್ನಡಿಗರ ಮೇಲಾಗುತ್ತಿರುವ ಹಲ್ಲೆಯನ್ನು ಖಂಡಿಸಿ ಪ್ರತಿಭಟನೆ ಸೇರತಿದಂತೆ ಅನೇಕ ಕನ್ನಡ ಪರ ಹೋರಾಟಗಳಲ್ಲಿ ಭಾಗಿಯಾಗುವುದರ ಜೊತೆಗೆ ಕನ್ನಡ ಕೆಲಸಕ್ಕೆ ಸದಾ ಟೊಂಕ ಕಟ್ಟಿ ನಿಂತವರು.

ರಬಕವಿಯ ರಬಕವಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿರುವ ಚಿದಾನಂದ ಅವರು ಸದಾ ಹಸನ್ಮುಖಿಯಾಗಿದ್ದು, ಕನ್ನಡದ ಉಳಿವಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ರಬಕವಿ ನಗರದ ಎಲ್ಲ ಗೆಳೆಯರನ್ನು ಕೂಡಿಸಿಕೊಂಡು ಅದ್ದೂರಿ ರಾಜ್ಯೋತ್ಸವದ ಮೆರವಣಿಗೆ, ನಾಡು ನುಡಿಯ ವೈಭವ ಸಾರುವ ಗೀತೆಗಳ ರಸಮಂಜರಿ ಆಯೋಜನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ.

1986ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿ ಪರಿಷತ್ತಿನ ಹಲವಾರು ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಂತ ವರು. ಅಲ್ಲದೇ ಅಖಂಡ ವಿಜಾಪೂರ ಜಿಲ್ಲಾ ಕಸಾಪ ಕಾರ್ಯಕಾರಿಣಿ ಮಂಡಳಿ ಸದಸ್ಯರಾಗಿ, ಜಮಖಂಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, 2006ರಲ್ಲಿ ಶಿವಮೊಗ್ಗದಲ್ಲಿ ನಡೆದ 73 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ. ನಿಸಾರ್ ಅಹಮ್ಮದರೊಂದಿಗೆ ಸಂವಾದದಲ್ಲಿ ಭಾಗಿ,1944 ರಲ್ಲಿ ರಬಕವಿಯಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ 1995ರಲ್ಲಿ ಸಾಹಿತ್ಯೋತ್ಸದಲ್ಲಿ ಕಾರ್ಯದರ್ಶಿಯಾಗಿ ಕಾರ್ಯಕ್ರಮ ಸಂಘಟನೆ ಸೇರಿದಂತೆ ಜಿಲ್ಲೆಯ ಎಲ್ಲ ಹಿರಿಯ, ಕಿರಿಯ ಸಾತಿಗಳೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ.

ಸನ್ಮಾನ
ತೆರೆ ಮರೆಯ ಕಾಯಿಯಂತೆ ಇರುವ ಇವರು ಎಂದು ಪ್ರಶಸ್ತಿಗಾಗಿ ಹಪಹಪಿಸಿದವರಲ್ಲ. ನಿತ್ಯ ಕನ್ನಡದ ಕೆಲಸವನ್ನು ಮಾಡುತ್ತಾ ನಡೆದಿರುವ ಇವರಿಗೆ ರಂಭಾಪುರಿ ಜಗ್ದಗುರುಗಳಿಂದ ಸನ್ಮಾನ, ಬಾಗಲಕೋಟ ಜಿಲ್ಲಾ ಕಸಾಪ ಗೌರವ, ರಬಕವಿ-ಬನಹಟ್ಟಿ ನಗರಸಭೆ ವತಿಯಿಂದ ಗೌರವ ಸೇರಿದಂತೆ ವಿವಿಧ ಸಮಾಜ ಸಂಘಟನೆಗಳು ಅವರ ಸೇವೆಗೆ ಗೌರವ ಸನ್ಮಾನಗಳನ್ನು ನೀಡಿವೆ.

Advertisement

ಯಾವುದೇ ಅಪೇಕ್ಷೆ ಇಲ್ಲದೇ ಕನ್ನಡ ನೆಲ, ಜಲ, ಭಾಷೆಯ ಉಳಿವಿಗೆ ತನ್ನದೇ ಆದ ರೀತಿಯಲ್ಲಿ ಸದಾ ಸೇವೆ ಮಾಡುತ್ತಿರುವ ಸೋಲ್ಲಾಪುರ ಅವರ ಕಾರ್ಯ ನಿಜಕ್ಕೂ ಮೆಚ್ಚುವಂತಹದು.

ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next