ಸಾಗರ: ರಾಷ್ಟ್ರೀಯ ಹೆದ್ದಾರಿ 206 ಬಿಎಚ್ ರಸ್ತೆ ಅಗಲೀಕರಣ ಸಂದರ್ಭದಲ್ಲಿ ರಸ್ತೆ ಬಲಭಾಗದ ಮರಗಳನ್ನು ಕಡಿಯುವುದಿಲ್ಲ ಎಂದು ಭರವಸೆ ನೀಡಿದ್ದ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಹಾಲಪ್ಪ ಹರತಾಳು ಅವರು ತಮ್ಮ ಮಾತು ಮುರಿಯುವ ಮೂಲಕ ಪರಿಸರ ನಾಶಕ್ಕೆ ಕಾರಣವಾಗಿದ್ದಾರೆ ಎಂದು ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಚಿದಂಬರರಾವ್ ಜಂಬೆ ಆರೋಪಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 22ರಂದು ಅಗಲೀಕರಣ ಹೆಸರಿನಲ್ಲಿ ಮರ ಕಡಿತ ಮಾಡುವುದನ್ನು ವಿರೋಧಿಸಿ ಪರಿಸರಾಸಕ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಆಗ ಸ್ಥಳಕ್ಕೆ ಬಂದ ಶಾಸಕರು ಮರ ಕಡಿಯುವ ಪ್ರಕ್ರಿಯೆ ನನಗೂ ನೋವುಂಟು ಮಾಡಿದೆ. ತಾಯಿ ಸಿಗಂದೂರು ದೇವಿಯ ಆಣೆಯಾಗಿ ರಸ್ತೆಯ ಬಲಭಾಗದ ಮರ ಕಡಿತಲೆ ಮಾಡದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು ಎಂದು ಹೇಳಿದರು.
ಜ. 23ರಂದು ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸಹ ಶಾಸಕರು ರಸ್ತೆಯ ಬಲಭಾಗದ ಮರಗಳನ್ನು ಕಡಿತಲೆ ಮಾಡುವುದಿಲ್ಲ. ದೆಹಲಿಗೆ ಹೋಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಚರ್ಚೆ ನಡೆಸಿ ಮರ ಉಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು. ನಾವು ಶಾಸಕರ ಮಾತನ್ನು ನಂಬಿ ನಿರಾಳವಾಗಿದ್ದೆವು. ಆದರೆ ಜ. 30ರಂದು ಹೆದ್ದಾರಿಯ ಬಲಭಾಗದಲ್ಲಿ ತೆನೆಬಿಟ್ಟ ಬಸುರಿ ಪಾರಂಪರಿಕ ಮಾವಿನ ಮರಗಳನ್ನು ಕಡಿತಲೆ ಮಾಡಿದ್ದು ನನಗೆ ಅತೀವ ನೋವು ಉಂಟು ಮಾಡಿದೆ. ಅಭಿವೃದ್ಧಿಯೆಂದರೆ ಆರ್ಥಿಕ ಅಭಿವೃದ್ಧಿಯೊಂದೇ ಎಂದು ಶಾಸಕರು ಭಾವಿಸಿದಂತೆ ಕಾಣುತ್ತದೆ. ಸಿಗಂದೂರು, ಜೋಗ ಅಭಿವೃದ್ಧಿ ಮಾತ್ರ ಶಾಸಕರ ಗುರಿಯೇ ಎಂದು ಪ್ರಶ್ನಿಸಿದ ಅವರು, ಶಾಸಕರು ನಮಗೆ ದ್ರೋಹ, ಮೋಸ ಮಾಡಿದ್ದಾರೆ. ಇದರ ವಿರುದ್ಧ ಜನರು ಪ್ರಶ್ನೆ ಮಾಡಬೇಕು. ಶಾಸಕರು ನೀಡಿದ ವಾಗ್ದಾನವನ್ನು ಸಹ ಮರೆತಿದ್ದಕ್ಕೆ ನಾವು ಯಾವ ರೀತಿ ಪ್ರತಿಭಟನೆ ಮಾಡಬೇಕು. ಅಧಿಕಾರ ಇದೆ ಎಂದು ಭಂಡತನ ಪ್ರದರ್ಶನ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪರಿಸರವಾದಿ ಅಖಿಲೇಶ್ ಚಿಪ್ಳಿ ಮಾತನಾಡಿ, ರಸ್ತೆಯ ಎಡಭಾಗದ ಮರಗಳನ್ನು ಕಡಿದು ಬಲಭಾಗದ ಮರ ಉಳಿಸುತ್ತೇವೆ. ಬೆಂಗಳೂರಿನ ಏಷ್ಯನ್ ಲ್ಯಾಂಡ್‌ಸ್ಕೇಪ್ ಸಂಸ್ಥೆ ಮರಗಳನ್ನು ಕಿತ್ತು ಮತ್ತೊಂದು ಕಡೆ ಸ್ಥಳಾಂತರ ಮಾಡುತ್ತದೆ ಎನ್ನುವ ಶಾಸಕರ ಹೇಳಿಕೆ ಕೃತ್ರಿಮತೆಯಿಂದ ಕೂಡಿದ್ದಾಗಿದೆ. 300-400 ವರ್ಷಗಳ ಇತಿಹಾಸ ಇರುವ ಬೃಹತ್ ಮರಗಳನ್ನು ಅಗಲೀಕರಣ ಹೆಸರಿನಲ್ಲಿ ರಾತ್ರೋರಾತ್ರಿ ಕಡಿತಲೆ ಮಾಡಲಾಗಿದೆ. ಭಾನುವಾರದ ದಿನ ಯಾರೂ ಗಮನಿಸುವುದಿಲ್ಲ ಎಂದು ಮರ ಕಡಿತಲೆ ಮಾಡಿದ್ದಾರೆ. ಬಹುಶಃ ಟಿಂಬರ್ ಮಾಫಿಯಾದ ಎದುರು ಶಾಸಕರು ಅಸಹಾಯಕರಾದಂತೆ ಕಾಣುತ್ತಿದೆ. ಪರಿಸರ ನಾಶ ಮಾಡುವ ಮೂಲಕ ಗುತ್ತಿಗೆ ಮಾಫಿಯ ವಿಜೃಂಭಿಸುತ್ತಿದೆ. ಜನಪ್ರತಿನಿಧಿಗಳ ಇಂತಹ ಹೊಂದಾಣಿಕೆ ರಾಜಕಾರಣ ಪರಿಸರನಾಶಕ್ಕೆ ಪ್ರಮುಖ ಕಾರಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಚಿತ್ರನಟ ಯೇಸುಪ್ರಕಾಶ್, ರಂಗಕರ್ಮಿಗಳಾದ ಮಂಜುನಾಥ್ ಜೇಡಿಕುಣಿ, ಹೆಗ್ಗೋಡು ಉಮಾಮಹೇಶ್ವರ, ಡಿ.ದಿನೇಶ್ ಹಾಜರಿದ್ದರು.