ಹೊಸದಿಲ್ಲಿ : ಜಿಎಸ್‌ಟಿ ತೆರಿಗೆ ದರವನ್ನು ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದು, ಗುಜರಾತ್‌ಗೆ ಧನ್ಯವಾದಗಳು ಎಂದು ಬರೆದಿದ್ದಾರೆ.
ಟ್ವೀಟ್‌ನಲ್ಲಿ ‘ಗುಜರಾತ್‌ಗೆ ಧನ್ಯವಾದ. ನಮ್ಮ ಸಂಸತ್ತು, ಸಾಮಾನ್ಯ ಜ್ಞಾನ ಮಾಡದ ಬದಲಾವಣೆಯನ್ನು ನಿಮ್ಮ ಚುನಾವಣೆ ಮಾಡಿದೆ’ ಎಂದು ಬರೆದಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ ‘ಸರ್ಕಾರ ತಡವಾಗಿ ಪಾಟ ಕಲಿತಿದೆ.ಕಾಂಗ್ರೆಸ್‌ಗೆ ಸಮರ್ಥನೆ ಸಿಕ್ಕಿದೆ. ನಾನೂ ಸಮರ್ಥಿಸಲ್ಪಟ್ಟಿದ್ದೇನೆ. ಶೇ 18ರಷ್ಟಿದ್ದ ಸರಕು ಮತ್ತು ಸೇವಾ ತೆರಿಗೆಯನ್ನು ಇಳಿಸಿರುವ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲುತ್ತದೆ’ ಎಂದು ಬರೆದಿದ್ದಾರೆ.
ಅಸ್ಸಾಂನ ಗುವಾಹಟಿಯಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 23ನೇ ಸಭೆಗೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಚಿದಂಬರಂ ‘ದಿಗಿಲುಗೊಂಡಿರುವ ಮೋದಿ ಸರ್ಕಾರಕ್ಕೆಜಿಎಸ್‌ಟಿ ದರ ಇಳಿಕೆ ಮಾಡದೇ ಬೇರೆ ವಿಧಿಯಿಲ್ಲ. ಗುಜರಾತ್ ಚುನಾವಣೆ
ಇರುವುದರಿಂದ ಪ್ರತಿಪಕ್ಷಗಳು ಹಾಗೂ ತಜ್ಞರ ಸಲಹೆಗಳಿಗೆ ಸರ್ಕಾರ ಒತ್ತಾಯಪೂರ್ವಕವಾಗಿ ಕಿವಿಗೊಡಲೇಬೇಕಿದೆ’ ಎಂದಿದ್ದರು.
ಈವರೆಗೆ ಶೇ. 12 ಹಾಗೂ ಶೇ. 18ರಷ್ಟಿದ್ದ ಸರಕು ಮತ್ತು ಸೇವಾ ತೆರಿಗೆಯನ್ನು ಈಗ ಶೇ. 5ಕ್ಕೆ ಇಳಿಸಲಾಗಿದ್ದು, ಸುಮಾರು 200ರಷ್ಟು ದಿನಬಳಕೆ ಸರಕುಗಳ ತೆರಿಗೆ ದರವನ್ನೂ ಕಡಿತಗೊಳಿಸಲಾಗಿದೆ.