Advertisement

ಕಾಶ್ಮೀರದ ಉರಿ ಬೆಂಕಿಗೆ ತುಪ್ಪ ಸುರಿದ ಚಿದಂಬರಂ

11:55 AM Oct 30, 2017 | Harsha Rao |

ಹೊಸದಿಲ್ಲಿ: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಅವರು “ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತತೆ ಬೇಕು’ ಎಂದು ಹೇಳುವ ಮೂಲಕ ಕಾಶ್ಮೀರ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಅವರ ಹೇಳಿಕೆ ಇದೀಗ ರಾಜಕೀಯ ವಾದ-ಪ್ರತಿವಾದಕ್ಕೆ ಸಾಕ್ಷಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಚಿದಂಬರಂ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆ, ವಿವಾದದಿಂದ ದೂರ ಉಳಿಯಲು ಯತ್ನಿಸಿರುವ ಕಾಂಗ್ರೆಸ್‌, ಅದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದಿದೆ. ಇನ್ನೊಂದೆಡೆ ಚಿದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. 

Advertisement

ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಚಿದಂಬರಂ ಅವರು, ಜಮ್ಮು-ಕಾಶ್ಮೀರದ ಜನ “ಆಜಾದಿ’ ಕೇಳುತ್ತಿದ್ದಾರೆಂದರೆ, ಅವರು ಸ್ವಾಯತ್ತತೆ ಯನ್ನು ಬಯಸುತ್ತಿದ್ದಾರೆ ಎಂದರ್ಥ. ಆ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಶೀಲಿಸಬೇಕಾಗಿದೆ ಎಂದಿದ್ದರು. ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಅರುಣ್‌ ಜೇಟಿÉ, ಸ್ಮತಿ ಇರಾನಿ, ಜಿತೇಂದ್ರ ಪ್ರಸಾದ್‌ ಮತ್ತಿತರರು ಈ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದು, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರತ್ಯೇಕತಾವಾದಿಗಳಿಗೆ ಉತ್ತೇಜನ: ಚಿದು ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿತ್ತ ಸಚಿವ ಅರುಣ್‌ ಜೇಟಿÉ, “ಜಮ್ಮು- ಕಾಶ್ಮೀರಕ್ಕೆ ಸಂಬಂಧಿಸಿ ಕಾಂಗ್ರೆಸ್‌ ತೆಗೆದು ಕೊಂಡಿರುವ ನಿಲುವು ದೇಶದ ಹಿತಾಸಕ್ತಿಗೆ ಸಂಪೂರ್ಣ ವಿರುದ್ಧವಾದದ್ದು. ಕಾಂಗ್ರೆಸ್‌ನ ಗ್ರಹಣ ಹಿಡಿದ ನೀತಿಗಳೇ ಕಾಶ್ಮೀರ ವಿವಾದಕ್ಕೆ ಕಾರಣ. ಇಂಥ ಹೇಳಿಕೆಗಳ ಮೂಲಕ ಆ ಪಕ್ಷವು ರಾಜ್ಯದಲ್ಲಿ ಪ್ರತ್ಯೇಕತಾವಾದಿಗಳಿಗೆ ಉತ್ತೇಜನ ನೀಡುತ್ತಿದೆ,’ ಎಂದು ಆರೋಪಿಸಿದ್ದಾರೆ.

ಚಿದು ಸಮರ್ಥನೆ: ಇನ್ನೊಂದೆಡೆ, ಟೀಕೆಗಳ ನಡುವೆಯೂ ತಮ್ಮ ಹೇಳಿಕೆಯನ್ನು ಸಮರ್ಥಿಸಿ ಕೊಂಡಿ ರುವ ಚಿದಂಬರಂ, “ಪ್ರಧಾನಿ ಮೋದಿ ಸೇರಿದಂತೆ ಯಾರೂ ನನ್ನ ಸಂಪೂರ್ಣ ಹೇಳಿಕೆಯನ್ನು ಕೇಳಿಲ್ಲ. ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ವಾಗಿಯೇ ಉಳಿಯಲಿದೆ. ಆದರೆ, ಸಂವಿಧಾನದ 370ನೇ ವಿಧಿಯಲ್ಲಿ ತಿಳಿಸಿರುವ ಪ್ರಕಾರ, ಆ ರಾಜ್ಯ ಹೆಚ್ಚಿನ ಅಧಿಕಾರವನ್ನು ಹೊಂದಿರಬೇಕು’ ಎಂದಿದ್ದಾರೆ.

ನನ್ನನ್ನು ದೇಶದ್ರೋಹಿ ಎಂದು ಕರೆಯಿರಿ
ಜಮ್ಮು-ಕಾಶ್ಮೀರ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ ಅವರು ಚಿದಂಬರಂ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. “ಚಿದಂಬರಂ ಅವರ ಹೇಳಿಕೆಗೆ ಕೇಂದ್ರದ ಸಚಿವರು ವಾಗ್ಧಾಳಿ ನಡೆಸುತ್ತಿದ್ದಾರೆ. ಜೊತೆಗೆ, ದೇಶದೊಳಗೆ ಸ್ವಾಯತ್ತತೆಯನ್ನು ಬಯಸುವವರು ಕೂಡ ದೇಶದ್ರೋಹಿಗಳು ಎಂದು ಹೇಳುತ್ತಿದ್ದಾರೆ. ಭಾರತದ ಸಂವಿಧಾನದ ಅಡಿ ಸ್ವಾಯತ್ತೆ ಬಯಸುವುದು ದೇಶದ್ರೋಹದ ಕೆಲಸವಾದರೆ, ನನ್ನನ್ನೂ ದೇಶದ್ರೋಹಿ ಎಂದು ಕರೆಯಿರಿ,’ ಎಂದಿದ್ದಾರೆ.

Advertisement

ಕಾಶ್ಮೀರ ಎನ್ನುವುದೇ ಒಂದು ವಿವಾದ. ಕೇಂದ್ರ ಸರ್ಕಾರವು ಇಲ್ಲಿ ಆಂತರಿಕ ಹಾಗೂ ಬಾಹ್ಯ ಮಾತುಕತೆಗೆ ಮುನ್ನುಡಿ ಬರೆಯುವವರೆಗೂ ಈ ವಿವಾದ ಮುಂದುವರಿಯುತ್ತಲೇ ಇರುತ್ತದೆ. ಕಾಶ್ಮೀರ ಕುರಿತ ತಮ್ಮ ನಿಲುವುಗಳನ್ನು ವ್ಯಕ್ತಪಡಿಸುವವರನ್ನು ಕೇಂದ್ರ ಸರ್ಕಾರ ಇದೇ ರೀತಿ ದೂಷಿಸುತ್ತದೆ ಎಂದರೆ, ಇದಕ್ಕಾಗಿಯೇ ದಿನೇಶ್ವರ್‌ ಶರ್ಮಾ ಅವರು ಸಂಧಾನಕಾರರಾಗಿ ಬರುತ್ತಾರೆ ಎಂದರೆ, ಸಾಕು, ನಮ್ಮನ್ನು ಮೂರ್ಖರನ್ನಾಗಿಸುವುದನ್ನು ನಿಲ್ಲಿಸಿ ಎಂದೂ ಹೇಳಿದ್ದಾರೆ ಅಬ್ದುಲ್ಲಾ.

Advertisement

Udayavani is now on Telegram. Click here to join our channel and stay updated with the latest news.

Next