ಮುಂಡರಗಿ: ಕೇಂದ್ರ, ರಾಜ್ಯ ಸರಕಾರಗಳು ರೈತರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ಸಹಕಾರ ಮಹಾಮಂಡಳ ಸಹಯೋಗದಲ್ಲಿ ರೈತರು ಬೆಳೆದ ಬೆಳೆಗಳನ್ನು ಯೋಗ್ಯ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಇದರ ಸದುಪಯೋಗ ರೈತರು ಪಡೆದುಕೊಳ್ಳಬೇಕೆಂದು ಶಿಂಗಟಾಲೂರ ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಹೇಳಿದರು.
ತಾಲೂಕಿನ ಬರದೂರ ಗ್ರಾಮದಲ್ಲಿ ಸೋಮವಾರ ಪ್ರಾಥಮಿಕ ಕೃಷಿ, ಪತ್ತಿನ ಸಹಕಾರಿ ಸಂಘದ ವತಿಯಿಂದ ಕೇಂದ್ರ ಸರಕಾರ ಬೆಂಬಲ ಬೆಲೆ ಕಡಲೆ ಕಾಯಿ ಖರೀದಿ ಕೇಂದ್ರ ಪ್ರಾರಂಭೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಹಕಾರಿ ಸಂಘಗಳು ರೈತರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಪ್ರಾರಂಭಿಸಿ ರೈತರ ಹಿತ ಕಾಪಾಡಬೇಕು ಎಂದು ಕರಬಸಪ್ಪ ಹಂಚಿನಾಳ ಅಭಿಪ್ರಾಯಪಟ್ಟರು. ಎಪಿಎಂಸಿ ಸದಸ್ಯ ರವೀಂದ್ರ ಉಪ್ಪಿನಬೆಟಗೇರಿ ಮಾತನಾಡಿ, ಬರದೂರಿನ ಕೃಷಿಪತ್ತಿನ ಸಹಕಾರಿ ಸಂಘ ರೈತರ ಪರವಾಗಿರುವ ಕೃಷಿಬೆಳೆ ಚಟುವಟಿಕೆಗಳ ಕಾರ್ಯವನ್ನು ಪ್ರಶಂಸಿದರು. ಶೀಘ್ರದಲ್ಲಿ ಗೋವಿನ ಜೋಳ ಖರೀದಿಸಲು ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಉಮೇಶ ಹಿರೇಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರಕಾರ ನಿಗದಿಪಡಿಸಿದ 4875 ರೂ . ಪ್ರತಿ ಕ್ವಿಂಟಲ್‌ಗೆ ಖರೀದಿಸಲಾಗುವುದು. ಯಾವುದೇ ಜಿಲ್ಲೆಯ ರೈತರು ಕಡೆಲೆಕಾಳು ಬೆಳೆಯನ್ನು ತಂದು ಇಲ್ಲಿ ಮಾರಬಹುದು ಎಂದರು. ಗ್ರಾಮದ ಅಶೋಕ ಹಂದ್ರಾಳ, ಮುದ್ಲಿಂಗಪ್ಪ ಕೊರ್ಲಹಳ್ಳಿ, ರವಿ ಕರಿಗಾರ, ದೇವೇಂದ್ರಪ್ಪ ರಾಮೇನಹಳ್ಳಿ ಸೇರಿದಂತೆ ರೈತರು, ಆಡಳಿತ ಮಂಡಳಿ ಸದಸ್ಯರು ಗಣ್ಯರು ಉಪಸ್ಥಿತರಿದ್ದರು. ಈಶ್ವರಗೌಡ ಹಿರೇಗೌಡ ವಂದಿಸಿದರು.