ವಾಡಿ: ಚಿಕನ್ ಫಾಕ್ಸ್ ಸಾಂಕ್ರಾಮಿಕ ರೋಗ ಉಲ್ಬಣಗೊಂಡು ಒಂದೇ ಕುಟುಂಬದ ಇಬ್ಬರು ಬಾಲಕರು ಮೃತಪಟ್ಟ ಘಟನೆ ನಾಲವಾರ ಗ್ರಾಮದಲ್ಲಿ ನಡೆದಿದೆ.
ಚಿತ್ತಾಪುರ ತಾಲೂಕಿನ ನಾಲವಾರ ಸ್ಟೇಷನ್ ಬಡಾವಣೆಯಲ್ಲಿ ಈ ಘಟನೆ ಸಂಭವಿಸಿದೆ. ಇಬ್ಬರು ಮಕ್ಕಳನ್ನು ಕಳೆದುಕೊಂಡಿರುವ ತಾಯಿ ಹಾಗೂ ಇನ್ನುಳಿದ ಇಬ್ಬರು ಮಕ್ಕಳು ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪತಿಯನ್ನು ಕಳೆದುಕೊಂಡಿರುವ ಹಫಿಜಾ ಬೇಗಂ (44) ನಾಲವಾರ ಸ್ಟೇಷನ್ ಬಡಾವಣೆಯಲ್ಲಿ ವಾಸವಿದ್ದಾರೆ. ಏಕಾಏಕಿ ತನಗೂ ಮತ್ತು ತನ್ನ ನಾಲ್ವರು ಮಕ್ಕಳ ದೇಹದ ಮೇಲೆ ರಕ್ತದ ಕಲೆ ರೂಪದ ವಿಚಿತ್ರ ಚುಕ್ಕೆ ಗಾಯಗಳು ಕಾಣಿಸಿಕೊಂಡಿವೆ. ಸಾಮಾನ್ಯವಾಗಿ ತಗಲುವ ಗಣಜಲು ರೋಗ ಎಂದು ಭಾವಿಸಿ ಸ್ಥಳೀಯ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ.
ತುರಿಕೆ, ನೋವು ಹೆಚ್ಚಾಗಿ ಇಡೀ ದೇಹಕ್ಕೆ ಹರಡುತ್ತಿರುವುದನ್ನು ಕಂಡು ಪುತ್ರರಾದ ಇಮ್ರಾನ್ ಪಟೇಲ್ (9) ಮತ್ತು ರೆಹಮಾನ್ ಪಟೇಲ್ (14) ಅವರನ್ನು ಸೊಲ್ಲಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಹಫೀಜಾ ಬೇಗಂ, ಸ್ವತಃ ತಾನು ಕಾಯಿಲೆಯಿಂದ ನರಳಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಇಮ್ರಾನ್ ಜ.16ರಂದು ಮೃತಪಟ್ಟರೆ, ಇದೇ ಕಾಯಿಲೆಯಿಂದ ಬಳಲಿದ ಬಾಲಕ ರೆಹಮಾನ್ ಜ.31ರಂದು ಅಸುನೀಗಿದ್ದಾನೆ.
ನಫೀಸಾ (14) ಮತ್ತು ಅರ್ಮಾನ್ ಪಟೇಲ್ (5)ಗೂ ಇದೇ ರೋಗ ಕಾಡುತ್ತಿದ್ದು, ತಾಯಿ ಹಫೀಜಾಬೇಗಂ, ಪುತ್ರಿ ಹಾಗೂ ಪುತ್ರನ ಜತೆ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ನಾಲವಾರ ಕುಟುಂಬಸ್ಥರ ಮನೆಗೆ ಭೇಟಿ ನೀಡಿದ ತಾಲೂಕು ವೈದ್ಯಾಧಿಕಾರಿ ಡಾ| ಅಮರದೀಪ ಪವಾರ ಹಾಗೂ ಆರೋಗ್ಯ ಸಿಬ್ಬಂದಿ, ತಾಯಿ, ಮಕ್ಕಳು ಮತ್ತು ಅಕ್ಕಪಕ್ಕದ ಮನೆಯವರ ರಕ್ತದ ಮಾದರಿ ಪಡೆದಿದ್ದಾರೆ.
ಮಹಿಳೆ ಹಫೀಜಾ ಬೇಗಂ, ಮಕ್ಕಳಾದ ನಫೀಜಾ, ಅರ್ಮಾನ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೀಡಲಾಗುತ್ತಿದೆ. ಮೇಲ್ನೋಟಕ್ಕೆ ಇದು ಚಿಕನ್ ಫಾಕ್ಸ್ ರೋಗದಂತೆ ಕಾಣುತ್ತಿದೆ. ಇದು ಮಾರಣಾಂತಿಕ ರೋಗವಲ್ಲ. ಅದಾಗ್ಯೂ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಇದಕ್ಕೆ ಕಾರಣವೇನು ಎಂಬುದು ಪ್ರಯೋಗಾಲಯದಿಂದ ವರದಿ ಬಂದಾಗಲೇ ಸ್ಪಷ್ಟವಾಗುತ್ತದೆ. ಆರೋಗ್ಯ ಸಿಬ್ಬಂದಿ ತಂಡದ ಮೂಲಕ ನಾಲವಾರ ಸ್ಟೇಷನ್ ಬಡಾವಣೆಯ ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ.
-ಅಮರದೀಪ ಪವಾರ, ತಾಲೂಕು ವೈದ್ಯಾಧಿಕಾರಿ