Advertisement

ಕೋಳಿ ಮೊಟ್ಟೆ ತಿನ್ನೋದು ಕಷ್ಟ

12:15 PM Nov 21, 2017 | |

ಬೆಂಗಳೂರು: ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕುಕ್ಕುಟೋದ್ಯಮದಲ್ಲೂ ಮೊಟ್ಟೆ ದರ ಗಗನಕ್ಕೇರುತ್ತಿದೆ. ತರಕಾರಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಟೊಮ್ಯಾಟೋ ಬೆಲೆ 55 ರಿಂದ 60 ರೂ.ಗೆ ಏರಿಕೆಯಾಗಿದ್ದು, ಬೀನ್ಸ್‌ 120ರೂ., ಮೂಲಂಗಿ 75ರಿಂದ 80 ರೂ.ಆಗಿದೆ. ಹೀಗೆಯೇ ವಿವಿಧ ತರಕಾರಿ ಬೆಲೆಯೂ ಮುಗಿಲುಮುಟ್ಟುತ್ತಿದೆ.

Advertisement

ಈ ಹಿನ್ನೆಲೆಯಲ್ಲಿ ಮಾಂಸಹಾರದ ಕಡೆಗೆ ಗ್ರಾಹಕರು ಹೆಚ್ಚು ಒಲವು ತೋರುತ್ತಿದ್ದು, ಮೊಟ್ಟೆ ಖರೀದಿ ಜಾಸ್ತಿ ಮಾಡಿದ್ದಾರೆ. ಇದರಿಂದ ನವೆಂಬರ್‌ ಮೊದಲವಾರದಲ್ಲಿ ಒಂದು ಡಜನ್‌ ಮೊಟ್ಟೆಗೆ ಕೇವಲ 56 ರೂ. ಇದ್ದ ದರ ಇಂದು 80 ರೂ.ತಲುಪಿದೆ. ಚಳಿಗಾಲದ ಸಂದರ್ಭದಲ್ಲಿ ಮೊಟ್ಟೆಗೆ ಬೇಡಿಕೆ ಹೆಚ್ಚುತ್ತದೆ.

ಆದರೆ, ಈ ಬಾರಿ ಒಂದು ಮೊಟ್ಟೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ 6.50ರಿಂದ 7 ರೂ.ವರೆಗೆ ಬೆಲೆ ಸಿಕ್ಕಿರುವುದು ಇದೇ ಮೊದಲು ಎನ್ನುತ್ತಾರೆ ಮೊಟ್ಟೆ ಮಾರಾಟಗಾರ ಗಜೇಂದ್ರಸ್ವಾಮಿ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 75ರಿಂದ 80 ಲಕ್ಷ ಮೊಟ್ಟೆಗಳು ಮಾರಾಟವಾಗುತ್ತವೆ. ಆದರೆ ಚಳಿಗಾಲದ ಸಂದರ್ಭದಲ್ಲಿ ಅಂದರೆ ನವೆಂಬರ್‌-ಡಿಸೆಂಬರ್‌ ವೇಳೆಯಲ್ಲಿ ಈ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ.

ಇದೀಗ ಬೆಂಗಳೂರು ಒಂದರಲ್ಲಿಯೇ ಪ್ರತಿ ದಿನಕ್ಕೆ ಸುಮಾರು 85ರಿಂದ 1 ಕೋಟಿಯಷ್ಟು ಮೊಟ್ಟೆಗಳು ಬಿಕರಿಯಾಗುತ್ತವೆ. ಇಡೀ ರಾಜ್ಯದಲ್ಲಿ ಮೊಟ್ಟೆಗೆ ಅತೀ ಹೆಚ್ಚು ಬೇಡಿಕೆ ಇರುವುದು ಬೆಂಗಳೂರಿನಲ್ಲಿಯೇ. ಆದ್ದರಿಂದ ತಮಿಳುನಾಡಿನ ನಾಮಕ್ಕಲ್‌ ಸೇರಿದಂತೆ ರಾಜ್ಯದ ಹೊಸಪೇಟೆ, ಮೈಸೂರು, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ವಿವಿಧ ಕಡೆಗಳಿಂದ ಕೋಟ್ಯಂತರ ಮೊಟ್ಟೆಗಳು ಪ್ರತಿ ದಿನವೂ ಸರಬರಾಜಾಗುತ್ತವೆ.

ಕಳೆದೆರಡು ವಾರಗಳ ಹಿಂದೆ ಪ್ರತಿ ಮೊಟ್ಟೆಗೆ 4.50ರಿಂದ 5ರೂ.ಇತ್ತು. ಆದರೆ ಏಕಾಏಕಿ 2ರೂ. ಜಾಸ್ತಿಯಾಗಿದೆ. ಇದರಿಂದಾಗಿ ಪ್ರತಿ ಡಜನ್‌ಗೆ 56ರೂ. ಇದ್ದ ದರ 80ರೂ.ಆಗಿದೆ. ಸಗಟು ಮಾರುಕಟ್ಟೆಯಲ್ಲಿ ಮೊಟ್ಟೆ 5ಕ್ಕೆ 30 ರೂ., 10ಕ್ಕೆ 60ರೂ, 17ಕ್ಕೆ 100 ರೂ. ಇದೆ. 26 ಮೊಟ್ಟೆಗೆ 150 ರೂ.ಇದ್ದರೆ, 32ಕ್ಕೆ 180 ರೂ., 52ಕ್ಕೆ 290 ರೂ. ಮತ್ತು 62ಕ್ಕೆ 350 ರೂ.ಇದೆ. 100 ಮೊಟ್ಟೆಗಳಿಗೆ 550ರೂ.ನಂತೆ ಮಾರಾಟ ಮಾಡಲಾಗುತ್ತಿದೆ ಎಂದು ಬೆಂಗಳೂರು ಎಗ್‌ ಸೆಂಟರ್‌ ಮಾಲೀಕರಾದ ಹೇಮಾ ಪ್ರಕಾಶ್‌ ಮಾಹಿತಿ ನೀಡಿದ್ದಾರೆ. 

Advertisement

ಎರಡು ತಿಂಗಳು ಇದೇ ದರ: ನ್ಯಾಷನಲ್‌ ಎಗ್‌ ಕೋಆರ್ಡಿನೇಷನ್‌ ಕಮಿಟಿ ಮೊಟ್ಟೆಗಳ ದರವನ್ನು ನಿಗದಿಪಡಿಸುತ್ತದೆ. ನ.1ರಹಿಂದೆ ನೂರು ಮೊಟ್ಟೆಗೆ 385 ಇತ್ತು, ಈಗ ಅದು 550 ರೂ.ಆಗಿದೆ. ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಚಳಿಗಾಲ ಮುಗಿಯುವವರೆಗೂ ಇದೇ ಬೆಲೆ ಇರುವುದರಿಂದ ಸದ್ಯಕ್ಕೆ ಮೊಟ್ಟೆ ಬೆಲೆ ಕೂಡ ಇಳಿಕೆಯಾಗುವ ಸಾಧ್ಯತೆ ಕಡಿಮೆ. 

ಆದ್ದರಿಂದ ಮುಂದಿನ ಎರಡು ತಿಂಗಳು ಪ್ರಸ್ತುತ ಇರುವ ಬೆಲೆಯೇ ಮುಂದುವರೆಯುವ ಸಾಧ್ಯತೆ ಇದೆ ಎಂದು ಮೊಟ್ಟೆಮಾರಾಟಗಾರರು ತಿಳಿಸಿದ್ದಾರೆ. 
ಚಳಿಗಾಲದ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ಚಿಕನ್‌ ಮತ್ತು ಮೊಟ್ಟೆ ಬಳಸುವ ಪ್ರಮಾಣದಲ್ಲಿ ಏರಿಕೆಯಾಗುವುದರಿಂದ ಮೊಟ್ಟೆ ಸರಬರಾಜು ಅಲ್ಲಿಗೆ ಈ ಸಂದರ್ಭದಲ್ಲಿ ಹೆಚ್ಚಾಗಿರುತ್ತದೆ.

ಗ್ರಾಹಕರು ಕಡಿಮೆಯಾಗಿಲ್ಲ: ಮೊಟ್ಟೆ ಬೆಲೆ ಏರಿಕೆಯಾಗಿದ್ದರೂ ಗ್ರಾಹಕರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ಹಿಂದಿಗಿಂತಲೂ ಕಳೆದ ಒಂದು ತಿಂಗಳಿಂದ ಮೊಟ್ಟೆ ವ್ಯಾಪಾರದಲ್ಲಿ ಶೇ.20ರಷ್ಟು ಏರಿಕೆಯಾಗಿದೆ. ಮೊಟ್ಟೆ ಬೆಲೆ ಜಾಸ್ತಿಯಾಗಬಹುದು ಎಂದು ಅರ್ಧ ಡಜನ್‌ ಮೊಟ್ಟೆ ಖರೀದಿ ಮಾಡುತ್ತಿದ್ದವರು, ಈಗ ಒಂದು ಡಜನ್‌ ಖರೀದಿಸುತ್ತಿದ್ದಾರೆ. ತರಕಾರಿಗಿಂತ ಮೊಟ್ಟೆ ಬೆಲೆ ಶೇ.100ರಷ್ಟು ಕಡಿಮೆ ಇರುವುದರಿಂದ ವ್ಯಾಪಾರ ಉತ್ತಮವಾಗಿದೆ ಎನ್ನುತ್ತಾರೆ ಕಳೆದ 20 ವರ್ಷಗಳಿಂದ ಕೋಳಿ ಮತ್ತು ಮೊಟ್ಟೆ ಮಾರಾಟ ಮಾಡುತ್ತಿರುವ ದೇವರಾಜ್‌.

ಚಿಕ್ಕನ್‌ ಖರೀದಿಗೆ ಬರುವವರು ಕೆಲವು ಸಂದರ್ಭದಲ್ಲಿ ಒಂದು ಡಜನ್‌ ಮೊಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಚಿಲ್ಲರೆ ವ್ಯಾಪಾರಕ್ಕಿಂತ ಗ್ರಾಹಕರನ್ನು ಹೆಚ್ಚಾಗಿ ಸೆಳೆಯುವ ಉದ್ದೇಶದಿಂದ ಐದತ್ತು ರೂಪಾಯಿಗಳನ್ನು ಕಡಿಮೆಯೇ ತೆಗೆದುಕೊಳ್ಳುತ್ತೇನೆ. ಅದು ನಮ್ಮ ಗ್ರಾಹಕರಿಗೂ ಸಂತೋಟ ಮತ್ತು ನನಗೂ ಗಿರಾಟಿಯೊಬ್ಬರು ಹೆಚ್ಚಿದಂತಾಗುತ್ತದೆ ಎಂಬುದು ಕೋಳಿ ವ್ಯಾಪಾರಿ ಶಕ್ತಿವೇಲು ಹೇಳಿಕೆ. 

ಪ್ರತಿದಿನ ಮೊಟ್ಟೆಗಳನ್ನು ಖರೀದಿ ಮಾಡುತ್ತೇನೆ. ಆದರೆ, ಏಕಾಏಕಿ ಈಗ ಬೆಲೆ ಹೆಚ್ಚಿಸಲಾಗಿದೆ. ತರಕಾರಿಗೆ ಹೋಲಿಕೆ ಮಾಡಿದರೆ ಇದು ಜಾಸ್ತಿಯಲ್ಲ ನಿಜ. ಆದರೂ ಒಂದು ಮೊಟ್ಟೆಗೆ 2 ರೂ.ನಷ್ಟು ಜಾಸ್ತಿ ಮಾಡಿದ್ದು ಅನ್ಯಾಯ. 100 ಮೊಟ್ಟೆಗೆ ಬರೋಬರಿ 150ರೂ.ಗಿಂತ ಹೆಚ್ಚು ವಸೂಲಿ ಮಾಡಲಾಗುತ್ತಿದೆ.
-ಜಾನ್‌, ಗ್ರಾಹಕ, ಚಂದ್ರಾಲೇಔಟ್‌.

ಸಾಮಾನ್ಯವಾಗಿ ಚಳಿಗಾಲದ ಸಮಯದಲ್ಲಿ ಮೊಟ್ಟೆ ಹೆಚ್ಚಾಗುತ್ತದೆ. ಇದೀಗ 100 ಮೊಟ್ಟೆಗೆ 550 ರೂ.ಇದ್ದು, ಒಂದೆರಡು ತಿಂಗಳು ಇದೇ ಬೆಲೆ ಇರಲಿದೆ.
-ಹೇಮಾ ಪ್ರಕಾಶ್‌, ಮಾಲೀಕರು, ಬೆಂಗಳೂರು ಎಗ್‌ ಸೆಂಟರ್‌.

Advertisement

Udayavani is now on Telegram. Click here to join our channel and stay updated with the latest news.

Next