ಚಿಂಚೋಳಿ: ಮೀಸಲು ಚಿಂಚೋಳಿ ವಿಧಾನಸಭೆ ಮತಕ್ಷೇತ್ರಕ್ಕೆ ಮೇ 19 ರಂದು ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಉಪ ಚುನಾವಣೆಯಲ್ಲಿ ನಮ್ಮ ಪಕ್ಷ ಗೆದ್ದರೆ ತಾಲೂಕಿನಲ್ಲಿ ಹೊಸದಾಗಿ, ಇಲ್ಲವೇ ನನೆಗುದಿಗೆ ಬಿದ್ದಿರುವ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲಾಗುವುದು ಎನ್ನುವ ಭರವಸೆಗಳ ಸುರಿಮಳೆಯನ್ನೇ ಸುರಿಸಿದ್ದರಿಂದ ಇಲ್ಲಿನ ಕಬ್ಬು ಬೆಳೆಗಾರ ಮೊಗದಲ್ಲಿ ಆಸೆ ಚಿಗುರೊಡಿದೆ.
Advertisement
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚುನಾವಣೆ ಸಂದರ್ಭದಲ್ಲಿ ಹಿಂದುಳಿದ ಭಾಗದಲ್ಲಿ ಸಕ್ಕರೆ ಕಾರಖಾನೆ ಪ್ರಾರಂಭಿಸಲು ಎಲ್ಲ ಅನುಕೂಲತೆ ಮಾಡಿಕೊಡುತ್ತೇನೆ. ಮೂಲ ಸೌಕರ್ಯ ಒದಗಿಸಲು ಚಿಂಚೋಳಿ ತಾಲೂಕನ್ನು ದತ್ತು ತೆಗೆದುಕೊಳ್ಳುತ್ತೇನೆ ಎನ್ನುವ ಭರವಸೆ ನೀಡಿದ್ದರು. ಬೀದರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆಪಿಸಿಸಿ (ಐ) ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಚುನಾವಣೆ ನಂತರ ಹೊಸದಾಗಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಭರವಸೆಯನ್ನು ರೈತರಿಗೆ ನೀಡಿದ್ದರು. ಆದರೆ ಬೀದರ ಲೋಕಸಭೆ ಮತ್ತು ಚಿಂಚೋಳಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಭಾಶ ರಾಠೊಡ ಪರಾಜಯ ಆಗಿದ್ದರಿಂದ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಈ ಕುರಿತು ಬೇಡಿಕೆ ಇಡಲು ಸಾಧ್ಯವಿಲ್ಲ ಎನ್ನುವ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಆರಂಭವಾಗಿದೆ. ಪಟ್ಟಣ ಹೊರ ವಲಯದ ಚಿಂಚೋಳಿ-ಕಲಬುರಗಿ ರಾಜ್ಯ ಹೆದ್ದಾರಿಯಲ್ಲಿ ಕಳೆದ ಎರಡು ದಶಕಗಳಿಂದ ನನೆಗುದಿಗೆ ಬಿದ್ದಿರುವ ಚಿಂಚೋಳಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಬೇಕಾಗುವ ನೆರವು, ಸಹಕಾರ ನೀಡಲಾಗುವುದು. ಇಲ್ಲವೇ ಹೊಸ ಕಾರ್ಖಾನೆ ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಮಾಜಿ ಸಚಿವ ಬಸವನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದ್ದರು. ಅಲ್ಲದೇ ಬಿಜೆಪಿಯ ಅಭ್ಯರ್ಥಿಗಳಾಗಿದ್ದ ಡಾ| ಉಮೇಶ ಜಾಧವ, ಡಾ| ಅವಿನಾಶ ಜಾಧವ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ಬಿಜೆಪಿ ಅಭ್ಯರ್ಥಿ ಡಾ| ಅವಿನಾಶ ಜಾಧವ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರಿಂದ ಚಿಂಚೋಳಿಯಲ್ಲಿ ನನೆಗುದಿಗೆ ಬಿದ್ದ ಸಕ್ಕರೆ ಕಾರ್ಖಾನೆ ಪ್ರಾರಂಭವಾಗುವುದೇ ಇಲ್ಲವೇ ನೂತನ ಕಾರ್ಖಾನೆ ಆರಂಭವಾಗುವುದೇ ಎನ್ನುವ ಕುತೂಹಲ ರೈತರಲ್ಲಿ ಮನೆಮಾಡಿದೆ.