Advertisement

ಜನ-ಜಾನುವಾರಿಗೆ ಆಸರೆ ಮುಲ್ಲಾಮಾರಿ ನೀರು

09:59 AM May 27, 2019 | Team Udayavani |

ಶಾಮರಾವ ಚಿಂಚೋಳಿ
ಚಿಂಚೋಳಿ:
ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಪ್ರಸಕ್ತ ಸಾಲಿನಲ್ಲಿ ಬೇಸಿಗೆ ಕಾಲದಲ್ಲಿ ನೀರನ್ನು ಹರಿ ಬಿಡಲಾಗುತ್ತಿರುವುದರಿಂದ ಜನ-ಜಾನುವಾರುಗಳ ನೀರಿನ ದಾಹ ತೀರುತ್ತಿದೆ.

Advertisement

ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಮಳೆ ಅಭಾವದಿಂದಾಗಿ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಲೇ ಇದೆ. 2017-18ರಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಆಗಿರುವುದರಿಂದ ಮುಲ್ಲಾಮಾರಿ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಆಗಿದೆ. ಆದರೆ ಕೆಳದಂಡೆ ಮುಲ್ಲಾಮಾರಿ ಯೋಜನೆ ಮುಖ್ಯ ಕಾಲುವೆಯನ್ನು 120 ಕೋಟಿ ರೂ.ಗಳಲ್ಲಿ ಆಧುನಿಕರಣಗೊಳಿಸುವ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಕಳೆದ ಎರಡು ವರ್ಷಗಳಿಂದ ಬೆಳೆಗಳಿಗೆ ನೀರು ಹರಿದು ಬಿಡಲಾರದ ಕಾರಣ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹಣೆ ಕಾಯ್ದುಕೊಳ್ಳಲಾಗಿದೆ.

ಮೂರು ವರ್ಷಗಳಿಂದ ಬರಗಾಲ ಛಾಯೆ ತಾಲೂಕಿನಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ದನಕರುಗಳಿಗೆ, ಜನರಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಅಲ್ಲದೇ ಅಂರ್ತಜಲಮಟ್ಟ ದಿನೇ ದಿನೇ ಕುಸಿಯುತ್ತಿರುವುದರಿಂದ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಅತಿಯಾಗಿತ್ತು. ಆದರೆ ಮುಲ್ಲಾಮಾರಿ ಜಲಾಶಯದಿಂದ ಮಾರ್ಚ್‌, ಏಪ್ರಿಲ್, ಮೇ ತಿಂಗಳಲ್ಲಿ ಆಗಾಗ ನದಿಗೆ ನೀರು ಹರಿದು ಬಿಟ್ಟಿದ್ದರಿಂದ ಜನ-ಜಾನುವಾರುಗಳಿಗೆ ಆಸರೆಯಾಗಿದೆ. ಮುಲ್ಲಾಮಾರಿ ಜಲಾಶಯದ ಕೆಳಭಾಗದಲ್ಲಿ ಇರುವ ಗ್ರಾಮಗಳಾದ ಚಿಮ್ಮನಚೋಡ, ತಾಜಲಾಪುರ, ಕನಕಪುರ, ಗಾರಂಪಳ್ಳಿ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಿಂಚೋಳಿ ಪಟ್ಟಣ, ಅಣವಾರ, ಪರದಾರ ಮೋತಕಪಳ್ಳಿ, ಗಂಗನಪಳ್ಳಿ, ಗರಗಪಳ್ಳಿ, ಭಕ್ತಂಪಳ್ಳಿ, ಬುರುಗಪಳ್ಳಿ, ಇರಗಪಳ್ಳಿ, ಕರಚಖೇಡ, ಜಟ್ಟೂರ, ಹಲಕೋಡಾ, ಪೋತಂಗಲ್ ಗ್ರಾಮಸ್ಥರಿಗೆ ಕುಡಿಯುವ ನೀರಿನ ಅನುಕೂಲವಾಗಿದೆ.

ಸೇಡಂ ತಾಲೂಕಿನ ಹಾಬಾಳ (ಟಿ), ಲಾವಾಡಿ, ಸಂಗಾವಿ, ಸಟಪಟನಹಳ್ಳಿ, ಮೀನ ಹಾಬಾಳ, ತೇಲ್ಕೂರ, ಕುಕ್ಕುಂದಾ ಗ್ರಾಮಗಳಿಗೆ ಮುಲ್ಲಾಮಾರಿ ನದಿ ನೀರು ಆಸರೆ ಆಗಿದೆ. ತಾಲೂಕಿನ ಕೊಟಗಾ, ಕನಕಪುರ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಂದಾಪುರ, ಗರಗಪಳ್ಳಿ ಗ್ರಾಮಗಳ ಹತ್ತಿರ ಬ್ಯಾರೇಜ್‌ ನಿರ್ಮಿಸಲಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಇದರಿಂದಾಗಿ ತೋಟಗಾರಿಕೆ ಬೆಳೆಗಳಾದ ಬಾಳೆ, ಕಬ್ಬು ಮತ್ತು ತರಕಾರಿ ಬೆಳೆಗಳಿಗೆ ನೀರಿನ ಪ್ರಯೋಜನ ಆಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next