ಚಿಂಚೋಳಿ: ಹೈದ್ರಾಬಾದ ಕರ್ನಾಟಕ ಪ್ರದೇಶದ ಏಕೈಕ ಮಿನಿ ಮಲೆನಾಡು ಪ್ರದೇಶವೆಂದು ಪ್ರಸಿದ್ಧಿ ಪಡೆದಿರುವ ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಮಳೆ ಅಭಾವ, ಬಿಸಿಲಿನ ತಾಪದ ಪ್ರಖತೆಯಿಂದಾಗಿ ಅರಣ್ಯದಲ್ಲಿನ ಗಿಡಮರಗಳು ಒಣಗಿ ನಿಂತಿವೆ.
ತಾಲೂಕು ಸತತವಾಗಿ ಕಳೆದ ಮೂರು ವರ್ಷಗಳಿಂದ ಮಳೆ ಅಭಾವ ಮತ್ತು ಬರಗಾಲಕ್ಕೆ ತುತ್ತಾಗಿರುವುದರಿಂದ ಕುಂಚಾವರಂ ಅರಣ್ಯಪ್ರದೇಶ ಬರಡಾಗಿದೆ. ಕುಂಚಾವರಂ ಅರಣ್ಯದಲ್ಲಿ ಬೆಳೆದಿರುವ ಸಾಗವಾನಿ, ತೇಗು, ಶ್ರೀಗಂಧ, ಬಿಟಲಿ, ಹುಣಸೆ ಮರ, ಸೀತಾಫಲ ಗಿಡ, ಸಿರಂಜಿ ಮರಗಳು ಬಿಸಿಲಿನ ತಾಪದಿಂದ ಒಣಗಿವೆ.
ಪ್ರತಿ ವರ್ಷ ಅಲ್ಪಸ್ವಲ್ಪ ಅರಣ್ಯಪ್ರದೇಶದಲ್ಲಿ ಮಳೆ ಆಗುತ್ತಿರುವುದರಿಂದ ಕಾಡಿನಲ್ಲಿರುವ ಹಣ್ಣಿನ ಮರಗಳು ಫಲ ನೀಡುತ್ತಿದ್ದವು. ಆದರೆ ಈ ವರ್ಷ ನೀರಿಲ್ಲದ ಕಾರಣ ಹಣ್ಣಿನ ಮರಗಳು ಫಲ ನೀಡಿಲ್ಲ. ಕಾಡು ಪ್ರಾಣಿಗಳಿಗೆ ತಿನ್ನಲು ಆಹಾರ ಸಿಗದ ಕಾರಣ ಕಾಡಿನಲ್ಲಿ ಇರುವ ಕಾಡು ಪ್ರಾಣಿಗಳ ಸ್ಥಿತಿಯನ್ನು ಆ ದೇವರೇ ಬಲ್ಲ ಎನ್ನುವಂತಾಗಿದೆ. ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶ ಒಟ್ಟು 45ಸಾವಿರ ಹೆಕ್ಟೇರ್ ಪ್ರದೇಶ ಹೊಂದಿರುವುದರಿಂದ ಭೋಗಾಲಿಂಗದಳ್ಳಿ, ಸೇರಿಭಿಕನಳ್ಳಿ, ಚಿಕ್ಕನಿಂಗದಳ್ಳಿ, ಸೋಮಲಿಂಗದಳ್ಳಿ, ಭೈರಂಪಳ್ಳಿ, ಐನೋಳಿ, ಕೊಳ್ಳೂರ, ಚಂದ್ರಂಪಳ್ಳಿ, ಕುಸರಂಪಳ್ಳಿ,ಧರ್ಮಸಾಗರ, ವಂಟಿಚಿಂತಾ, ಅಂತಾವರಂ, ವೆಂಕಟಾಪುರ, ಸಂಗಾಪುರ, ಕುಸರಂಪಳ್ಳಿ ಗ್ರಾಮಗಳಿಗೆ ಹೊಂದಿಕೊಂಡಿರುವ ಅರಣ್ಯದಲ್ಲಿ ಬರೀ ಮರದ ಟೊಂಗೆಗಳು ಮಾತ್ರ ಕಾಣಿಸುತ್ತಿವೆ. ವನ್ಯಜೀವಿಧಾಮ ಅರಣ್ಯದಲ್ಲಿ ಇರುವ ಕಾಡು ಪ್ರಾಣಿಗಳಿಗೆ ನೀರು ಕುಡಿಯಲು ಜೀವಜಲವಾಗಿದ್ದ ಚಂದ್ರಂಪಳ್ಳಿ ಜಲಾಶಯ ಬತ್ತಿ ಹೋಗುತ್ತಿದೆ. ಚಿಕ್ಕನಿಂಗದಳ್ಳಿ, ಧರ್ಮಸಾಗರ, ಅಂತಾವರಂ, ವೆಂಕಟಾಪುರ ಕೆರೆಗಳು ಸಂಪೂರ್ಣ ಒಣಗಿವೆ. ಇಂತಹ ಭೀಕರ ಬರ ಪರಸ್ಥಿತಿ ಕುಂಚಾವರಂ ಅರಣ್ಯದಲ್ಲಿ ಕಾಣಬಹುದಾಗಿದೆ.
ಕುಂಚಾವರಂ ವನ್ಯಜೀವಿಧಾಮದಲ್ಲಿ ಇರುವ ಐತಿಹಾಸಿಕ ಶ್ರೀ ಗಂಗಾಧರ ಬಕ್ಕಪ್ರಭು ದೇವಾಲಯ ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಈಗ ದೇವಾಲಯದ ಸುತ್ತಲೂ ಬೆಳೆದಿರುವ ಮರಗಳು ಒಣಗಿವೆ. ಪ್ರವಾಸಿಗರಿಗೆ ನೆರಳು ಇಲ್ಲದಂತಾಗಿದೆ. ಪ್ರತಿ ಹುಣ್ಣಿಮೆ, ಅಮಾವ್ಯಾಸೆ ದಿವಸ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಅರಣ್ಯ ಇಲಾಖೆಯಿಂದ ಒಂದು ಕೋಟಿ ರೂ.ಗಳಲ್ಲಿ ನಿರ್ಮಿಸಿದ ದೈವ ವನದಲ್ಲಿ ಬೆಳೆದಿರುವ ಮರಗಳು ಒಣಗಿವೆ. ಇಂತಹ ಸುಂದರ ರಮಣೀಯ ಪ್ರದೇಶ ಬರಗಾಲಕ್ಕೆ ತುತ್ತಾಗಿದೆ ಎನ್ನುತ್ತಾರೆ ಸಮಾಜ ಸೇವಕ ಗೋಪಾಲರೆಡ್ಡಿ ಕೊಳ್ಳೂರ. ಕುಂಚಾವರಂ ವನ್ಯಜೀವಿ ಧಾಮದಲ್ಲಿ ಮಳೆಯಾದರೆ ಮಾತ್ರ ಗಿಡ ಮರಗಳು ಚಿಗುರುತ್ತವೆ. ಕಾಡು ಪ್ರಾಣಿಗಳಿಗೆ ತಿನ್ನಲು ಆಹಾರ ಸಿಗುತ್ತದೆ. ಕುಡಿಯಲು ನೀರು ಸಿಗುತ್ತದೆ. ಮಳೆ ಕೃಪೆ ಕಾಡು ಪ್ರಾಣಿಗಳ ಮೇಲಿರಲಿ ಎನ್ನುತ್ತಾರೆ ಪರಿಸರ ಪ್ರೇಮಿ ಶಿಕಾರ ಮೋತಕಪಳ್ಳಿ ನಾಗಶೆಟ್ಟಿ ಪಾಟೀಲ.