ಚಿಂಚೋಳಿ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಗುಡುಗು-ಮಿಂಚು ಸಮೇತ ಸುರಿಯುತ್ತಿರುವ ಮಳೆಯಿಂದಾಗಿ ಹೈಬ್ರಿಡ್ ಜೋಳ ನೆಲಕ್ಕುರುಳಿದ್ದು, ಮೆಕ್ಕೆಜೋಳದ ತೆನೆಗಳು ಒಡೆದು ಹೋಗಿ, ಅಪಾರ ಹಾನಿ ಉಂಟಾಗಿದೆ.
ತಾಲೂಕಿನ ಗಡಿಗ್ರಾಮ ಕುಸರಂಪಳ್ಳಿ ಗ್ರಾಮದ ಸುತ್ತಮುತ್ತ ಶುಕ್ರವಾರ ಸಂಜೆ ಬಿರುಗಾಳಿ ಸಮೇತ ಮಳೆ ಸುರಿದ ಪರಿಣಾಮವಾಗಿ ಅನೇಕ ರೈತರ ಹೊಲದಲ್ಲಿ ಬೆಳೆದು ನಿಂತಿರುವ ಹೈಬ್ರಿಡ್ ಜೋಳದ ತೆನೆಗಳು ಹಾಳಾಗಿವೆ. ಅಲ್ಲದೇ ತೆನೆ ಕಟ್ಟುವ ಹಂತದಲ್ಲಿದ್ದ ಜೋಳ ಮಳೆ ರಭಸಕ್ಕೆ ಹಾನಿಗೊಳಗಾಗಿವೆ.
ಚಿಮ್ಮನಚೋಡ, ಸಲಗರ ಬಸಂತಪುರ, ರಾಣಾಪುರ, ಚಂದನಕೇರಾ, ಚೆಂಗಟಾ, ಗಡಿಲಿಂಗದಳ್ಳಿ, ಐನಾಪುರ, ಭುಯ್ನಾರ(ಕೆ), ಸಾಲೇಬೀರನಳ್ಳಿ, ತುಮಕುಂಟಾ, ಹಸರಗುಂಡಗಿ, ತಾಜಲಾಪುರ, ಪಾಲತ್ತಾ ತಾಂಡಾ, ಬೆನಕೆಪಳ್ಳಿ ಹಾಗೂ ಇನ್ನಿತರ ತಾಂಡಾಗಳಲ್ಲಿ ರೈತರು ಹೈಬ್ರಿಡ್ ಜೋಳ ಬಿತ್ತನೆ ಮಾಡಿದ್ದಾರೆ. ತುರುಸಿನ ಮಳೆಯಿಂದಾಗಿ ಈ ಬೆಳೆಯೆಲ್ಲ ನೆಲಕಚ್ಚಿವೆ ರೈತ ಪ್ರಭುಲಿಂಗ ಲೇವಡಿ ತಿಳಿಸಿದ್ದಾರೆ.
ಕುಂಚಾವರಂ ಗಡಿಯಲ್ಲಿ ಅಪಾರ ಪ್ರಮಾಣದಲ್ಲಿ ಮೆಕ್ಕಜೋಳ ಬೆಳೆಯಲಾಗಿದೆ. ಪದೆ-ಪದೇ ಮಳೆ ಆಗುತ್ತಿರುವುದರಿಂದ ಸಂಗಾಪುರ, ವೆಂಕಟಾಪುರ, ಲಚಮಾಸಾಗರ, ಶಾದೀಪುರ, ಜಿಲವರ್ಷ, ಪೆದ್ದಾತಾಂಡಾ, ವಂಟಿಚಿಂತಾ,ಧರ್ಮಸಾಗರ, ಬೋನಸಪುರ ಗ್ರಾಮಗಳಲ್ಲಿ ಮೆಕ್ಕಜೋಳ ತೆನೆಗಳು ಹಾಳಾಗಿದೆ.
ತಾಲೂಕಿನಲ್ಲಿ ಮಳೆ ಸಾಧಾರಣವಾಗಿ ಆಗುತ್ತಿರುವುದರಿಂದ ಉದ್ದಿನ ರಾಶಿಗೆ ತೊಂದರೆ ಆಗುತ್ತಿದೆ. ಅಲ್ಲದೇ ಈಗಾಗಲೇ ಕೆಲವು ತಾಂಡಾ, ಗ್ರಾಮಗಳಲ್ಲಿ ಹಿಂಗಾರು ಹಂಗಾಮಿನ ಕಡಲೆ ಬಿತ್ತನೆಗೆ ಮಳೆ ಅಡ್ಡಿಯಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ.