Advertisement

ಕಾಮಗಾರಿ ನನೆಗುದಿಗೆ: ಅಧಿಕಾರಿಗಳ ನಿರ್ಲಕ್ಷ್ಯ

10:06 AM Jul 08, 2019 | Naveen |

ಚಿಂಚೋಳಿ: ತಾಲೂಕಿನ ತೆಲಂಗಾಣ ಗಡಿಭಾಗದ ಲಚಮಾಸಾಗರ-ಶಿವರೆಡ್ಡಿಪಳ್ಳಿ ಗ್ರಾಮಗಳಿಗೆ ರಸ್ತೆ ಡಾಂಬರೀಕರಣ ಮತ್ತು ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿರುವುದರಿಂದ ಗ್ರಾಮಸ್ಥರಿಗೆ ತೊಂದರೆ ಉಂಟಾಗುತ್ತಿದ್ದರೂ ಗುತ್ತಿಗೆದಾರ ಮತ್ತು ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಕುಂಚಾವರಂ ತಾಪಂ ಸದಸ್ಯ ಚಿರಂಜೀವಿ ಶಿವರಾಮಪುರ ದೂರಿದ್ದಾರೆ.

Advertisement

ಲಚಮಾಸಾಗರ-ಶಿವರೆಡ್ಡಿಪಳ್ಳಿ ಗ್ರಾಮಗಳಿಗೆ ರಸ್ತೆ ಸಂಪರ್ಕ ಮತ್ತು ಸೇತುವೆ ನಿರ್ಮಿಸಿ ಕೊಡುವುದಕ್ಕಾಗಿ ಲೋಕೋಪಯೋಗಿ ಇಲಾಖೆ, ಎಚ್.ಕೆ.ಆರ್‌.ಡಿ.ಬಿ ವತಿಯಿಂದ 2018-19ನೇ ಸಾಲಿನಲ್ಲಿ 60 ಲಕ್ಷ ರೂ.ಮಂಜೂರಿ ಆಗಿದೆ. ಆದರೆ ಗುತ್ತಿಗೆದಾರರನು ಟೆಂಡರ್‌ ಪ್ರಕ್ರಿಯೆ ನಡೆಯುತ್ತಿರುವಾಗಲೇ ತರಾತುರಿಯಲ್ಲಿ ಕಾಮಗಾರಿ ಪ್ರಾರಂಭಿಸುವುದಕ್ಕಾಗಿ ಹಳೆ ಸೇತುವೆಯನ್ನು ಜೆಸಿಬಿ ಯಂತ್ರದಿಂದ ಕಿತ್ತು ಹಾಕಿರುವುದರಿಂದ ಬೇರೆ ಕಡೆ ಜನರಿಗೆ ಹೋಗಿ ಬರಲು ಹಾಗೂ ಸಣ್ಣಪುಟ್ಟ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಅಲ್ಲದೇ 700 ಮೀಟರ್‌ ರಸ್ತೆ ಡಾಂಬರೀಕರಣ ಕಾಮಗಾರಿ ನನೆಗುದಿಗೆ ಬಿದ್ದಿರುವುದರಿಂದ ಜನರು ತೊಂದರೆ ಪಡಬೇಕಾಗಿದೆ.

ಶಿವರೆಡ್ಡಿಪಳ್ಳಿ-ಲಚಮಾಸಾಗರ ಗ್ರಾಮಗಳು ಅತ್ಯಂತ ಕುಗ್ರಾಮಗಳಾಗಿವೆ. ಹೀಗಾಗಿ ಗ್ರಾಮಸ್ಥರಿಗೆ ರಸ್ತೆ ಸಂಪರ್ಕ ಮತ್ತು ಸೇತುವೆ ನಿರ್ಮಿಸಿಕೊಡಲು ಸಾಕಷ್ಟು ಪ್ರಯತ್ನ ಮಾಡಲಾಗಿತ್ತು. ಈಗ ಮಂಜೂರಿ ಆಗಿರುವ ಕಾಮಗಾರಿಯ ಟೆಂಡರ್‌ ಪಡೆದುಕೊಂಡಿರುವ ಬೀದರ ಮೂಲದ ಪ್ರಥಮ ದರ್ಜೆ ಗುತ್ತಿಗೆದಾರ ಜಗದೀಶ ಖುಬಾ ಎನ್ನುವರು ಪೋಚಾವರಂ ಗ್ರಾಮದ ಉಪ ಗುತ್ತಿಗೆದಾರನಿಗೆ ಕಾಮಗಾರಿ ವಹಿಸಿಕೊಟ್ಟಿರುವುದರಿಂದ ಕಳೆದ ಎರಡು ತಿಂಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ತಿಳಿಸಿದ್ದಾರೆ.

ಶಿವರೆಡ್ಡಿ-ಲಚಮಾಸಾಗರ ಮಧ್ಯೆ ಸೇತುವೆ ಇಲ್ಲದ ಕಾರಣ ಜನರು ವೃದ್ಧರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ರೋಗಿಗಳು ನೀರಿನಲ್ಲಿ ದಾಟಿ ಹೋಗಬೇಕಾಗಿದೆ. ಮಳೆಗಾಲ ಇರುವುದರಿಂದ ಹೆಚ್ಚಿನ ಮಳೆ ನೀರು ಹಳ್ಳಕ್ಕೆ ಹರಿದು ಬಂದರೆ ರಸ್ತೆ ಸಂಪರ್ಕ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಕಾಮಗಾರಿ ಪ್ರಾರಂಭಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಕಾಮಗಾರಿಯಲ್ಲಿ ರಾಜಕೀಯ: ಶಿವರೆಡ್ಡಿಪಳ್ಳಿ-ಲಚಮಾಸಾಗರ ರಸ್ತೆ ಮತ್ತು ಸೇತುವೆ ಕಾಮಗಾರಿ ನಡೆಸಲು ಸ್ಥಳೀಯ ಪೋಚಾವರಂ ಗ್ರಾಮದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತ ರೊಬ್ಬರಿಗೆ ವಹಿಸಿಕೊಡಲಾಗಿತ್ತು. ಆದರೆ ಕಳೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಪರವಾಗಿ ಕೆಲಸ ಮಾಡದೇ ಇರುವುದರಿಂದ ಕಾಮಗಾರಿಯನ್ನು ಇದೀಗ ಪೆದ್ದಾ ತಾಂಡಾದ ಬಿಜೆಪಿ ಕಾರ್ಯಕರ್ತನಿಗೆ ವಹಿಸಿ ಕೊಡುವ ವಿಚಾರ ನಡೆದಿರುವುದರಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ ಎನ್ನಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next