ಚಿಕ್ಕಮಗಳೂರು: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ನೇತೃತ್ವವನ್ನು ರೈತರು ವಹಿಸಿಲ್ಲ ಅನ್ನೋದಕ್ಕೆ ಮಂಗಳವಾರ ನಡೆದ ಘಟನೆಯೇ ಸಾಕ್ಷಿಯಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಆರಂಭದಿಂದಲೂ ಪ್ರತಿಭಟನೆಯ ನೇತೃತ್ವವನ್ನು ರೈತರು ವಹಿಸಿಲ್ಲ, ಉಮ್ಮರ್ ಖಾಲಿದ್ ಬಿಡುಗಡೆಗೊಳಿಸುವಂತೆ ದೇಶದ್ರೋಹಿ ಶಕ್ತಿ ನೇತೃತ್ವ ವಹಿಸಿದೆ ಎಂದು ಹೇಳಿದ್ದೆವು. ಅದು ಸಾಬೀತಾಗಿದೆ ಎಂದರು.
ಗಣರಾಜ್ಯೋತ್ಸವದ ದಿನ ಕೆಟ್ಟ ಘಟನೆ ನಡೆದಿದೆ. ದೆಹಲಿ ಕೆಂಪುಕೋಟೆ ಹತ್ತಿದವರು ಯಾರೂ ರೈತರಲ್ಲ. ಕೆನಾಡ ಖಲಿಸ್ತಾನ್ ಮೂಮೆಂಟ್‌ನವರು. ಅವರೇ ರೈತ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಕೆನಾಡದಲ್ಲಿ ಅವಿತುಕೊಂಡು ಇಲ್ಲಿಯ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದರು.
ಉಮ್ಮರ್ ಖಾಲಿದ್‌ಗೆ ಬೆಂಬಲ ಕೊಟ್ಟಿದ್ದವರು ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಭಾರತ ವಿರೋ ಚಟುವಟಿಕೆ ಮಾಡಿದವರನ್ನು ಜೋಡಿಸಿಕೊಳ್ಳಲಾಗಿದೆ. ಜೆಎನ್‌ಯು ವಿವಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರು ಇದರಲ್ಲಿ ಜೋಡಣೆಯಾಗಿದ್ದಾರೆ. ನಾವು ಆರಂಭದಿಂದಲೂ ಹೇಳಿಕೊಂಡು ಬಂದಿದ್ದು,ಇಂದು ಸಾಬಿತಾಗಿದೆ ಎಂದರು.
ನಿಜವಾದ ರೈತರು ಇಂತಹ ಕೃತ್ಯ ನಡೆಸಲು ಸಾಧ್ಯವೇ ಇಲ್ಲ. ರೈತರ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ರೈತರನ್ನು ಕೇಂದ್ರ ಸರ್ಕಾರ ಮಾತುಕತೆಗೆ ಕರೆದಿದ್ದು, ಅದಕ್ಕೆ ಸರ್ಕಾರ ಬದ್ಧವಿದೆ. ದಿಕ್ಕು ತಪ್ಪಿಸುವರು ಇರುತ್ತಾರೆ. ಅದಕ್ಕೆ ನೀವು ಬಲಿಯಾಗ ಬೇಡಿ ಮಾತುಕತೆಗೆ ಬನ್ನಿ ಎಂದು ಮನವಿ ಮಾಡಿದರು.
ಹಿಂದೆ ಈ ಕಾಯ್ದೆಗಳ ಬಗ್ಗೆ ಕಾಂಗ್ರೆಸ್ ಚರ್ಚೆ ಮಾಡಿತ್ತು. ಇಂದು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಆದರೂ ಉಗ್ರ ಹೋರಾಟ ನಡೆಯುತ್ತಿದೆ ಎಂದರೆ ಕಾಣದ ಕೈಗಳ ಪಿತೂರಿ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣ ಸಂದಾಯ ಆಗುತ್ತಿದೆ ಎಂಬುದರ ಬಗ್ಗೆ ಹಾಗೂ ಇದರ ಹಿಂದಿರುವ ಶಕ್ತಿಗಳ ಬಗ್ಗೆ ತನಿಖೆಯಾಗಬೇಕು ಎಂದರು.
ಸಚಿವ ಆರ್.ಅಶೋಕ್ ಆಪ್ತ ಸಹಾಯಕ ಲಂಚಕ್ಕೆ ಬೇಡಿಕೆ ಪ್ರಕರಣ ತನಿಖೆಯಾಗಲಿ. ಈ ರೀತಿ ಭ್ರಷ್ಟಾಚಾರ ಮತ್ತು ಸರ್ಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ನಡೆದಿದ್ದರೆ ಅವರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಓದಿ : ಸರ್ಕಾರದಿಂದ ಐಡಿಬಿಐ ಬ್ಯಾಂಕ್, ಎಲ್ ಐಸಿ ಷೇರು ಮಾರಾಟದ ಘೋಷಣೆ ಸಾಧ್ಯತೆ?