ಮುಂಬೈ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 25 ವರ್ಷಗಳ ಬಳಿಕ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಛೋಟಾ ಶಕೀಲ್ ಗ್ಯಾಂಗ್ ನ ಶೂಟರ್ ನನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ ರವಿಗೆ ಕೊಕ್; ರಾಜ್ಯಾಧ್ಯಕ್ಷ ಸ್ಥಾನ ಬಹುತೇಕ ಫಿಕ್ಸ್
ಬಂಧಿತ ಆರೋಪಿಯನ್ನು ಲಾಯಿಕ್ ಅಹ್ಮದ್ ಫಿದಾ ಹುಸೈನ್ ಶೇಖ್ (50ವರ್ಷ) ಎಂದು ಗುರುತಿಸಲಾಗಿದೆ. ಜುಲೈ 28ರಂದು ಥಾಣೆ ಪೊಲೀಸ್ ಠಾಣೆ ಸಮೀಪ ಛೋಟಾ ಶಕೀಲ್ ಗ್ಯಾಂಗ್ ನ ಶೂಟರ್ ಶೇಖ್ ನನ್ನು ಪೈದೋನಿ ಪೊಲೀಸರು ಬಂಧಿಸಿದ್ದರು.
ಆರೋಪಿ ಶೇಖ್ ಭೂಗತ ಪಾತಕಿ ಛೋಟಾ ರಾಜನ್ ಗ್ಯಾಂಗ್ ನ ಸದಸ್ಯನೊಬ್ಬನ್ನು ಹತ್ಯೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. 1997ರ ಏಪ್ರಿಲ್ 2ರಂದು ಬಂಧಿತ ಭೂಗತ ಪಾತಕಿ ಛೋಟಾ ರಾಜನ್ ಗ್ಯಾಂಗ್ ತಂಡದ ಸದಸ್ಯ ಮುನ್ನಾ ಧಾರಿ ಎಂಬಾತನ ಮೇಲೆ ಶೇಖ್ ಗುಂಡು ಹಾರಿಸಿ ಕೊಲೆಗೈದಿದ್ದ.
ಘಟನೆಯ ನಂತರ ಪೊಲೀಸರು ಶೂಟರ್ ಶೇಖ್ ನನ್ನು ಬಂಧಿಸಿ ಐಪಿಸಿ ಸೆಕ್ಷನ್ 302, 34, ಶಸ್ತ್ರಾಸ್ತ್ರ ಕಾಯ್ದೆ 25ರ ಅಡಿ ಪ್ರಕರಣ ದಾಖಲಿಸಿದ್ದರು. ಬಳಿಕ 1998ರಲ್ಲಿ ಆರೋಪಿ ಶೇಖ್ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. 1998ರ ನಂತರ ಆರೋಪಿ ಶೇಖ್ ಕೋರ್ಟ್ ನ ಯಾವುದೇ ವಿಚಾರಣೆಗೆ ಹಾಜರಾಗದೆ ಭೂಗತನಾಗಿದ್ದ. ಈ ಹಿನ್ನೆಲೆಯಲ್ಲಿ ಶೇಖ್ ನನ್ನು ಕೋರ್ಟ್ ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಿತ್ತು. ಇದೀಗ 25 ವರ್ಷಗಳ ಬಳಿಕ ಆರೋಪಿ ಶೇಖ್ ನನ್ನು ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿರುವುದಾಗಿ ವರದಿ ತಿಳಿಸಿದೆ.