Advertisement

Chhattisgarh; ಬಯಲಿಗೆ ಬಂದಿತು ನಕ್ಸಲರ ಕಳ್ಳನೋಟು ಜಾಲ!

01:58 AM Jun 24, 2024 | Team Udayavani |

ರಾಂಚಿ: ಭಾರತದ ಆರ್ಥಿಕತೆ ಯನ್ನು ಅಸ್ಥಿರಗೊಳಿಸಲೆಂದು ಛತ್ತೀಸ್‌ಗಢದಲ್ಲಿ ನಕ್ಸಲರು ಮುದ್ರಿಸುತ್ತಿದ್ದ ನಕಲಿ ನೋಟುಗಳ ಜಾಲವನ್ನು ಭದ್ರತಪಡೆಗಳು ಭೇದಿಸಿವೆ. 3 ದಶಕದಿಂದ ನಕ್ಸಲ್‌ ಪೀಡಿತ ಪ್ರದೇಶವೆಂಬ ಹಣೆಪಟ್ಟಿ ಹೊಂದಿರುವ ಛತ್ತೀಸ್‌ಗಢದಲ್ಲಿ ಇದೇ ಮೊದಲ ಬಾರಿಗೆ ನಕ್ಸಲರು ಮುದ್ರಿಸಿದ ಭಾರೀ ಪ್ರಮಾಣದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಅವುಗಳ ಮುದ್ರಣಕ್ಕೆ ಬಳಸಲಾಗುತ್ತಿದ್ದ ಸಲಕರಣೆ ಗಳನ್ನೂ ವಶಕ್ಕೆ ಪಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

ಸುಕ್ಮಾ ಜಿಲ್ಲೆಯ ಕೊರಾಜಗುಡ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಕ್ಸಲರು ನಕಲಿ ನೋಟು ಮುದ್ರಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿಯನ್ನು ಆಧರಿಸಿ ಶನಿವಾರ ರಾತ್ರಿ ಭದ್ರತ ಪಡೆಗಳು ಜಂಟಿ ಶೋಧ ಕಾರ್ಯಾಚರಣೆ ನಡೆಸಿವೆ.

ಭದ್ರತ ಪಡೆಗಳ ಉಪಸ್ಥಿತಿಯ ಬಗ್ಗೆ ತಿಳಿಯುತ್ತಿದ್ದಂತೆಯೇ ನಕ್ಸಲರು ತಮ್ಮೆಲ್ಲ ವಸ್ತುಗಳನ್ನೂ ಬಿಟ್ಟು ಪರಾರಿಯಾಗಿದ್ದಾರೆ. ಅರಣ್ಯದ ಒಳಭಾಗದಲ್ಲಿ ಗುಡ್ಡವೊಂದರ ಶೋಧದ ಸಂದರ್ಭದಲ್ಲಿ ಈ ನಕಲಿ ನೋಟುಗಳ ಮುದ್ರಣ ಜಾಲ ಪತ್ತೆಯಾಗಿದೆ.

ಸ್ಥಳದಲ್ಲಿ 50 ರೂ., 100, 200 ಹಾಗೂ 500 ರೂ. ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ. ಅಲ್ಲದೆ ನೋಟುಗಳ ಮುದ್ರಣಕ್ಕೆ ಬಳಸುತ್ತಿದ್ದ ಕಲರ್‌ ಪ್ರಿಂಟಿಂಗ್‌ ಯಂತ್ರಗಳು, 200 ಬಾಟಲ್‌ ಶಾಯಿ, 4 ಕಾಟ್ರಿìಡ್ಜ್, ಪ್ರಿಂಟರ್‌, 9 ಪ್ರಿಂಟರ್‌ ರೋಲರ್‌ಗಳು, 6 ವೈರ್‌ಲೆಸ್‌ ಸೆಟ್‌ಗಳು, ಅವುಗಳ ಚಾರ್ಜರ್‌ ಮತ್ತು ಬ್ಯಾಟರಿಗಳೂ ಲಭಿಸಿವೆ. ಇದರ ಜತೆಗೆ 2 ಮಜಲ್‌ ಲೋಡಿಂಗ್‌ ಗನ್‌,ಭಾರೀ ಸ್ಫೋಟಕಗಳು, ನಕ್ಸಲ್‌ ಸಮವಸ್ತ್ರ ಹಾಗೂ ಇನ್ನಿತರ ವಸ್ತುಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಕಿರಣ್‌ ಹು ಚವಾಣ್‌ ಹೇಳಿದ್ದಾರೆ.

ಬುಡಕಟ್ಟು ಜನರಿಗೆ ವಂಚನೆ

Advertisement

ನಕ್ಸಲರು ತಾವು ಮುದ್ರಿಸಿರುವ ನಕಲಿ ನೋಟುಗಳನ್ನು ಚಲಾಯಿಸಲು ವಾರದ ಮಾರುಕಟ್ಟೆಗಳನ್ನೇ ತಾಣವಾಗಿಸಿಕೊಂಡಿದ್ದರು. ಪ್ರತೀ ವಾರ ನಡೆಯುವ ಸಂತೆ, ಮಾರುಕಟ್ಟೆಗಳಲ್ಲಿ ಈ ನೋಟುಗಳನ್ನು ಬಳಸಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದರು. ಈ ಮೂಲಕ ಅಮಾಯಕ ಬುಡಕಟ್ಟು ಜನರಿಗೆ ವಂಚನೆ ಮಾಡುತ್ತಿದ್ದರು. ದೇಶದ ಆರ್ಥಿಕತೆಯನ್ನು ಅಸ್ಥಿರಗೊಳಿಸುವುದು ಕೂಡ ಈ ಕೃತ್ಯದ ಹಿಂದಿನ ಪ್ರಮುಖ ಉದ್ದೇಶ ಎನ್ನಲಾಗಿದೆ.

ನಕಲಿ ನೋಟುಗಳ ಮೊರೆ ಹೋದದ್ದೇಕೆ?
ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ಯನ್ನು ಹೆಚ್ಚಿಸಲಾಗಿದ್ದು, ನಕ್ಸಲರಿಗೆ ಆರ್ಥಿಕ ನೆರವು ನೀಡುತ್ತಿದ್ದ ಮೂಲಗಳನ್ನೇ ಭದ್ರತ ಪಡೆಗಳು ಚಿವುಟಿಹಾಕಿವೆ. ಇದರಿಂದ ನಕ್ಸಲರು ಸಂಕಷ್ಟಕ್ಕೆ ಸಿಲುಕಿದ್ದು, ನಕಲಿ ನೋಟುಗಳ ಮುದ್ರಣಕ್ಕೆ ಮುಂದಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿಯುತ್ತಿದೆ ಎಂದು ಎಸ್‌ಪಿ ಕಿರಣ್‌ ಹು ಚವಾಣ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next