ಮಂಗಳೂರು: ಉಗ್ರಗಾಮಿ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಜತೆ ನಂಟು ಹೊಂದಿ ಹಣ ರವಾನೆ ಆರೋಪ ಎದುರಿಸುತ್ತಿದ್ದ ಮಂಗಳೂರಿನ ಪಂಜಿಮೊಗರುವಿನ ದಂಪತಿ ಸಹಿತ ನಾಲ್ವರಿಗೆ ಛತ್ತೀಸ್‌ಗಢ ಕೋರ್ಟ್ 10 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಧೀರಾಜ್ ಸಾವೋ (21), ಪಪ್ಪು ಮಂಡಲ್ (30), ಜುಬ್ಬೆರ್ ಹುಸೇನ್ (42) ಮತ್ತು ಆತನ ಪತ್ನಿ ಆಯೆಷಾ ಬಾನು (38) ಶಿಕ್ಷೆಗೊಳಗಾದವರು.
ಬಿಹಾರದ ಪಾಟ್ನಾ ಸ್ಫೋಟಕ್ಕೆ ಸಂಬಂಧಿಸಿದಂತೆ 2013ರಲ್ಲಿ ಮಂಗಳೂರಿನ ಪಂಜಿಮೊಗರು ನಿವಾಸಿ ಆಯೇಷಾ ಬಾನು ಮತ್ತು ಆಕೆಯ ಪತಿ ಜುಬೇರ್ ಹುಸೇನ್‌ನನ್ನು ಎಟಿಎಸ್ ಪೊಲೀಸರು ಬಂಧಿಸಿದ್ದರು.
ಬಿಹಾರದಲ್ಲಿ ಬಂಧಿತನಾಗಿದ್ದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಭಯೋತ್ಪಾದಕನೊಬ್ಬ ನಾಲ್ವರು ಹಿಂದೂಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಹಣಕಾಸು ವ್ಯವಹಾರ ನಡೆಸುತ್ತಿದ್ದುದು ಬಹಿರಂಗವಾಗಿತ್ತು. ಇದನ್ನು ಪಾಕಿಸ್ಥಾನದಲ್ಲಿರುವ ಐಎಸ್‌ಐ ಏಜೆಂಟ್ ಇಬ್ರಾಹಿಂ ಎಂಬಾತ ನಿರ್ವಹಿಸುತ್ತಿದ್ದ ಮತ್ತು ಅಲ್ಲಿಂದ ಹವಾಲಾ ಮೂಲಕ ಹಣ ರವಾನೆ ಮಾಡುತ್ತಿದ್ದ ಎಂಬ ಅಂಶ ಬಹಿರಂಗಗೊಂಡಿತ್ತು.
ಈ ಬಗ್ಗೆ ಅಲ್ಲಿನ ಪೊಲೀಸರು ಮತ್ತಷ್ಟು ತನಿಖೆ ನಡೆಸಿದಾಗ ಮಂಗಳೂರು ಮೂಲದ ಆಯೆಷಾ ಬಾನು ಎಂಬಾಕೆಯ ಹೆಸರಿನಲ್ಲಿ ಒಂದು ಖಾತೆ ತೆರೆದಿರುವುದನ್ನು ಪತ್ತೆಹಚ್ಚಿದ್ದರು. ಖಾತೆ ಬಗ್ಗೆ ತನಿಖೆ ನಡೆಸಿದಾಗ ಅದನ್ನು ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸದಸ್ಯರು ಹಣಕಾಸು ವ್ಯವಹಾರಗಳಿಗೆ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು.