ಚತ್ತೀಸ್ ಗಢ: ನಕ್ಸಲೀಯರು ಹಾಗೂ ಭದ್ರತಾ ಪಡೆ ನಡುವೆ ಗುಂಡಿನ ಕಾಳಗದಲ್ಲಿ ಐದು ಮಂದಿ ಯೋಧರು ಹುತಾತ್ಮರಾಗಿದ್ದು, ಕೆಲವು ಯೋಧರು ಗಾಯಗೊಂಡಿರುವ ಘಟನೆ ಚತ್ತೀಸ್ ಗಢದ ಬಿಜಾಪುರ್ ಜಿಲ್ಲೆಯಲ್ಲಿ ಶನಿವಾರ (ಏಪ್ರಿಲ್ 03) ನಡೆದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಆರೂವರೆ ಕೋಟಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಕಠಿಣ ನಿರ್ಭಂಧಗಳು : ಕೆ.ಸುಧಾಕರ್
ನಕ್ಸಲೀಯರ ಗುಂಪು ಹಾಗೂ ಪೊಲೀಸರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಕೆಲವು ನಕ್ಸಲೀಯರು ಕೂಡಾ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ ಎಂದು ವರದಿ ಹೇಳಿದೆ.
ಸುಕ್ಮಾ ಮತ್ತು ಬಿಜಾಪುರ್ ಗಡಿ ಭಾಗವಾದ ಟಾರ್ರೆಮ್ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ಜಂಟಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಎನ್ ಕೌಂಟರ್ ಸಂಭವಿಸಿರುವುದಾಗಿ ಚತ್ತೀಸ್ ಗಢ ಪೊಲೀಸ್ ಮಹಾ ನಿರ್ದೇಶಕ ಡಿ.ಎಂ.ಅವಾಸ್ಥಿ ತಿಳಿಸಿದ್ದಾರೆ.
ಸಿಆರ್ ಪಿಎಫ್ ನ ಎಲೈಟ್ ಕಮಾಂಡೋ ಬೆಟಾಲಿಯನ್, ಜಿಲ್ಲಾ ಮೀಸಲು ಪಡೆ (ಡಿಆರ್ ಜಿ) ಮತ್ತು ವಿಶೇಷ ಕಾರ್ಯಾಚರಣೆ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು ಎಂದು ಡಿ.ಎಂ. ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ವರದಿ ಪ್ರಕಾರ, ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಪ್ರತಿದಾಳಿಯಲ್ಲಿ ಇಬ್ಬರು ನಕ್ಸಲೀಯರು ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.