ಜೇವರ್ಗಿ: ಮಹಾದಾಸೋಹಿ ಶ್ರೀ ಶರಣ ಬಸವೇಶ್ವರರು ಕಾಯಕ ಮತ್ತು ದಾಸೋಹದ ಮೂಲಕ ಜಗದೋದ್ಧಾರ ಮಾಡಿದ ಪುಣ್ಯ ಪುರುಷರು. ಪ್ರತಿಯೊಬ್ಬರೂ ಈ ಮಹಾತ್ಮನ ತತ್ವಾದರ್ಶ ಪಾಲಿಸಿ ಬದುಕನ್ನು ಸುಂದರ ಮಾಡಿಕೊಳ್ಳಬೇಕು ಎಂದು ಪಾಳಾ ಕಟ್ಟಿಮನಿ ಸಂಸ್ಥಾನ ಮಠದ ಪೀಠಾಧಿಪತಿ ಡಾ| ಗುರು ಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ರೇವನೂರ (ಸೌಳಹಳ್ಳ) ಶ್ರೀ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಛಟ್ಟಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಅವರು, ದಾಸೋಹ ಮೂರ್ತಿ ಶ್ರೀ ಶರಣ ಬಸವೇಶ್ವರರು ಬರಗಾಲದಲ್ಲಿ ಜನರಿಗೆ ಅನ್ನದಾಸೋಹ ಮಾಡಿ ಭಕ್ತರ ಪಾಲಿನ ಕಾಮಧೇನುವಾಗಿದ್ದರು. ಅಂತಹ ಮಹಾನ್ ಶರಣ ಸಂಸ್ಕೃತಿ ನಮ್ಮ ಜೀವನ ಸಂಸ್ಕೃತಿಯಾಗಬೇಕು ಎಂದರು.
ತಾಲೂಕಿನ ರೇವನೂರ (ಸೌಳಹಳ್ಳ) ಮಠದ ಶರಣರು ನಿತ್ಯ ನೂರಾರು ಜನ ಭಕ್ತರಿಗೆ ಅನ್ನ, ಜ್ಞಾನ ದಾಸೋಹ ಮಾಡುವ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ ಎಂದರು.
ಇದಕ್ಕೂ ಮುನ್ನ ಬೆಳಗ್ಗೆ ಶರಣಬಸವೇಶ್ವರರ ಮೂರ್ತಿಗೆ ಮಲ್ಲಿನಾಥ ಶರಣರು ದಾಸೋಹ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು. ಸಂಜೆ 6 ಗಂಟೆಯಿಂದ ಛಟ್ಟಿ ಉತ್ಸವದ ಅಂಗವಾಗಿ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಭಜ್ಜಿ ಪಲ್ಲೆ, ಜೋಳ, ಸಜ್ಜಿ ರೊಟ್ಟಿ, ಅನ್ನ, ಸಾಂಬಾರು ಪ್ರಸಾದ ವಿತರರಿಸಲಾಯಿತು.
ಶರಣಗೌಡ ಪಾಟೀಲ ಹಚ್ಚಡ್, ಭೀಮರಾಯ ರಸ್ತಾಪುರ, ಶರಣಗೌಡ ದಳಪತಿ, ಶರಣಗೌಡ ಹರನೂರ, ಸಿದ್ಧು ಸಾಹು ಅಂಗಡಿ, ಶಿವಕುಮಾರ ದೇಸಾಯಿ, ಗುರುಲಿಂಗಯ್ಯ ಸ್ವಾಮಿ, ಭಗವಂತ್ರಾಯ ಶಿವಣ್ಣೋರ್, ಮಲ್ಲಿಕಾರ್ಜುನ ಬಿರಾದಾರ, ದೇವಿಂದ್ರ ಬನ್ನೆಟ್ಟಿ ಮತ್ತಿತರರು ಇದ್ದರು.