ಬೆಳಗಾವಿ: ದೇಶ ಕಂಡ ಅಪ್ರತಿಮ ನಾಯಕ ಹಾಗೂ ಹಿಂದೂ ಧರ್ಮದ ರಕ್ಷಣೆಗೆ ಕೆಚ್ಚೆದೆಯ ಹೋರಾಟ ಮಾಡಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ರಾಜಹಂಸಗಡ ದಲ್ಲಿ ಪ್ರತಿಷ್ಠಾಪನೆ ಮಾಡಿರುವುದು ಸಂತಸ ತಂದಿದೆ. ರಾಜಹಂಸಗಡ ಕೋಟೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚುವರಿಯಾಗಿ 5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆಆರ್ ಐಡಿಎಲ್, ಪ್ರವಾಸೋದ್ಯಮ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗುರುವಾರ ರಾಜಹಂಸಗಡ ಕೋಟೆ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಈ ಅನುದಾನವನ್ನು ರಾಜಹಂಸಗಡ ಕೋಟೆ ಅಭಿವೃದ್ಧಿಗೆ ಪೂರಕವಾಗಿ ಸಮುದಾಯ ಭವನ, ವಿಶ್ರಾಂತಿ ಗೃಹ ನಿರ್ಮಾಣ ಜೊತೆಗೆ ಇತರ ಮೂಲಭೂತ ಸೌಕರ್ಯ ಕಲ್ಪಿಸಿ, ಪ್ರವಾಸಿ ತಾಣವನ್ನಾಗಿ ಮಾರ್ಪಾಡು ಮಾಡಲಾಗುವುದು ಎಂದರು.
ರಾಜಹಂಸಗಡ ಕೋಟೆಯ ಅಭಿವೃದ್ಧಿಗೆ 2008 ರಲ್ಲಿ ಸಿಎಂ ಯಡಿಯೂರಪ್ಪ ಅವರು 14 ಕೋಟಿ ರೂಪಾಯಿ ಮಂಜೂರು ಮಾಡಿದರು. ಜನಾರ್ದನ ರೆಡ್ಡಿ ಅವರು ಅಂದಿನ ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿದ್ದರು. ಶಾಸಕ ಸಂಜಯ ಪಾಟೀಲ ಅವರ ಪ್ರಯತ್ನದ ಫಲವಾಗಿ ಕೋಟೆಯ ಆವರಣದಲ್ಲಿ ಮೂಲಸೌಕರ್ಯ ಒದಗಿಸಲು ಅನುದಾನ ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಕೋಟೆ ಅಭಿವೃದ್ದಿಗೆ ನಿಗದಿಯಾಗಿರುವ ಅನುದಾನದ ಜೊತೆಗೆ ಹೆಚ್ಚುವರಿಯಾಗಿ 5 ಕೋಟಿ ಅನುದಾನ ನೀಡಲಾಗುವದು ಎಂದು ಪ್ರಕಟಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಸಂಸದೆ ಮಂಗಲಾ ಅಂಗಡಿ, ಶಾಸಕರಾದ ರಮೇಶ ಜಾರಕಿಹೊಳಿ, ಅನೀಲ ಬೆನಕೆ, ಅಭಯ ಪಾಟೀಲ, ಪ್ರಾದೇಶಿಕ ಆಯುಕ್ತರಾದ ಎಂ.ಜಿ ಹಿರೇಮಠ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸ್ವಾಗತಿಸಿದರು.
ಎದ್ದುಕಂಡ ಗೈರುಹಾಜರಿ
ಕಾರ್ಯಕ್ರಮ ದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅನುಪಸ್ಥಿತಿ ಎದ್ದುಕಂಡಿತಲ್ಲದೆ ತೀವ್ರ ಚರ್ಚೆಗೆ ಗ್ರಾಸವಾಯಿತು. ಶಾಸಕ ರಮೇಶ ಜಾರಕಿಹೊಳಿ ಮತ್ತುಹೆಬ್ಬಾಳ್ಕರ್ ನಡುವಿನ ಆರೋಪ ಪ್ರತ್ಯಾರೋಪದಿಂದಾಗಿ ಈ ಕಾರ್ಯಕ್ರಮ ರಾಜ್ಯದ ಗಮನಸೆಳೆದಿತ್ತು. ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮ ಕಾಂಗ್ರೆಸ್ ಕಾರ್ಯಕ್ರಮ ವನ್ನಾಗಿ ಮಾಡಲು ಅವಕಾಶ ಕೊಡುವದಿಲ್ಲ. ಇದನ್ನು ಮುಖ್ಯಮಂತ್ರಿ ಗಳ ಮೂಲಕವೇ ಉದ್ಘಾಟನೆ ಮಾಡಿಸಲಾಗುವದು ಎಂದು ರಮೇಶ ಜಾರಕಿಹೊಳಿ ಸವಾಲು ಹಾಕಿದ್ದರು. ಈ ಮಧ್ಯೆ ಇದೇ ಮಾರ್ಚ 5 ರಂದು ಕಾಂಗ್ರೆಸ್ ನಿಂದ ಪ್ರತ್ಯೇಕ ಕಾರ್ಯಕ್ರಮ ಮಾಡಲು ಹೆಬ್ಬಾಳ್ಕರ್ ನಿರ್ಧರಿಸಿದ್ದಾರೆ.