Advertisement

ಛತ್ರಪತಿ ಶಿವಾಜಿ ಸ್ಮಾರಕ: ಈವರೆಗೆ 15.82 ಕೋ.ರೂ.ಖರ್ಚು

04:32 PM Nov 29, 2017 | Team Udayavani |

ಮುಂಬಯಿ: ಅರಬ್ಬಿ ಸಮುದ್ರದಲ್ಲಿ ತಲೆ ಎತ್ತಲಿರುವ  ಮರಾಠ ಯೋಧ ಛತ್ರಪತಿ ಶಿವಾಜಿ ಮಹಾರಾಜ ಅವರ ಭವ್ಯ ಸ್ಮಾರಕದ ನಿರ್ಮಾಣಕ್ಕೆ ಮಹಾರಾಷ್ಟ್ರ ಸರಕಾರವು 13 ಇಲಾಖೆಗಳಿಂದ ಅಗತ್ಯ ಎನ್‌ಒಸಿಗಳನ್ನು  ಪಡೆದುಕೊಂಡಿರುವ ವಿಷಯವನ್ನು ಆರ್ಟಿಐ ಅರ್ಜಿಯೊಂದು ಬಹಿರಂಗಪಡಿಸಿದೆ. ನಗರದ ಮೂಲದ ಆರ್ಟಿಐ ಕಾರ್ಯಕರ್ತ ಅನಿಲ್‌ ಗಲಗಲಿ ಅವರಿಗೆ  ಛತ್ರಪತಿ ಶಿವಾಜಿ ಮಹಾರಾಜ ಸ್ಮಾರಕ ಸಮಿತಿಯು ಈ ಮಾಹಿತಿಯನ್ನು ಒದಗಿಸಿದೆ.

Advertisement

ಶಿವಾಜಿಯ ಈ ಭವ್ಯ ಸ್ಮಾರಕದ ನಿರ್ಮಾಣ ಕಾರ್ಯ ಇನ್ನು ಆರಂಭವಾಗಬೇಕೆದ್ದು, ಅದಕ್ಕೆ ಮೊದಲೇ ರಾಜ್ಯ ಸರಕಾರವು ತನ್ನ ಮಹತ್ವಾಕಾಂಕ್ಷೆಯ ಯೋಜನೆಯ ಮೇಲೆ 15 ಕೋ.ರೂ. ಖರ್ಚು ಮಾಡಿರುವ ವಿಷಯವೂ ಆರ್ಟಿಐನಿಂದ ಬಹಿರಂಗವಾಗಿದೆ.

ಸ್ಮಾರಕದ ಮೇಲೆ ಈವರೆಗೆ 15,82,80,011 ರೂ. ಖರ್ಚಾಗಿದೆ. ಈ ಯೋಜನೆಗೆ ಯಾವ 13 ಇಲಾಖೆಗಳು ಎನ್‌ಒಸಿ ನೀಡಿವೆಯೋ, ಅವುಗಳಲ್ಲಿ ನೌಕಾಪಡೆ (ಪಶ್ಚಿಮ ಕಮಾಂಡ್‌), ಮುಂಬಯಿ ಪೋರ್ಟ್‌ ಟ್ರಸ್ಟ್‌, ರಾಜ್ಯ ಮೇರಿಟೈಮ್‌ ಬೋರ್ಡ್‌, ಬಾಂಬೆ ನ್ಯಾಚುರಲ್‌ ಹೆಸ್ಟರಿ ಸೊಸೈಟಿ(ಬಿಎನ್‌ಎಚ್‌ಎಸ್‌), ರಾಜ್ಯ ಮೀನುಗಾರಿಕಾ ಇಲಾಖೆ, ಕರಾವಳಿ  ಪಡೆ, ಮುಂಬಯಿ ಪೊಲೀಸ್‌ ಆಯುಕ್ತ, ಪರಿಸರ ಮತ್ತು ಅರಣ್ಯ ಸಚಿವಾಲಯ, ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ), ಬೃಹನ್ಮುಂಬಯಿ ಮಹಾನಗರ ಪಾಲಿಕೆ ಆಯುಕ್ತ, ಬೆಸ್ಟ್‌ ಮತ್ತು ಏವಿಯೇಶನ್‌ ಅಥಾರಿಟಿ ಆಫ್‌ ಇಂಡಿಯಾ(ಎಎಐ) ಸೇರಿದೆ.

ಮುಂಬಯಿ ಕರಾವಳಿಯಿಂದ  1.5 ಕಿ.ಮೀ ದೂರದಲ್ಲಿ 15 ಹೆಕ್ಟೇರ್‌  ಪ್ರದೇಶದಲ್ಲಿ  ಶಿವಾಜಿ ಸ್ಮಾರಕ ನಿರ್ಮಾಣವಾಗಲಿದೆ.  ಮೊದಲ ಹಂತರದಲ್ಲಿ  2019ರ ಒಳಗಾಗಿ ಅರಬ್ಬಿ ಸಮುದ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಅವರ ಭವ್ಯಸ್ಮಾರಕ ನಿರ್ಮಾಣವಾಗಲಿದೆ. ಅದೇ, ಎರಡನೇ ಹಂತದಲ್ಲಿ  ಅಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಅವರಿಗೆ ಸಂಬಂಧಿಸಿದ ವಸ್ತುಗಳ ಸಂಗ್ರಹಾಲಯ, ಗ್ಯಾಲರಿ, ಕೋಟೆ, ಉದ್ಯಾನವನ ಹಾಗೂ ಇತರ ವಸ್ತುಗಳನ್ನು ನಿರ್ಮಿಸಲಾಗುವುದು. ಈ ಅಂತಾರಾಷ್ಟ್ರೀಯ ಮಟ್ಟದ ಸ್ಮಾರಕದ ನಿರ್ಮಾಣಕ್ಕೆ ಫ್ರಾನ್ಸ್‌ ನ ಇಜಿಐಎಸ್‌ ಕಂಪೆನಿಯನ್ನು ಆಯ್ಕೆ ಮಾಡಲಾಗಿದೆ. ಈ ಕಂಪೆನಿಯಲ್ಲಿ ಪರಿಸರದಿಂದ ಹಿಡಿದು ವಿವಿಧ 22 ಕ್ಷೇತ್ರಗಳಿಗೆ ಸಂಬಂಧಿಸಿದ ತಜ್ಞರನ್ನು ಒಳಗೊಂಡಿದ್ದು, ಇವರು ಸ್ಮಾರಕದ ನಿರ್ಮಾಣದ ಸಂದರ್ಭ ಕಂಪೆನಿಗೆ ಸಲಹೆ ನೀಡಲಿದ್ದಾರೆ.

ಸರಕಾರಿ ಇಲಾಖೆಗಳಿಂದ ವಿವಿಧ ಅನುಮತಿಗಳ ಸಂಗ್ರಹಣೆ ಸೇರಿದಂತೆ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲು ರಾಜ್ಯ ಸರಕಾರವು ಇಜಿಐಎಸ್‌ ಕನ್ಸ್‌ಟ್ರಕ್ಷನ್‌ ಇಂಡಿಯಾ ಕಂಪೆನಿಗೆ ಸುಮಾರು 10 ಕೋ.ರೂ. ಪಾವತಿಸಿದೆ. ಅದೇ, ಉಳಿದ 5 ಕೋ.ರೂ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹಸ್ತದಲ್ಲಿ ಜರಗಿದ ಶಿಲಾನ್ಯಾಸ ಸಮಾರಂಭದ ಮೇಲೆ ವ್ಯಯಿಸಲಾಗಿದೆ ಎಂದು ಆರ್‌ಟಿಐ ಮಾಹಿತಿಯಲ್ಲಿ ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next