ಸೌತ್ ಎಂಡ್ ಸರ್ಕಲ್ಲಿನಿಂದ ಜಯನಗರಕ್ಕೆ ಹೋಗುವ ದಾರಿಯಲ್ಲಿ, ಸಿಂಡಿಕೇಟ್ ಬ್ಯಾಂಕಿನ ಬಳಿ ಬಲಕ್ಕೆ ತಿರುಗಿದರೆ, ಅಲ್ಲೊಂದು ಹೊಟೆಲ್ ನಿಮ್ಮ ಕಣ್ಣಿಗೆ ಬೀಳುತ್ತದೆ. ಕಣ್ಣರಳಿಸಿ ನೋಡಿದರೆ ಗೂಫಾ ಎಂಬ ಹೆಸರೂ ಅದರ ಪಕ್ಕದಲ್ಲೇ ದಿ ಪ್ರಸಿಡೆಂಟ್ ಎಂಬ ಫಲಕವೂ ಕಣ್ಣಿಗೆ ಬೀಳುತ್ತದೆ. ಪ್ರಸಿಡೆಂಟ್ ರೆಸ್ಟುರಾಂಟಿನ ಮುಂದೆ ನಿಂತರೆ ಮುಚ್ಚಿದ ಬಾಗಿಲು ಕಣ್ಣು ಸೆಳೆಯುತ್ತದೆ. ಮಹಾರಾಜರ ಕಾಲದ ಭವ್ಯವಾದ ಬಾಗಿಲಂತೆ ಭಾಸವಾಗುವ, ಮಹಾದ್ವಾರದ ಮುಂದೆ ಚರಿತ್ರೆಯ ಪುಟಗಳಿಂದ ಇಳಿದುಬಂದಂತೆ ಕಾಣುವ ವ್ಯಕ್ತಿಯೊಬ್ಬ ನಿಂತಿದ್ದು, ನೀವು ಮುಂದಕ್ಕೆ ಹೆಜ್ಜೆಯಿಡುತ್ತಿದ್ದಂತೆ ಬಾಗಿಲು ತೆರೆದು ನಿಮ್ಮನ್ನು ಒಳಗೊಳ್ಳುತ್ತಾನೆ.
ನೀವಾಗ ಚೆಟ್ಟಿನಾಡ್ ಅರಮನೆಯೊಳಗೆ ಕಾಲಿಡುತ್ತೀರಿ. ದಪ್ಪದಪ್ಪದ ಕಂಬಗಳ, ಆಕರ್ಷಕ ಚಾವಣಿಯ, ಹಳೆಯ ಅನುಭವ ಕೊಡುವ ಪೀಠೊಪಕರಣಗಳ, ಒಳಾಂಗಣ, ಪಡಸಾಲೆ, ಜಗಲಿಗಳ ಅರಮನೆಯ ಪ್ರತಿರೂಪದ ಹೆಸರೇ ಚೆಟ್ಟಿನಾಡ್ ಕಿಚನ್.
ಚೆಟ್ಟಿನಾಡ್ ಅಂದರೇನೇ ಅಡುಗೆಯವರು. ವಿಶೇಷ ಬಗೆಯ ಅಡುಗೆ ಮಾಡುವುದರಲ್ಲಿ ಹೆಸರಾದವರು. ಅವರನ್ನು ಭಾರತದ ಮಾಸ್ಟರ್ ಶೆಫ್ಗಳೆಂದು ಕರೆಯುತ್ತಾರೆ. ಘಮಘಮಿಸುವ ಮಸಾಲೆ ತಯಾರಿಸುವುದರಲ್ಲಿ ಚೆಟ್ಟಿನಾಡಿಗರು ಎತ್ತಿದ ಕೈ. ಪ್ರತಿಯೊಂದು ತಿನಿಸಿನ ಜೊತೆಗೂ ಅವರು ಬೇಯಿಸಿದ ಮೊಟ್ಟೆಯನ್ನು ಬಳಸುತ್ತಾರೆ. ಬದನೆಕಾಯಿ-ನುಗ್ಗೇಕಾಯಿ ಸಾಂಬಾರು ಮಾಡುವುದರಲ್ಲಿ ಅವರು ಹೆಸರುವಾಸಿ. ಚಿಕನ್ ಚೆಟ್ಟಿನಾಡ್ ಆರೋಗ್ಯಕ್ಕೂ ನಾಲಗೆಗೂ ಶ್ರೇಷ್ಠ. ಏಡಿ, ಮೀನು, ಕೋಳಿಗಳಿಂದ ಮಾಡಿದ ಘಮ್ಮನೆಯ ಮಸಾಲೆ ಬೆರೆತ ಅಡುಗೆಗಳನ್ನು ನೀವು ಚೆಟ್ಟಿನಾಡ್ ಕಿಚನ್‌ನಲ್ಲೂ ಸವಿಯಬಹುದು.
ಉದಾಹರಣೆಗೆ ಸೂಪ್ ಕೊಡಿ ಎಂದರೆ ಅವರು ನಂಡು ಮೆಲಗು ರಸಂ ಕೊಡುತ್ತಾರೆ. ಏಡಿಯನ್ನು ಹದವಾಗಿ ಬೇಯಿಸಿ ಅದಕ್ಕೆ ಕರಿಮೆಣಸಿನ ಪುಡಿ ಹಾಕಿ ಮಾಡಿದ ಆ ಸೂಪ್ ನಿಮಗೆ ಮತ್ತೆಲ್ಲೂ ಸಿಗಲಾರದು. ಸ್ಟಾರ್ಟರ್ಸ್ ಅಂದರೆ ಎಗ್ ಕಳಕಿ, ಚೆಟ್ಟಿನಾಡ್ ಎಗ್ ರೋಸ್ಟ್, ಚಿಕನ್ ಚುಕ್ಕಾ, ಚೆಟ್ಟಿನಾಡ್ ಚಿಲ್ಲಿ ಚಿಕನ್- ಹೀಗೆ ನಾನಾ ಥರದ ರುಚಿಕಟ್ಟಾದ ತಿನಿಸುಗಳು ಬಂದು ಕೂರುತ್ತವೆ. ಇವೆಲ್ಲಕ್ಕೂ ಚೆಟ್ಟಿನಾಡ್ ಮಸಾಲೆ ಬೆರೆತಿರುತ್ತದೆ ಅನ್ನುವುದೇ ವಿಶೇಷ. ಹೀಗಾಗಿ ಚೆಟ್ಟಿನಾಡ್ ಕಿಚನ್ನಿನಲ್ಲಿ ನಿಮಗೆ ಸಿಗುವುದು ಅವರ ಅಡುಗೆ ಮನೆಯಲ್ಲೇ ತಯಾರಿಸಲ್ಪಟ್ಟ ವಿಶೇಷವಾದ ಕಮ್ಮನೆಯ ಮಸಾಲೆ ಬೆರೆತ ತಿನಿಸುಗಳು.
ಜಯನಗರಕ್ಕೆ ಸಮೀಪ ಇರುವುದರಿಂದ ಸಸ್ಯಾಹಾರಿಗಳಿಗೂ ಅಲ್ಲಿ ವಿಶೇಷ ರೆಸಿಪಿಗಳಿದ್ದಾವೆ. ಪಾಲ್ಕಟ್ಟಿ ಚುಕ್ಕಾ ಎಂಬುದು ಪನೀರ್‌ನಿಂದ ಮಾಡಿದ ವಿಶೇಷ ತಿನಿಸು, ಹಾಗೆಯೇ ಮಶ್ರೂಮ್, ಬೇಬಿ ಕಾನುìಗಳಿಂದ ಮಾಡಿದ ವಿಶೇಷ ಅಡುಗೆಗೂ ಇಲ್ಲುಂಟು. ಉರುಲೈ ಕಲ್ಯಾಣ ರೋಸ್ಟ್ ಎಂಬುದು ಆಲೂಗಡ್ಡೆಯ ಒಂದು ಸ್ಪೆಷಲ್ ಅಡುಗೆ. ಪೊರಿಚಾ ಮುಟ್ಟೈ ಕೊಳಂಬು ಅಂದರೆ ಮೊಟ್ಟೆಯಿಂದ ಮಾಡಿದ ಗಸಿ.
ನಮ್ಮೂರಲ್ಲಿ ಪಡ್ಡು ಅಂತ ಮಾಡುತ್ತಾರಲ್ಲ, ಅದನ್ನೇ ಚೆಟ್ಟಿನಾಡ್ ಕಿಚನ್‌ನಲ್ಲಿ ಮಟನ್ನಿನಿಂದ ಮಾಡುತ್ತಾರೆ. ಅದಕ್ಕೆ ಮಟನ್ ಕೋಲ ಉರಂಡೈ ಎಂದು ಕರೆಯುತ್ತಾರೆ. ಹಾಗೆಯೇ ವಿರುದುನಗರ್ ಆಯಿಲ್ ಪರೋಟ ಎಂಬ ಪಕ್ಕಾ ದೇಸಿ ಶೈಲಿಯ ಪರೋಟವೂ ಇಲ್ಲಿ ಸಿಗುತ್ತದೆ. ಶ್ಯಾವಿಗೆ, ಅಪ್ಪಮ್ ಕೂಡ ಉಂಟು. ಅಟ್ಟುಕಲ್ ಪಾಯ ಎಂಬ ಮಜ್ಜಿಗೆಹುಳಿಯಂಥ ರಸದೊಂದಿಗೆ ಇಡಿಯಪ್ಪಂ ತಿಂದರೆ ಸಿಗುವ ಸಂತೋಷವೇ ಬೇರೆ.
ಇಲ್ಲಿಯ ಮೆನು ಓದಲು ಮತ್ತು ಅರ್ಥಮಾಡಿಕೊಳ್ಳಲು ಅನ್ಯಭಾಷಿಗರಿಗೆ ಕಷ್ಟ. ಆದರೆ ನಿಮಗೆ ನೆರವಾಗುವುದಕ್ಕೆ ಫುಡ್ ಅಂಡ್ ಬೆವರೇಜಸ್ ಮ್ಯಾನೇಜರ್ ಭಾಸ್ಕರ್ ಇದ್ದಾರೆ. ಅವರಿಗೆ ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು ಗೊತ್ತು. ಏನೇನು ತಿನ್ನಬೇಕು ಅನ್ನುವುದನ್ನು ಅವರ ಬಳಿಯೇ ಕೇಳುವುದು ಒಳ್ಳೆಯದು.
ಚೆಟ್ಟಿನಾಡ್ ಕಿಚನ್ ನಿಮ್ಮ ನಾಲಗೆ ರುಚಿಯನ್ನು ಹರಿತಗೊಳಿಸುವ ಊಟದ ಮನೆ.