ಮುಂಬೈ: ಟೀಂ ಇಂಡಿಯಾದ ವೇಗದ ಬೌಲರ್ ಗಳು ಆಸ್ಟ್ರೇಲಿಯಾ ನೆಲದಲ್ಲಿ ಪಿಂಕ್ ಬಾಲ್ ಆಡಲು ಉತ್ಸುಕರಾಗಿದ್ದಾರೆ ಎಂದು ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸಮನ್ ಚೇತೇಶ್ವರ ಪೂಜಾರ ಹೇಳಿದ್ದಾರೆ.
ಟೀಂ ಇಂಡಿಯಾ ಈ ವರ್ಷಾಂತ್ಯದಲ್ಲಿ ಆಸೀಸ್ ಪ್ರವಾಸ ಮಾಡಲಿದೆ. ನಾಲ್ಕು ಟೆಸ್ಟ್ ಗಳ ಸರಣಿ ಡಿಸೆಂಬರ್ 3ರಂದು ಆರಂಭವಾಗಲಿದೆ. ಮೊದಲ ಪಂದ್ಯ ಬ್ರಿಸ್ಬೇನ್ ನ ಗಾಬಾ ಮೈದಾನದಲ್ಲಿ ನಡೆದರೆ, ಎರಡನೇ ಪಂದ್ಯದ ಅಡಿಲೇಡ್ ಓವಲ್ ನಲ್ಲಿ ನಡೆಯಲಿದೆ. ಇದು ಪಿಂಕ್ ಬಾಲ್ ಪಂದ್ಯವಾಗಿರಲಿದೆ.
ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಪಿಂಕ್ ಬಾಲ್ ನಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಈಡನ್ ಗಾರ್ಡನ್ ನಲ್ಲಿ ನಡೆದ ಮೊದಲ ಪಿಂಕ್ ಬಾಲ್ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಹೀಗಾಗಿ ಮುಂದಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಡಲು ಉತ್ಸುಕರಾಗಿದ್ದಾರೆ ಎಂದು ಪೂಜಾರ ಹೇಳಿದ್ದಾರೆ.
ಸಾಂಪ್ರದಾಯಿಕ ಕೆಂಪು ಚೆಂಡಿಗಿಂತ ಪಿಂಕ್ ಬಾಲ್ ನಲ್ಲಿ ಆಡುವುದು ಕಷ್ಟಕರವಾಗಿರುತ್ತದೆ. ಚೆಂಡಿನ ವೇಗದಲ್ಲೂ ವ್ಯತ್ಯಾಸವಾಗುತ್ತದೆ. ಹಗಲು ರಾತ್ರಿ ಪಂದ್ಯಗಳು ಬ್ಯಾಟ್ಸಮನ್ ಗಳಿಗೆ ಸವಾಲಾಗುತ್ತದೆ ಎಂದು ಪೂಜಾರ ಹೇಳಿದ್ದಾರೆ.