Advertisement

ಮತ್ತೆ ಶುರು ಅಧಿಕಾರ ಗದ್ದುಗೆ ಚದುರಂಗದಾಟ!

11:00 AM Jan 21, 2019 | Team Udayavani |

ರಾಯಚೂರು: ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ಸಂಬಂಧಿಸಿ ಮೀಸಲಾತಿ ಕುರಿತ ನ್ಯಾಯಾಲಯದಲ್ಲಿದ್ದ ಅಡ್ಡಿ ಆತಂಕಗಳು ನಿವಾರಣೆಯಾಗಿದ್ದು, ಈಗ ಜಿಲ್ಲೆಯಲ್ಲಿ ಮತ್ತೆ ರಾಜಕೀಯ ಚಟುವಟಿಕೆ ಗರಿಗೆದರಿದೆ.

Advertisement

ರಾಯಚೂರು ನಗರಸಭೆ ಸೇರಿ ಎಲ್ಲ ಸ್ಥಳೀಯ ಸಂಸ್ಥೆಗಳ ಆಡಳಿತ ಚುನಾಯಿತ ಪ್ರತಿನಿಧಿಗಳ ಕೈಯಲ್ಲಿಲ್ಲದ್ದರಿಂದ ಅಭಿವೃದ್ಧಿ ಹಳ್ಳ ಹಿಡಿದಿತ್ತು. ಈಗ ಶೀಘ್ರದಲ್ಲೇ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ನಿಕ್ಕಿಯಾಗುವ ಸಾಧ್ಯತೆಗಳಿರುವುದರಿಂದ ಕುತೂಹಲ ಹೆಚ್ಚಿದೆ.

ರಾಯಚೂರು ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನಿಗದಿಯಾಗಿತ್ತು. ನಗರಭೆ ಒಟ್ಟು 35 ಸದಸ್ಯರ ಬಲ ಹೊಂದಿದೆ. ಅಧಿಕಾರ ಹಿಡಿಯಲು ಮ್ಯಾಜಿಕ್‌ ನಂಬರ್‌ 18 ಸದಸ್ಯರ ಅಗತ್ಯವಿದೆ. ಆದರೆ, ಬಿಜೆಪಿ 12, ಕಾಂಗ್ರೆಸ್‌ 11 ಹಾಗೂ 3 ಜೆಡಿಎಸ್‌ ಹಾಗೂ 9 ಪಕ್ಷೇತರರು ಆಯ್ಕೆಯಾಗಿದ್ದಾರೆ. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ. ಆದರೆ, ಕಾಂಗ್ರೆಸ್‌ನಿಂದ ಟಿಕೆಟ್ ಸಿಗದವರೇ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. ಅವರೆಲ್ಲ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಕಾಂಗ್ರೆಸ್‌-ಜೆಡಿಎಸ್‌ ಜಂಟಿಯಾಗಿ ಚುಕ್ಕಾಣಿ ಹಿಡಿಯುವ ಸಾಧ್ಯತೆ ದಟ್ಟವಾಗಿದೆ.

ಕಾಂಗ್ರೆಸ್‌ನಲ್ಲಿ ಐದನೇ ಬಾರಿ ಗೆಲುವು ಸಾಧಿಸಿರುವ ಜಯಣ್ಣ ಹಿಂದೆ ಪ್ರಭಾರ ಉಪಾಧ್ಯಕ್ಷರಾಗಿ ಉತ್ತಮ ಆಡಳಿತ ನಡೆಸಿದ್ದಾರೆ. ಈಗ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಮಾತು ಕೇಳಿ ಬಂದಿದೆ. ಅದರ ಜತೆಗೆ ಕಾಂಗ್ರೆಸ್‌ನ ಶ್ರೀನಿವಾಸರೆಡ್ಡಿ, ಪಕ್ಷೇತರ ಸಮೀರ್‌ ಕೂಡ ಆಕಾಂಕ್ಷಿಗಳಾಗಿದ್ದಾರೆ. ಈಚೆಗೆ ಕಾಂಗ್ರೆಸ್‌ ಸೇರಿ ಗೆಲುವು ಸಾಧಿಸಿದ ವಿನಯಕುಮಾರ್‌ ಕೂಡ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಎನ್ನುವುದು ಗಮನಾರ್ಹ.

ಹೆಚ್ಚು ಸ್ಥಾನ ಪಡೆದ ಬಿಜೆಪಿ ಪಕ್ಷೇತರರ ಜತೆಗೆ ಜೆಡಿಎಸ್‌ ಮತ್ತು ಪಕ್ಷೇತರ ನೆರವಿಗಾಗಿ ಕಾಯುತ್ತಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾದ ಕಾರಣ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಲಿದೆ. ಕಾಂಗ್ರೆಸ್‌ನ ಬಣ ರಾಜಕೀಯ ಒಳಗೊಳಗೆ ಹಾಗೇ ಇದೆ. ಅಧ್ಯಕ್ಷರ ಆಯ್ಕೆಯಲ್ಲಿ ಅದು ಕೆಲಸ ಮಾಡಿದಲ್ಲಿ ಮತ್ತೆ ಸಮಸ್ಯೆ ಎದುರಾಗಬಹುದು. ಎನ್‌.ಎಸ್‌. ಬೋಸರಾಜ, ಸೈಯ್ಯದ್‌ ಯಾಸಿನ್‌ ಬಣದ ಕೆಲ ಸದಸ್ಯರು ಗೆಲುವು ಸಾಧಿಸಿದ್ದಾರೆ. ಯಾಸಿನ್‌ ಗುಂಪಿನಲ್ಲಿ ಗುರುತಿಸಿಕೊಂಡ ಜಿಂದಪ್ಪ ಹಿಂದೆ ಆರ್‌ಡಿಎ ಅಧ್ಯಕ್ಷರಾಗಿದ್ದರು. ಈಗ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಬಹುದು.

Advertisement

ಇನ್ನು ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿರುವ ಈ.ವಿನಯಕುಮಾರ ಆರ್ಥಿಕವಾಗಿ ಸದೃಢರಾಗಿದ್ದು, ಅವರ ಹೆಸರೂ ಕೇಳಿ ಬರುತ್ತಿದೆ. ಇವರೂ ಕೂಡ ಯಾಸಿನ್‌ ಬಣದಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಹೇಮಲತಾ ಬೂದೆಪ್ಪ ಅವರು ಕಾಂಗ್ರೆಸ್‌ ಪಕ್ಷದ ಬೆಂಬಲದೊಂದಿಗೆ ಅಧ್ಯಕ್ಷರಾಗಿದ್ದರು. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್ ಕೈ ತಪ್ಪಿದರೂ ಮತದಾರರು ಮಾತ್ರ ಕೈ ಬಿಡಲಿಲ್ಲ. ಅಲ್ಪಸಂಖ್ಯಾತರು ಹೆಚ್ಚಾಗಿರುವ ಕಾರಣ ಅವರೂ ಅಧ್ಯಕ್ಷಗಿರಿಗೆ ಬೇಡಿಕೆಯನ್ನೂ ಇಟ್ಟರೂ ಆಶ್ಚರ್ಯಪಡುವಂತಿಲ್ಲ.

ಈಗಾಗಲೇ ಜಿಲ್ಲಾ ಪಂಚಾಯತಿಯಲ್ಲಿ ಬಿಜೆಪಿ-ಜೆಡಿಎಸ್‌ ಆಡಳಿತ ನಡೆಸುತ್ತಿವೆ. ಅದೇ ತಂತ್ರ ಇಲ್ಲೂ ಅನುಸರಿಸಿದರೆ ಸಾಕಷ್ಟು ಜನ ಅಧ್ಯಕ್ಷ ಗಾದಿಗೆ ಪೈಪೋಟಿ ನಡೆಸಬಹುದು. ಮುಖಂಡ ರವಿ ಜಲ್ದಾರ್‌ ಅವರ ಪತ್ನಿ ಉಮಾ ಜಲ್ದಾರ್‌, ದೊಡ್ಡಮಲ್ಲೇಶಪ್ಪ ಅವರ ಪತ್ನಿ ಸರೋಜಮ್ಮ, ಐದನೇ ವಾರ್ಡ್‌ನಲ್ಲಿ ಗೆಲುವು ಸಾಧಿಸಿದ ಶರಣಬಸವ ಬಲ್ಲಟಗಿ, ಲಲಿತಾ ಕಡಗೋಲ ಅವರೂ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಒಡ್ಡುವ ಸಾಧ್ಯತೆಗಳಿವೆ.

35 ವಾರ್ಡ್‌ಗಳಲ್ಲಿ ಕೇವಲ ಒಂದು ಸ್ಥಾನ ಮಾತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಕಾಂಗ್ರೆಸ್‌ನಿಂದ 34ನೇ ವಾರ್ಡ್‌ನಿಂದ ಗೆಲುವು ಸಾಧಿಸಿದ ತಿಮ್ಮಪ್ಪ ನಾಯಕರಿಗೆ ಉಪಾಧ್ಯಕ್ಷ ಸ್ಥಾನ ನಿಕ್ಕಿಯಾಗಿದೆ.

ಸಿಂಧನೂರು ನಗರಸಭೆ: ಇನ್ನು ಸಿಂಧನೂರು ನಗರಸಭೆ ಅಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆಗೆ ಮೀಸಲಾಗಿದ್ದರಿಂದ ಸಮಸ್ಯೆ ಸೃಷ್ಟಿಯಾಗಿತ್ತು. ಒಟ್ಟು 31 ಸ್ಥಾನಗಳ ಪೈಕಿ 20 ಕಾಂಗ್ರೆಸ್‌ ಗೆದ್ದರೆ, 11 ಜೆಡಿಎಸ್‌ ಗೆಲುವು ಸಾಧಿಸಿತ್ತು. ಆದರೆ, ಅಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆಗೆ ಮೀಸಲಾಗಿದ್ದರಿಂದ ಕಾಂಗ್ರೆಸ್‌ನಲ್ಲಿ ಆ ಜಾತಿಯ ಯಾವ ಸದಸ್ಯರು ಇಲ್ಲ. ಹೀಗಾಗಿ ಅನಿವಾರ್ಯವಾಗಿ 11 ಸ್ಥಾನ ಪಡೆದ ಜೆಡಿಎಸ್‌ಗೆ ಅಧಿಕಾರ ಸಿಗಲಿದೆ. ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲಾಗಲಿದೆ.

ಲಿಂಗಸುಗೂರು ಪುರಸಭೆ: ಲಿಂಗಸುಗೂರು ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. 23 ಸದಸ್ಯ ಬಲದಲ್ಲಿ 13 ಕಾಂಗ್ರೆಸ್‌ ಸದಸ್ಯರು ಗೆಲುವು ಸಾಧಿಸಿದ್ದು, ಬಹುಮತ ಹೊಂದಿದೆ. ಉಳಿದಂತೆ ನಾಲ್ವರು ಜೆಡಿಎಸ್‌, ಇಬ್ಬರು ಬಿಜೆಪಿ ಹಾಗೂ ನಾಲ್ವರು ಪಕ್ಷೇತರ ಸದಸ್ಯರು ಗೆಲುವು ಸಾಧಿಸಿದ್ದಾರೆ.

ದೇವದುರ್ಗ ಪುರಸಭೆ: ದೇವದುರ್ಗ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಇಲ್ಲೂ ಕಾಂಗ್ರೆಸ್‌ 11 ಸ್ಥಾನ ಗೆದ್ದಿದ್ದು, ಅಧಿಕಾರ ಹಿಡಿಯಲಿದೆ. ಉಳಿದಂತೆ ಬಿಜೆಪಿ 8, ಜೆಡಿಎಸ್‌ 3, ಪಕ್ಷೇತರ 1 ಸ್ಥಾನ ಗೆಲುವು ಸಾಧಿಸಿದ್ದಾರೆ.

ಮಾನ್ವಿ ಪುರಸಭೆ: ಮಾನ್ವಿ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಬಿಸಿಎಗೆ ಮೀಸಲಾಗಿದೆ.

ಮುದಗಲ್ಲ ಪುರಸಭೆ: ಮುದಗಲ್ಲ ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ) ಮೀಸಲಾಗಿದೆ.

ಹಟ್ಟಿ ಪಟ್ಟಣ ಪಂಚಾಯಿತಿ: ಹಟ್ಟಿ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಬಿಸಿ(ಬಿ)ಗೆ ಮೀಸಲಾಗಿದೆ. ಸಾಕಷ್ಟು ಕಡೆ ಇನ್ನೂ ಅತಂತ್ರ ಸ್ಥಿತಿಯಿದ್ದು, ಈಗ ಎಲ್ಲ ಪಕ್ಷಗಳಲ್ಲೂ ಲೆಕ್ಕಾಚಾರ ಶುರುವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next