ಎತ್ತ ನೋಡಿದರತ್ತ ಬಿಳಿ, ಗುಲಾಬಿ, ಕೆಂಪು, ಹಳದಿ.. ವರ್ಣದ ಹೂವುಗಳು. ಅದರ ನಡುವೆ ಹಾದುಹೋಗುತ್ತಿದ್ದರೆ ಕನಸಿನಲ್ಲಿ ಕಂಡ ಸ್ವರ್ಗಲೋಕದಲ್ಲಿದ್ದೇವೆ ಎನ್ನುವ ಭಾವನೆ… ಭಾರತದಲ್ಲೀಗ ವಸಂತ ಋತುವಿನ ಸ್ವಾಗತದ ತಯಾರಿಯಾಗುತ್ತಿದ್ದರೆ ಜಪಾನ್‌ನಲ್ಲಿ ಹೊಸ ವರ್ಷದ ಆರಂಭದ ಸಂಭ್ರಮ ಕಳೆಗಟ್ಟಿದ್ದು, ಚೆರ್ರಿ ಅಥವಾ ಸಕುರಾ ಹೂವುಗಳಿಂದ ಧರೆಯೇ ಸಿಂಗಾರಗೊಂಡಿದೆ.
ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಿದ ಬಳಿ ಜಪಾನ್ ನಾದ್ಯಂತ ಜನರು ಚೆರ್ರಿ ಹೂವು ವೀಕ್ಷಣೆಯ ಋತುವನ್ನು ಆಚರಿಸುತ್ತಿದ್ದಾರೆ. ಜಪಾನ್‌ನ ಹಲವು ಭಾಗಗಳಲ್ಲಿ ಮರಗಳು ಹೂವು ಬಿಟ್ಟಿರುವ ಚೆರ್ರಿ ಮರಗಳ ಸೌಂದರ್ಯವನ್ನು ಆನಂದಿಸುವುದು ಜಪಾನಿನ ಸಾಂಪ್ರದಾಯಿಕ ಪದ್ಧತಿಯಾಗಿದೆ.
ಚೆರ್ರಿ ಹೂವಿನ ಸೌಂದರ್ಯವು ಜಪಾನಿ ಸಂಸ್ಕೃತಿಯಲ್ಲಿ ಶ್ರೀಮಂತ ಅರ್ಥವನ್ನು ಹೊಂದಿರುವ ಸಂಕೇತವಾಗಿದೆ. ಚೆರ್ರಿ ಹೂವುಗಳು ಅರಳುತ್ತವೆ ಮತ್ತು ಸಾಮೂಹಿಕವಾಗಿ ನೆಲಕ್ಕೆ ಉರುಳುತ್ತವೆ. ಇದು ಶುದ್ಧತೆಯ ಸೂಚಕವಾಗಿದೆ ಎನ್ನುತ್ತಾರೆ ಜಪಾನೀಯರು. ಮಾರ್ಚ್ ತಿಂಗಳಾಂತ್ಯದಿಂದ ಎಪ್ರಿಲ್ ಆರಂಭದಲ್ಲಿ ಹೆಚ್ಚು ಹೂವುಗಳು ಅರಳುವುದರಿಂದ ಈ ಸಂದರ್ಭವನ್ನು ಇಲ್ಲಿ ಹೊಸ ವರ್ಷದ ಪ್ರಾರಂಭವೆಂದೇ ಆಚರಿಸಲಾಗುತ್ತದೆ.
ಜಪಾನ್‌ನ ಹಲವು ಭಾಗಗಳಲ್ಲಿ ಈ ವಾರ ಮರಗಳು ಪೂರ್ಣವಾಗಿ ಹೂವುಗಳಿಂದ ತುಂಬಿಕೊಂಡಿವೆ. ಈ ಹೂವುಗಳ ವೀಕ್ಷಣೆಗಾಗಿ ಇಂಪೀರಿಯಲ್ ಪ್ಯಾಲೇಸ್‌ನ ಸಮೀಪವಿರುವ ಪ್ರಸಿದ್ಧ ಹನಾಮಿ ಅಥವಾ ಚೆರ್ರಿ ಬ್ಲಾಸಮ್ ವೀಕ್ಷಣಾ ಸ್ಥಳವಾದ ಚಿಡೋರಿಗಾಫುಚಿ ಪಾರ್ಕ್‌ಗೆ ನಿತ್ಯವೂ ಸಾವಿರಾರು ಜನರು ಸೇರುತ್ತಾರೆ. ಇಲ್ಲಿ ಮರಗಳ ಕೆಳಗೆ ಪಾರ್ಟಿಗಳನ್ನು ಆಯೋಜಿಸುವುದು, ಬೋಟ್ ವಿಹಾರ ಮಾಡುವ ಮೂಲಕ ಋತುವನ್ನು ಆಚರಿಸುವುದು ವಿಶೇಷ.
ಸಂಪ್ರದಾಯ
ಜಪಾನ್‌ನಲ್ಲಿ ಚೆರ್ರಿ ಮರಗಳ ಹೂ ಬಿಡುವಿಕೆಯನ್ನು ಆಚರಿಸುವ ಸಂಪ್ರದಾಯ ಶತಮಾನಗಳಷ್ಟು ಹಳೆಯದು. 1912ರ ಮಾ. 26ರಂದು ಯುನೈಟೆಡ್ ಸ್ಟೇಟ್ಸ್‌ನ ಜನರಿಗೆ ಸ್ನೇಹದ ಉಡುಗೊರೆಯಾಗಿ ಜಪಾನ್‌ನಿಂದ ಚೆರ್ರಿ ಮರಗಳನ್ನು ನೀಡಲಾಯಿತು.
ಅನಂತರದ ದಿನಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಚೆರ್ರಿ ಗಿಡಗಳನ್ನು ನೆಡಲಾಯಿತು. 1935ರಲ್ಲಿ ಮೊದಲ ಬಾರಿಗೆ ಚೆರ್ರಿ ಬ್ಲೋಸಮ್ ಫೆಸ್ಟಿವಲ್ ಅನ್ನು ಅನೇಕ ನಾಗರಿಕ ಗುಂಪುಗಳು ಸೇರಿ ಆಚರಿಸಿದ್ದು, ಅನಂತರ ದಿನಗಳಲ್ಲಿ ಇದು ವಾರ್ಷಿಕ ಉತ್ಸವವಾಯಿತು.