Advertisement

Chennapattana By Poll: ಕಣಕ್ಕೆ ನಿಖಿಲ್‌, ಜಯಮುತ್ತು? ಇನ್ನೂ ಗೊಂದಲದಲ್ಲಿ ಜೆಡಿಎಸ್‌

06:02 AM Oct 24, 2024 | Team Udayavani |

ಬೆಂಗಳೂರು: ಸಿ.ಪಿ. ಯೋಗೇಶ್ವರ್‌ ಅವರು ಕಾಂಗ್ರೆಸ್‌ ಸೇರಿರುವುದರಿಂದ ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದ್ದು, ಜೆಡಿಎಸ್‌ ಮೇಲೆ ಭಾರ ಹಾಕಿ ಕುಳಿತಿದ್ದ ಬಿಜೆಪಿಯಲ್ಲೂ ಗೊಂದಲ ನಿರ್ಮಾಣವಾಗಿದೆ. ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನ ಬಾಕಿಯಿದ್ದು, ಗುರುವಾರ ರಾತ್ರಿ ಅಥವಾ ಶುಕ್ರವಾರ ಬೆಳಗ್ಗೆ ವೇಳೆಗೆ ಅಂತಿಮ ಚಿತ್ರಣ ಸಿಗುವ ಸಾಧ್ಯತೆಗಳಿವೆ.

Advertisement

ಈ ಸಂಬಂಧ ಬುಧವಾರ ರಾತ್ರಿ ಕರೆಯಲಾಗಿದ್ದ ಎನ್‌ಡಿಎ ಸಮನ್ವಯ ಸಭೆ ಗುರುವಾರಕ್ಕೆ ಮುಂದೂ ಡಲ್ಪಟ್ಟಿದೆ. ಈಗ ಕಾಂಗ್ರೆಸ್‌ ಅಭ್ಯರ್ಥಿ ಯಾರು ಎಂಬುದು ಸ್ಪಷ್ಟವಾಗಿರುವುದರಿಂದ ಜಯಮುತ್ತು ಸ್ಪರ್ಧೆ ಇಲ್ಲ ಎಂದೇ ಹೇಳಲಾಗುತ್ತಿದೆ. ಸಂಸದ ಡಾ| ಸಿ.ಎನ್‌. ಮಂಜುನಾಥ್‌ ಅವರ ಪತ್ನಿ ಅನಸೂಯಾ ಅವರ ಹೆಸರು ಕೇಳಿ ಬಂದರೂ ಅವರು ಒಪ್ಪದ ಕಾರಣ ನಿಖಿಲ್‌ ಅವರನ್ನೇ ಅಂತಿಮಗೊಳಿಸುವ ಸಾಧ್ಯತೆ ಇದೆ.

ಕೊನೆಯ ಕ್ಷಣದವರೆಗೆ ಯೋಗೇಶ್ವರ್‌ ಅವರೇ ಎನ್‌ಡಿಎ ಅಭ್ಯರ್ಥಿ ಆಗಲಿದ್ದಾರೆ ಎನ್ನುತ್ತಿದ್ದ ಮಿತ್ರಪಕ್ಷಗಳಿಗೆ ಸಿಪಿವೈ ಆಘಾತ ನೀಡಿ ಬುಧವಾರ ಏಕಾಏಕಿ ಕಾಂಗ್ರೆಸ್‌ ಕೈ ಹಿಡಿದರು. ಗುರುವಾರ ನಾಮಪತ್ರವನ್ನೂ ಸಲ್ಲಿಸಲಿದ್ದಾರೆ. ಇದರಿಂದ ಮೈತ್ರಿಕೂಟದ ಮುಂದಿದ್ದ ಆಯ್ಕೆಯ ಆಯಾಮ ಬೇರೆಡೆ ಹೊರಳಿದೆ. ಅಲ್ಲದೆ ರಾಜಕೀಯ ಲೆಕ್ಕಾಚಾರಗಳೂ ಬುಡಮೇಲಾಗಿದ್ದು, ಅಭ್ಯರ್ಥಿ ಆಯ್ಕೆ ಇನ್ನೂ ನಿಗೂಢವಾಗಿದೆ.

ಎನ್‌ಡಿಎ ಸಮನ್ವಯ ಸಭೆ ಮುಂದೂಡಿಕೆ
ಬುಧವಾರದ ಬೆಳವಣಿಗೆಯ ಬೆನ್ನಲ್ಲೇ ಜೆಡಿಎಸ್‌ ವರಿಷ್ಠ ದೇವೇಗೌಡರನ್ನು ಭೇಟಿಯಾದ ಯುವ ಘಟಕದ ಅಧ್ಯಕ್ಷ ನಿಖೀಲ್‌ ಕುಮಾರಸ್ವಾಮಿ ದಿನದ ಬೆಳವಣಿಗೆಯ ವರದಿ ಒಪ್ಪಿಸಿದ್ದಾರೆ. ಈ ಮಧ್ಯೆ ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ವಿಧಾನಸಭೆಯ ವಿಪಕ್ಷ ನಾಯಕ ಆರ್‌. ಅಶೋಕ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ದೂರವಾಣಿ ಕರೆ ಮಾಡಿ ಸಮನ್ವಯ ಸಭೆಗೆ ಆಹ್ವಾನಿಸಿದರು. ಸಂಜೆ 7 ಗಂಟೆಗೆ ಸಭೆ ಸೇರುವ ನಿರೀಕ್ಷೆ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಗುರುವಾರಕ್ಕೆ ಮುಂದೂಡಲಾಗಿದೆ.

ಜಯಮುತ್ತು ಸ್ಪರ್ಧೆ ಇಲ್ಲ
ಜೆಡಿಎಸ್‌ನಲ್ಲಿ ನಿಖೀಲ್‌ ಸ್ಪರ್ಧೆಗೆ ಕಾರ್ಯಕರ್ತರಿಂದ ಒತ್ತಡವಿದ್ದು, ಇನ್ನೊಂದೆಡೆ ಚನ್ನಪಟ್ಟಣ ತಾ.ಪಂ. ಅಧ್ಯಕ್ಷ ಜಯಮುತ್ತು ಅವರಿಗೆ ಟಿಕೆಟ್‌ ನೀಡಬೇಕೆಂದು ಕುಮಾರಸ್ವಾಮಿ ಇರಾದೆಯಾಗಿತ್ತು. ಯೋಗೇಶ್ವರ್‌ ಸ್ವತಂತ್ರವಾಗಿ ಸ್ಪರ್ಧಿಸಿ, ಕಾಂಗ್ರೆಸ್‌ನಿಂದ ಡಿ.ಕೆ. ಸುರೇಶ್‌ ಅವರು ಕಣಕ್ಕಿಳಿದಿದ್ದರೆ ಜಯಮುತ್ತು ಸ್ಪರ್ಧಿಸುವ ಮೂಲಕ ತ್ರಿಕೋನ ಸ್ಪರ್ಧೆ ಏರ್ಪಡುವ ಲೆಕ್ಕಾಚಾರ ಜೆಡಿಎಸ್‌ನಲ್ಲಿ ನಡೆದಿತ್ತು. ಆದರೆ ಕಾಂಗ್ರೆಸ್‌ ಅಭ್ಯರ್ಥಿ ಯೋಗೇಶ್ವರ್‌ ಆಗಿರುವುದರಿಂದ ನೇರ ಸ್ಪರ್ಧೆ ಏರ್ಪಡಲಿದೆ. ಸೋತರೆ ಕುಟುಂಬದವರ ಬದಲಿಗೆ ಕಾರ್ಯಕರ್ತರನ್ನು ಸ್ಪರ್ಧೆಗಿಳಿಸಿ ಬಲಿ ಕೊಡಲಾಗಿದೆ ಎಂಬ ಆರೋಪ ಕೇಳಬೇಕಾಗುತ್ತದೆ. ಹೀಗಾಗಿ ಜಯಮುತ್ತು ಅವರನ್ನು ಕಣಕ್ಕಿಳಿಸಬೇಕೇ ಬೇಡವೇ ಎಂಬ ಗೊಂದಲ ಜೆಡಿಎಸ್‌ನಲ್ಲಿ ಮನೆ ಮಾಡಿದೆ.

Advertisement

ನಿಖಿಲ್‌ಗೆ ಟಿಕೆಟ್‌?
ಸಂಸದ ಡಾಣ ಮಂಜುನಾಥ್‌ ಅವರ ಪತ್ನಿ ಅನುಸೂಯಾ ಅವರನ್ನು ಕಣಕ್ಕಿಳಿಸುವ ಚಿಂತನೆಯೂ ನಡೆದಿತ್ತು. ಆದರೆ ಇದಕ್ಕೆ ಡಾಣ ಮಂಜುನಾಥ್‌ ಮತ್ತು ಅನುಸೂಯಾ ಒಪ್ಪಿಲ್ಲ. ಹೀಗಾಗಿ ಈ ಯೋಚನೆಯನ್ನೂ ಜೆಡಿಎಸ್‌ ಕೈಬಿಟ್ಟಿದೆ. ಚನ್ನಪಟ್ಟಣದಲ್ಲಿ ನೇರ ಸ್ಪರ್ಧೆ ಏರ್ಪಡುವುದರಿಂದ ಅಂತಿಮವಾಗಿ ನಿಖೀಲ್‌ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸುವ ನಿರ್ಣಯ ಕೈಗೊಂಡರೂ ಅಚ್ಚರಿಯಿಲ್ಲ ಎನ್ನಲಾಗಿದೆ.

ನಾನು ಸ್ಪರ್ಧಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಲಕ್ಷಾಂತರ ಕಾರ್ಯಕರ್ತರ ದುಡಿಮೆಯಿಂದ ಕಟ್ಟಿರುವ ಪಕ್ಷ ನಮ್ಮದು. ಎರಡೂ ಪಕ್ಷಗಳ ಮುಖಂಡರು ಕುಳಿತು ಚರ್ಚೆ ಮಾಡಿ ಅಭ್ಯರ್ಥಿಯನ್ನು ತೀರ್ಮಾನ ಮಾಡುತ್ತಾರೆ. ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಅಧಿಕಾರ ಸಿಕ್ಕಿದರೆ ಅದು ನನಗೆ ಸಿಕ್ಕಿದ ಅಧಿಕಾರ.
– ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next