ಅಬುಧಾಬಿ: ರುತುರಾಜ್ ಗಾಯಕ್ವಾಡ್ ಅಮೋಘ ಅರ್ಧಶತಕ ಹಾಗೂ ರಾಯಡು, ಡು- ಪ್ಲೆಸಿಸ್ ಮಿಂಚಿನ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ , ದೀಪಕ್ ಹೂಡಾ ಸ್ಪೋಟಕ ಅರ್ಧಶತಕದ ನೆರವಿನಿಂದ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ 18. 5 ಓವರ್ ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್, ಭರ್ಜರಿ ಬ್ಯಾಟಿಂಗ್ ಮೂಲಕ ಪಂಜಾಬ್ ಬೌಲರ್ ಗಳ ಬೆವರಿಳಿಸಿದರು. ಬೌಂಡರಿ, ಸಿಕ್ಸರ್ ಗಳ ಮೂಲಕ ಉತ್ತಮ ಜೊತೆಯಾಟ ನಡೆಸಿದ ಈ ಜೋಡಿ 9. 5 ಓವರ್ ಗಳಲ್ಲಿ 82 ರನ್ ಪೇರಿಸಿತು. ಈ ವೇಳೆ 48 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿದ್ದ ಡು ಪ್ಲೆಸಿಸ್ ಕ್ರಿಸ್ ಜೋರ್ಡನ್ ಬೌಲಿಂಗ್ ನಲ್ಲಿ ರಾಹುಲ್ ಗೆ ಕ್ಯಾಚಿತ್ತು ಹೊರನಡೆದರು.
ನಂತರ ಬಂದ ಅಂಬಟಿ ರಾಯುಡು ಕೂಡ ತಂಡಕ್ಕೆ ಭದ್ರ ಬುನಾದಿ ಒದಗಿಸಿಕೊಟ್ಟರು. ರುತುರಾಜ್ ಗಾಯಕ್ವಾಡ್ ಜೊತೆಗೂಡಿ ತಂಡವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿದರು. ಉತ್ತಮವಾಗಿ ಆಡಿದ ಗಾಯಕ್ವಾಡ್ 1 ಸಿಕ್ಸ್ ಮತ್ತು 4 ಬೌಂಡರಿಗಳ ನೆರವಿನಿಂದ 62 ರನ್ ಗಳಿಸಿ ಅರ್ಧಶತಕದ ಸಂಭ್ರಮ ಆಚರಿಸಿಕೊಂಡರು.
ಈ ಜೋಡಿ 18. 5 ಓವರ್ ಗಳಲ್ಲಿ 154 ರನ್ ಗಳ ಗೆಲುವಿನ ಗುರಿ ತಲುಪಿದರು. ರಾಯುಡು ಕೂಡ 30 ಎಸೆತಗಳಲ್ಲಿ 30 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಪಂಜಾಬ್ ಪರ ಕ್ರಿಸ್ ಜೋರ್ಡಾನ್ 1 ವಿಕೆಟ್ ಪಡೆದು ಮಿಂಚಿದರು.