ಹೊಸದಿಲ್ಲಿ: “ಮಿಚಾಂಗ್’ ಚಂಡಮಾರುತದ ಹಾವಳಿಯಿಂದ ತತ್ತರಿಸಿರುವ ಚೆನ್ನೈಗೆ “ದೇಶದ ಮೊತ್ತಮೊದಲ ನಗರ ಪ್ರವಾಹ ನಿಯಂತ್ರಣ ವ್ಯವಸ್ಥೆ’ (ಅರ್ಬನ್ ಫ್ಲಡ್ ಮಿಟಿಗೇಶನ್ ಪ್ರಾಜೆಕ್ಟ್) ಲಭಿಸಲಿದೆ. ಅದಕ್ಕಾಗಿ ಕೇಂದ್ರ ಸರಕಾರದ ವತಿಯಿಂದ 561 ಕೋಟಿ ರೂ. ನೆರವು ನೀಡುವ ಪ್ರಸ್ತಾವಕ್ಕೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರು ಅನುಮೋದನೆ ನೀಡಿದ್ದಾರೆ.
ಚಂಡಮಾರುತದಿಂದ ಉಂಟಾಗಿರುವ ಹಾನಿಗೆ ಕೇಂದ್ರ ಸರಕಾರದಿಂದ ಮಧ್ಯಾಂತರ ಪರಿಹಾರವಾಗಿ 5 ಸಾವಿರ ಕೋಟಿ ರೂ. ಪರಿಹಾರ ನೀಡಬೇಕು ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಮನವಿ ಮಾಡಿರುವಂತೆಯೇ ಈ ಕೊಡುಗೆ ಲಭ್ಯವಾಗಿದೆ.
ನಗರ ಪ್ರದೇಶಗಳಲ್ಲಿ ಪ್ರವಾಹದ ನೀರು ನಿಯಂತ್ರಿಸುವ ನಿಟ್ಟಿನಲ್ಲಿ ನಗರದ ಒಳಚರಂಡಿ ವ್ಯವಸ್ಥೆ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ಬಲಪಡಿಸುವಲ್ಲಿ ಈ ಯೋಜನೆ ನೆರವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ದೇಶದಲ್ಲಿಯೇ ಮೊದಲ ಬಾರಿಗೆ ಇಂಥ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣ ನಿಧಿ (ಎನ್‌ಡಿಎಂಎಫ್)ಯ ಅನ್ವಯ 561 ಕೋಟಿ ರೂ. ನೆರವು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಗುರುವಾರ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದು, ತ.ನಾಡು ಸಿಎಂ ಸ್ಟಾಲಿನ್ ಜತೆ ಸಭೆಯನ್ನೂ ನಡೆಸಿದ್ದಾರೆ. ತ.ನಾಡಿಗೆ 2ನೇ ಹಂತದ ಪರಿಹಾರವಾಗಿ 450 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಪ್ರಧಾನಿ ಮೋದಿಯವರು ಕೇಂದ್ರ ಗೃಹ ಇಲಾಖೆಗೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.
ಈ ನಡುವೆ, ಮಿಚಾಂಗ್ ಚಂಡಮಾರುತ ಸೃಷ್ಟಿಸಿರುವ ಅವಾಂತರದಿಂದ ಇನ್ನೂ ಚೆನ್ನೈ ಮುಕ್ತಗೊಂಡಿಲ್ಲ. ಕಂಚೀಪುರಂ ಜಿಲ್ಲೆಯ ಪಟ್ಟಾಲಂ, ಪಟ್ಟಿನಪಕ್ಕಂ, ವರದರಾಜಪುರಂ ಸೇರಿದಂತೆ ಹಲವು ಭಾಗಗಳು ಇನ್ನೂ ಜಲಾವೃತಗೊಂಡಿದ್ದು, ಗುರುವಾರ ಸ್ವಯಂಸೇವಕರು ಈ ಪ್ರದೇಶಗಳಿಗೆ ಭೇಟಿ ನೀಡಿ ಆಹಾರದ ಪ್ಯಾಕೆಟ್‌ಗಳು, ನೀರಿನ ಬಾಟಲಿಗಳನ್ನು ಸಂತ್ರಸ್ತರಿಗೆ ವಿತರಿಸಿದ್ದಾರೆ.