Advertisement

ಚೆನ್ನೈ-ಡೆಲ್ಲಿ: ಲೆಕ್ಕದ ಭರ್ತಿಯ ಪಂದ್ಯ

06:25 AM May 18, 2018 | Team Udayavani |

ಹೊಸದಿಲ್ಲಿ: ಈಗಾಗಲೇ ಕೂಟದಿಂದ ಹೊರಬಿದ್ದಿರುವ ಡೆಲ್ಲಿ ಡೇರ್‌ಡೆವಿಲ್ಸ್‌ ಹಾಗೂ ಪ್ಲೇ-ಆಫ್ಗೆ ಲಗ್ಗೆ ಇರಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ “ಲೆಕ್ಕದ ಭರ್ತಿ’ಯ ಲೀಗ್‌ ಪಂದ್ಯ ಶುಕ್ರವಾರ ರಾತ್ರಿ ಕೋಟ್ಲಾ ಅಂಗಳದಲ್ಲಿ ಸಾಗಲಿದೆ.

Advertisement

2 ವರ್ಷಗಳ ನಿಷೇಧ ಮುಗಿಸಿ ಬಂದಿರುವ ಧೋನಿ ಸಾರಥ್ಯದ ಚೆನ್ನೈ ತಂಡ ಅಮೋಘ ಪ್ರದರ್ಶನ ಕಾಯ್ದುಕೊಂಡು ಬಂದಿದ್ದು, 12 ಪಂದ್ಯಗಳಿಂದ 16 ಅಂಕ ಸಂಪಾದಿಸಿ ದ್ವಿತೀಯ ಸ್ಥಾನ ಅಲಂಕರಿಸಿದೆ. ಇನ್ನೆರಡೂ ಪಂದ್ಯ ಗೆದ್ದರೆ ಲೀಗ್‌ ಹಂತದ ಅಗ್ರಸ್ಥಾನಿಯಾಗುವ ಎಲ್ಲ ಅವಕಾಶಗಳಿವೆ. ಆದರೆ 12ರಲ್ಲಿ ಕೇವಲ 3 ಪಂದ್ಯಗಳನ್ನಷ್ಟೇ ಜಯಿಸಿರುವ ಡೆಲ್ಲಿ ಪಾಲಿಗೆ ಇಲ್ಲಿನ ಫ‌ಲಿತಾಂಶದಿಂದ ಯಾವುದೇ ಲಾಭವಿಲ್ಲ. ಗೆದ್ದು ಒಂದಿಷ್ಟು ಪ್ರತಿಷ್ಠೆ ಉಳಿಸಿಕೊಳ್ಳುವುದಷ್ಟೇ ಶ್ರೇಯಸ್‌ ಅಯ್ಯರ್‌ ಬಳಗದ ಮುಂದಿರುವ ಗುರಿ.

ಪುಣೆಯಲ್ಲಿ ನಡೆದ ಇತ್ತಂಡಗಳ ಮೊದಲ ಸುತ್ತಿನ ಪಂದ್ಯ ಟಿ20 ಪಂದ್ಯದ ಅಷ್ಟೂ ರೋಮಾಂಚನವನ್ನು ತೆರೆದಿರಿಸಿತ್ತು. ಚೆನ್ನೈ 4 ವಿಕೆಟಿಗೆ 211 ರನ್‌ ಪೇರಿಸಿದರೆ, ಡೆಲ್ಲಿ 5ಕ್ಕೆ 198 ರನ್‌ ಬಾರಿಸಿ 13 ರನ್ನುಗಳ ಸೋಲನುಭವಿಸಿತ್ತು. ಇದಕ್ಕೆ ತವರಿನಂಗಳದಲ್ಲಿ ಸೇಡು ತೀರಿಸಿಕೊಳ್ಳುವುದು ಡೆಲ್ಲಿ ಮುಂದಿರುವ ಮತ್ತೂಂದು ಸವಾಲು.

ಯುವಕರಿಗೆ ಅವಕಾಶವಿತ್ತ ಡೆಲ್ಲಿ
ಆರ್‌ಸಿಬಿ ಎದುರಿನ ಕಳೆದ ಪಂದ್ಯದಲ್ಲಿ ಡೆಲ್ಲಿ ಮೂವರು ಯುವ ಆಟಗಾರರಿಗೆ ಐಪಿಎಲ್‌ ಕ್ಯಾಪ್‌ ನೀಡಿತ್ತು. ನೇಪಾಲದ ಸಂದೀಪ್‌ ಲಮಿಚಾನೆ, ದಕ್ಷಿಣ ಆಫ್ರಿಕಾದ ಜೂನಿಯರ್‌ ಡಾಲ ಮತ್ತು ಭಾರತದ ಅಭಿಷೇಕ್‌ ಶರ್ಮ. ಇವರಲ್ಲಿ ಲಮಿಚಾನೆ ಮತ್ತು ಅಭಿಷೇಕ್‌ ಸಾಧನೆ ಅಮೋಘ ಮಟ್ಟದಲ್ಲಿತ್ತು. ಆದರೆ ಡಾಲಾ 3 ಓವರ್‌ಗಳಲ್ಲಿ 34 ರನ್‌ ನೀಡಿ ವಿಕೆಟ್‌ ಕೀಳುವಲ್ಲಿ ವಿಫ‌ಲರಾಗಿದ್ದರು.

ಕೋಟ್ಲಾ ಅಂಗಳದಲ್ಲೇ ನಡೆದ ಈ ಪಂದ್ಯದಲ್ಲಿ ವೀಕ್ಷಕರು ಡೆಲ್ಲಿಗಿಂತ ಹೆಚ್ಚಾಗಿ ವಿರಾಟ್‌ ಕೊಹ್ಲಿ ಸಾರಥ್ಯದ ಆರ್‌ಸಿಬಿಗೆ ಹೆಚ್ಚಿನ ಬೆಂಬಲ ನೀಡಿದ್ದರು. ಕೊಹ್ಲಿ ನಮ್ಮವ ಎಂಬುದೇ ಇದಕ್ಕೆ ಕಾರಣ. ಆದರೆ ಶುಕ್ರವಾರ ರಾತ್ರಿ ಚೆನ್ನೈ ಬದಲು ತವರಿನ ಡೆಲ್ಲಿ ತಂಡಕ್ಕೇ ಹೆಚ್ಚಿನ ಪ್ರೋತ್ಸಾಹ ಲಭಿಸಬಹುದು. ಚೆನ್ನೈ ತಂಡದಲ್ಲಿರುವ ದಿಲ್ಲಿಯ ಆಟಗಾರರೆಂದರೆ ಧ್ರುವ ಶೋರಿ, ಕ್ಷಿತಿಜ್‌ ಶರ್ಮ, ಚೈತನ್ಯ ಬಿಶ್ನೋಯಿ ಮಾತ್ರ. ಆದರೆ ಇವರ್ಯಾರೂ ಸ್ಟಾರ್‌ ಆಟಗಾರರಲ್ಲ. ಅಲ್ಲದೇ ಇವರಿಗೆ ಅವಕಾಶ ಲಭಿಸುವ ಸಾಧ್ಯತೆ ಕೂಡ ಇಲ್ಲ.

Advertisement

ಪೃಥ್ವಿ ಶಾ, ರಿಷಬ್‌ ಪಂತ್‌, ಶ್ರೇಯಸ್‌ ಅಯ್ಯರ್‌ ಅವರೆಲ್ಲ ಬ್ಯಾಟಿಂಗ್‌ ಸ್ಟಾರ್‌ಗಳಾಗಿದ್ದು, ಇವರ ಆಟವನ್ನು ದಿಲ್ಲಿ ವೀಕ್ಷಕರು ಕಣ್ತುಂಬಿಸಿಕೊಳ್ಳಬಹುದು.

ಚೆನ್ನೈ ಪರಿಪೂರ್ಣ ಪ್ರದರ್ಶನ
ಚೆನ್ನೈ ಈ ಪಂದ್ಯಾವಳಿಯಲ್ಲಿ ಪರಿಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸುತ್ತ ಬಂದಿದೆ. 535 ರನ್‌ ಪೇರಿಸಿರುವ ಆರಂಭಕಾರ ಅಂಬಾಟಿ ರಾಯುಡು ತಂಡದ ಪ್ರಮುಖ ಆಟಗಾರನಾಗಿದ್ದು, ಇವರ ಹಾಗೂ ಶೇನ್‌ ವಾಟ್ಸನ್‌ ಜೋಡಿಯ ಓಪನಿಂಗ್‌ ಚೆನ್ನೈ ಇನ್ನಿಂಗ್ಸಿಗೆ ಭದ್ರ ಅಡಿಪಾಯ ನಿರ್ಮಿಸುತ್ತ ಬಂದಿದೆ. ರೈನಾ, ಧೋನಿ, ಡು ಪ್ಲೆಸಿಸ್‌, ಬ್ರಾವೊ ಬ್ಯಾಟಿಂಗ್‌ ಸರದಿಯ ಆಪಾಯಕಾರಿ ಆಟಗಾರರು.ಪುಣೆಯಲ್ಲಿ ನಡೆದ ಕಳೆದ ಪಂದ್ಯದಲ್ಲಿ ಹೈದರಾಬಾದ್‌ಗೆ 8 ವಿಕೆಟ್‌ಗಳ ಸೋಲುಣಿಸಿದ್ದು ಚೆನ್ನೈ ತಂಡದ ಪ್ರಚಂಡ ಫಾರ್ಮ್ಗೆ ಸಾಕ್ಷಿ. ಸಣ್ಣ ಅಂಗಳವಾದ ಕೋಟ್ಲಾದಲ್ಲಿ ಇತ್ತಂಡಗಳ ಬ್ಯಾಟಿಂಗ್‌ ಮೇಲುಗೈ ಸಾಧಿಸುವ ನಿರೀಕ್ಷೆ ದಟ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next