Advertisement

ಆರ್‌ಸಿಬಿ-ಚೆನ್ನೈ : ಇಬ್ಬರಿಗೂ ಗೆಲುವು ಅತ್ಯಗತ್ಯ

11:08 PM May 03, 2022 | Team Udayavani |

ಪುಣೆ: ಈ ಸಲ ತಂಡದ ಹಣೆಬರಹ ಬದಲಾದಂತಿದೆ ಎಂಬ ರೀತಿಯಲ್ಲಿ ಆಟ ಆರಂಭಿಸಿ, ಈಗ ಸೋಲಿನೊಂದಿಗೆ ಗಾಢ ನಂಟು ಬೆಳೆಸಿರುವ ಆರ್‌ಸಿಬಿ ಬುಧವಾರದ ಮಹತ್ವದ ಮುಖಾಮುಖಿಯಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.

Advertisement

ಇಲ್ಲಿ ಗೆದ್ದು, ಮೊದಲ ಸುತ್ತಿನ ಸೋಲಿಗೆ ಸೇಡು ತೀರಿಸಿಕೊಂಡರೆ ಡು ಪ್ಲೆಸಿಸ್‌ ಬಳಗದ ಪ್ಲೇ ಆಫ್ ಮೇಲೆ ಒಂದು ಹಂತದ ತನಕ ನಿರೀಕ್ಷೆ ಇರಿಸಿಕೊಳ್ಳಬಹುದು. ಸದ್ಯ ಹತ್ತರಲ್ಲಿ 5 ಪಂದ್ಯಗಳನ್ನಷ್ಟೇ ಜಯಿಸಿರುವ ಆರ್‌ಸಿಬಿ ಉಳೆದೆಲ್ಲ ಪಂದ್ಯಗಳನ್ನು ದೊಡ್ಡ ಅಂತರದಿಂದ ಜಯಿಸಬೇಕಾದ ಒತ್ತಡಕ್ಕೆ ಸಿಲುಕಿದೆ. ರನ್‌ರೇಟ್‌ ಕೂಡ ಮೈನಸ್‌ನಲ್ಲಿದೆ.

ಚೆನ್ನೈ ತಂಡದ್ದು ಇದಕ್ಕೆ ತದ್ವಿರುದ್ಧ ಕೇಸ್‌. ಅದು ಆರಂಭದಲ್ಲಿ ಸತತವಾಗಿ ಸೋತು, ಇನ್ನೇನು ಹೊರಬೀಳಲಿದೆ ಎನ್ನುವಾಗಲೇ ಗೆಲುವಿನ ಲಯ ಕಾಣಲಾರಂಭಿಸಿದೆ. ಮಹೇಂದ್ರ ಸಿಂಗ್‌ ಧೋನಿಗೆ ಮರಳಿ ನಾಯಕತ್ವ ಲಭಿಸಿದ ಬಳಿಕ ತಂಡದ ಚಹರೆ ಹಾಗೂ ಆಟದ ರೀತಿಯೆರಡೂ ಬದಲಾಗಿದೆ. ಎರಡರಲ್ಲೂ ಧನಾತ್ಮಕ ಸಂಗತಿಗಳೇ ಗೋಚರಿಸುತ್ತಿವೆ.

ಆದರೂ ಚೆನ್ನೈ ಮುಂದಿರುವ ಸವಾಲು ಸುಲಭದ್ದಲ್ಲ. ಅದು 9 ಪಂದ್ಯಗಳಲ್ಲಿ ಗೆದ್ದದ್ದು 3 ಮಾತ್ರ. ಉಳಿದ ಐದೂ ಪಂದ್ಯಗಳನ್ನು ಗೆದ್ದು, ರನ್‌ರೇಟ್‌ ಸುಧಾರಿಸಿಕೊಂಡರೆ 4ನೇ ಸ್ಥಾನಕ್ಕೆ ಪೈಪೋಟಿ ನೀಡಬಹುದು. ಆದರೂ ಇದು ಖಾತ್ರಿಯೇನಲ್ಲ. ಆದರೆ ಉಳಿದ ತಂಡಗಳ ಮುನ್ನಡೆಗೆ ಅಡ್ಡಗಾಲಿಕ್ಕಬಹುದು. ಚೆನ್ನೈಯಿಂದ ಇಂಥ ಸ್ಥಿತಿ ಎದುರಿಸುತ್ತಿರುವ ತಂಡಗಳಲ್ಲಿ ಆರ್‌ಸಿಬಿ ಕೂಡ ಒಂದು!

ಆರ್‌ಸಿಬಿ ಸಾಧನೆ ಸಾಲದು
ಆರ್‌ಸಿಬಿಯ ಆರಂಭ ಹೇಗೆಯೇ ಇರಲಿ, ಈ 10 ಪಂದ್ಯಗಳ ಒಟ್ಟು ಸಾಧನೆಯನ್ನು ಗಮನಿಸುವಾಗ ಕರ್ನಾಟಕದ ಫ್ರಾಂಚೈಸಿಯ ಪ್ರದರ್ಶನ ಏನೂ ಸಾಲದು. ಈವರೆಗೆ ತಂಡದಿಂದ ದಾಖಲಾದದ್ದು 6 ಅರ್ಧ ಶತಕ ಮಾತ್ರ. ಇದರಲ್ಲಿ ಎರಡನ್ನು ನಾಯಕ ಡು ಪ್ಲೆಸಿಸ್‌ ಅವರೇ ಹೊಡೆದಿದ್ದಾರೆ. ಆದರೀಗ ಅವರೂ ಬೇಗನೇ ವಿಕೆಟ್‌ ಒಪ್ಪಿಸುತ್ತಿದ್ದಾರೆ. ಹೀಗಾಗಿ ಉಳಿದ ಬ್ಯಾಟರ್‌ಗಳಿಗೆ ಒತ್ತಡ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.

Advertisement

ಸಾಕಷ್ಟು ಪರದಾಡಿದ ಬಳಿಕ ವಿರಾಟ್‌ ಕೊಹ್ಲಿ ಕಳೆದ ಪಂದ್ಯದಲ್ಲಿ ಐವತ್ತರ ಗಡಿ ದಾಟಿದರು. ಇದಕ್ಕಿಂತ ಉತ್ತಮ ಮಟ್ಟದ ಪ್ರದರ್ಶನವನ್ನು ಅವರಿಂದ ತಂಡ ಬಯಸುತ್ತದೆ. ಯುವ ಆಟಗಾರ ರಜತ್‌ ಪಾಟಿದಾರ್‌ ಓಕೆ. ಆದರೆ ಸ್ಥಿರ ಪ್ರದರ್ಶನ ಅಗತ್ಯ. ದಿನೇಶ್‌ ಕಾರ್ತಿಕ್‌ ಅವರ ಅಬ್ಬರದ ಆಟ ಈಗ ಗೋಚರಿಸುತ್ತಿಲ್ಲ. ಮ್ಯಾಕ್ಸ್‌ವೆಲ್‌ ಕೂಡ ಮಂಕಾಗಿದ್ದಾರೆ. ಇವರಿಬ್ಬರು ಸಿಡಿದು ನಿಂತರೆ ಆರ್‌ಸಿಬಿಯನ್ನು ತಡೆಯುವುದು ಕಷ್ಟ.

ಆರ್‌ಸಿಬಿಯ ಬೌಲಿಂಗ್‌ ಯೂನಿಟ್‌ನಲ್ಲೂ ಸಾಕಷ್ಟು ದೌರ್ಬಲ್ಯಗಳಿವೆ. ಸಿರಾಜ್‌ ಯಾವುದೇ ಪರಿಣಾಮ ಬೀರದಿರುವುದು, ಹರ್ಷಲ್‌ ಪಟೇಲ್‌ ಡೆತ್‌ ಓವರ್‌ಗಳಲ್ಲಿ ಕ್ಲಿಕ್‌ ಆಗದಿರುವುದು ತಂಡದ ಪ್ರಮುಖ ಸಮಸ್ಯೆ.

ಧೋನಿಯೇ ತಂಡದ ಸ್ಫೂರ್ತಿ
ಧೋನಿ ಮರಳಿ ತಂಡದ ಚುಕ್ಕಾಣಿ ಹಿಡಿದದ್ದೇ ಚೆನ್ನೈ ತಂಡಕ್ಕೊಂದು ಸ್ಫೂರ್ತಿ. ಹಾಗೆಯೇ ಕಳೆದ ಋತುವಿನ ಬ್ಯಾಟಿಂಗ್‌ ಹೀರೋ ಋತುರಾಜ್‌ ಗಾಯಕ್ವಾಡ್‌ ಫಾರ್ಮ್ ಕಂಡುಕೊಂಡಿರುವುದೊಂದು ಶುಭ ಸೂಚನೆ. ಡೇವನ್‌ ಕಾನ್ವೆ ಕೂಡ ಭರವಸೆ ಮೂಡಿಸಿದ್ದಾರೆ. ಆದರೂ ಬ್ಯಾಟಿಂಗ್‌ ವಿಭಾಗದಲ್ಲಿ ಫಾರ್ಮ್ನಲ್ಲಿಲ್ಲದ ಆಟಗಾರ ಸಂಖ್ಯೆಯೇ ದೊಡ್ಡದಿದೆ. ನಾಯಕತ್ವದ ಒತ್ತಡದಿಂದ ಮುಕ್ತರಾದ ರವೀಂದ್ರ ಜಡೇಜ ಫಾರ್ಮ್ಗೆ ಮರಳಿಯಾರೇ ಎಂಬುದು ದೊಡ್ಡ ನಿರೀಕ್ಷೆ.

ತಂಡದ ಬೌಲಿಂಗ್‌ ಘಾತಕವೇನಲ್ಲ. ಮುಕೇಶ್‌ ಚೌಧರಿ ಮೋಡಿಗೈಯುತ್ತಿದ್ದಾರೆ. ಮಹೀಶ್‌ ತೀಕ್ಷಣ ಪರಾÌಗಿಲ್ಲ. ಉಳಿದವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ.

ಆರ್‌ಸಿಬಿ ವಿರುದ್ಧವೇ ಮೊದಲ ಜಯ
ಸತತ 4 ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ, ಈ ಋತುವಿನ ಮೊದಲ ಜಯ ಸಾಧಿಸಿದ್ದೇ ಆರ್‌ಸಿಬಿ ವಿರುದ್ಧ ಎಂಬುದನ್ನು ಮರೆಯುವಂತಿಲ್ಲ. ಎ. 12ರಂದು ನವೀ ಮುಂಬಯಿಯಲ್ಲಿ ನಡೆದ ಈ ಪಂದ್ಯದಲ್ಲಿ ಚೆನ್ನೈ 23 ರನ್ನುಗಳ ಗೆಲುವು ಕಂಡಿತ್ತು.

ರಾಬಿನ್‌ ಉತ್ತಪ್ಪ (88) ಮತ್ತು ಶಿವಂ ದುಬೆ (ಅಜೇಯ 95) ಬ್ಯಾಟಿಂಗ್‌ ಶೌರ್ಯದಿಂದ ಚೆನ್ನೈ 4ಕ್ಕೆ 216 ರನ್‌ ರಾಶಿ ಹಾಕಿತು. ಆರ್‌ಸಿಬಿ 9 ವಿಕೆಟಿಗೆ 193ರ ತನಕ ಬಂದು ಶರಣಾಯಿತು. ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫ‌ಲ್ಯ, ಒಂದೂ ಅರ್ಧ ಶತಕ ದಾಖಲಿಸದ ಹೊರತೂ ಆರ್‌ಸಿಬಿ ಇಷ್ಟೊಂದು ರನ್‌ ಗಳಿಸಿದ್ದೇ ಅಚ್ಚರಿಯಾಗಿ ಕಂಡಿತು. 41 ರನ್‌ ಮಾಡಿದ ಶಬಾಜ್‌ ಅಹ್ಮದ್‌ ಅವರದೇ ಗರಿಷ್ಠ ಗಳಿಕೆಯಾಗಿತ್ತು.ಈ ಸೋಲನ್ನೇ ಚಾಲೆಂಜ್‌ ಆಗಿ ಸ್ವೀಕರಿಸಿ ಸೇಡು ತೀರಿಸಿಕೊಂಡೀತೇ ರಾಯಲ್‌ ಚಾಲೆಂಜರ್?

Advertisement

Udayavani is now on Telegram. Click here to join our channel and stay updated with the latest news.

Next