ಮುಂಬಯಿ: ಹಾಲಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ರವೀಂದ್ರ ಜಡೇಜ ಗಾಯದ ಸಮಸ್ಯೆಯಿಂದಾಗಿ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ.
ಆರ್‌ಸಿಬಿ ತಂಡದೆದುರಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಸಂದರ್ಭ ಅವರ ಕೈ ಮತ್ತು ಭುಜಕ್ಕೆ ಗಾಯವಾಗಿತ್ತು. ಆಬಳಿಕ ಅವರು ಫೀಲ್ಡಿಂಗ್ ಮುಂದುವರಿಸಿದ್ದರೂ ಡೆಲ್ಲಿ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಈ ಪಂದ್ಯವನ್ನು ಚೆನ್ನೈ ಸುಲಭವಾಗಿ ಗೆದ್ದಿತ್ತು.
ಜಡೇಜ ಅವರಿಗಾದ ಗಾಯವನ್ನು ಚೆನ್ನೈ ತಂಡ ಗಂಭೀರವಾಗಿ ಪರಿಗಣಿಸುತ್ತಿದೆ. ಆದರೆ ಅವರಿನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆದರೆ ಈ ಐಪಿಎಲ್‌ನಲ್ಲಿ ಅವರ ನಿರ್ವಹಣೆಯೂ ಸಾಧಾರಣ ಮಟ್ಟದಲ್ಲಿದೆ. ಆಡಿದ 10 ಪಂದ್ಯಗಳಿಂದ ಅವರು ಕೇವಲ 116 ಮತ್ತು 5 ವಿಕೆಟ್ ಉರುಳಿಸಿದ್ದಾರೆ.
ಈ ಬಾರಿಯ ಐಪಿಎಲ್ ಆರಂಭವಾಗುವ ಮೊದಲು ಚೆನ್ನೈ ತಂಡದ ನಾಯಕತ್ವದ ಜವಾಬ್ದಾರಿಯನ್ನು ಜಡೇಜ ಅವರಿಗೆ ವಹಿಸಲಾಗಿತ್ತು. ನಾಯಕತ್ವದ ಜವಾಬ್ದಾರಿಯಿಂದಾಗಿ ಅವರ ವೈಯಕ್ತಿಕ ನಿರ್ವಹಣೆ ಮೇಲೆ ಪರಿಣಾಮ ಬಿತ್ತು. ಬ್ಯಾಟಿಂಗ್‌ನಲ್ಲಿ ಅವರ ವೈಫಲ್ಯ ಮುಂದುವರಿಯಿತು. ಕೊನೆಗೆ ಇದರಿಂದ ಬೇಸತ್ತ ಅವರು ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿದರು. ಹೀಗಾಗಿ ಧೋನಿ ಅವರಿಗೆ ಮತ್ತೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಲಾಯಿತು.
ಚೆನ್ನೈ ತಂಡವು ಗುರುವಾರ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಜಡೇಜ ಆಡುವುದಿಲ್ಲ, ಲೀಗ್ ಹಂತದ ಇನ್ನುಳಿದ ಎರಡು ಪಂದ್ಯಗಳಲ್ಲಿ ಚೆನ್ನೈ ತಂಡವು ಗುಜರಾತ್ ಮತ್ತು ರಾಜಸ್ಥಾನ ತಂಡವನ್ನು ಎದುರಿಸಲಿದೆ. ಈ ಮೂರು ಪಂದ್ಯಗಳಲ್ಲಿ ತಂಡವು ಗೆದ್ದರೆ ಒಟ್ಟಾರೆ 14 ಅಂಕ ಗಳಿಸಲಿದೆ. ಹೀಗಿದ್ದರೂ ತಂಡವು ಪ್ಲೇ ಆಫ್ಗೆ ತೇರ್ಗಡೆಯಾಗಬೇಕಾದರೆ ಆರ್‌ಸಿಬಿ ಮತ್ತು ರಾಜಸ್ಥಾನ ತಂಡಗಳ ಪರಿಸ್ಥಿತಿಯನ್ನು ಗಮನಿಸಬೇಕಾಗಿದೆ. ಯಾಕೆಂದರೆ ಈ ಎರಡೂ ತಂಡಗಳು ಈಗಾಗಲೇ 14 ಅಂಕ ಗಳಿಸಿವೆ. ಇನ್ನು ಒಂದು ಪಂದ್ಯದಲ್ಲಿ ಆರ್‌ಸಿಬಿ ಅಥವಾ ರಾಜಸ್ಥಾನ ಗೆದ್ದರೆ ಚೆನ್ನೈಯ ಎಲ್ಲ ಪ್ರಯತ್ನಗಳು ವಿಫಲವಾಗಲಿವೆ.
ಜಡೇಜ ಐಪಿಎಲ್ ಸಾಧನೆ
ಐಪಿಎಲ್‌ನಲ್ಲಿ 33ರ ಹರೆಯದ ಜಡೇಜ 210 ಪಂದ್ಯಗಳನ್ನಾಡಿದ್ದು 26.62 ಸರಾಸರಿಯಂತೆ 2502 ರನ್ ಗಳಿಸಿದ್ದಾರೆ. ಎರಡು ಅರ್ಧಶತಕ ಬಾರಿಸಿರುವ ಅವರು 132 ವಿಕೆಟ್ ಹಾರಿಸಿದ ಸಾಧನೆಯನ್ನು ಕೂಡ ಮಾಡಿದ್ದಾರೆ.