ಮುಂಬಯಿ: ಮುಂಬೈ ಬೌಲಿಂಗ್ ದಾಳಿಗೆ ಧೂಳೀಪಟಗೊಂಡ ಚೆನ್ನೈ 5 ವಿಕೆಟ್ ಸೋಲನುಭವಿಸಿ ಕೂಟದಿಂದ ನಿರ್ಗಮಿಸಿದೆ. ಧೋನಿ ಪಡೆ 97 ರನ್ನಿಗೆ ಕುಸಿಯಿತು. ಮುಂಬೈ ಕೂಡ ಕುಸಿತ ಕಂಡಿತಾದರೂ ಅಂತಿಮವಾಗಿ 14.5 ಓವರ್‌ಗಳಲ್ಲಿ 5 ವಿಕೆಟಿಗೆ 103 ರನ್ ಗಳಿಸಿ 3ನೇ ಗೆಲುವು ಸಾಧಿಸಿತು. ಚೆನ್ನೈ 12 ಪಂದ್ಯಗಳಲ್ಲಿ ಅನುಭವಿಸಿದ 8ನೇ ಸೋಲು ಇದಾಗಿದೆ.
ಆಸ್ಟ್ರೇಲಿಯದ ಎಡಗೈ ವೇಗಿ ಡೇನಿಯಲ್ ಸ್ಯಾಮ್ಸ್ ಚೆನ್ನೈ ಮೇಲೆ ಘಾತಕವಾಗಿ ಎರಗಿದರು. ಕಳೆದ ಪಂದ್ಯಗಳಲ್ಲಿ ಸತತವಾಗಿ ಅರ್ಧ ಶತಕ ಬಾರಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದ ಡೇವನ್ ಕಾನ್ವೆ ಅವರನ್ನು ದ್ವಿತೀಯ ಎಸೆತದಲ್ಲೇ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಇದರೊಂದಿಗೆಚೆನ್ನೈ ಕುಸಿತ ಮೊದಲ್ಗೊಂಡಿತು. ಈವರೆಗೆ ಟಿ20 ಕ್ರಿಕೆಟ್‌ನಲ್ಲಿ 90 ಸಲ ಔಟಾಗಿರುವ ಕಾನ್ವೆ, ಎಲ್‌ಬಿಡಬ್ಲ್ಯು ಆದ ಕೇವಲ 2ನೇ ನಿದರ್ಶನ ಇದಾಗಿದೆ. ಮೊದಲ ಸಲ ಲೆಗ್ ಬಿಫೋರ್ ಆದದ್ದು 2013ರಷ್ಟು ಹಿಂದೆ.
ಒಂದೇ ಎಸೆತದ ಅಂತರದಲ್ಲಿ ಸ್ಯಾಮ್ಸ್ ಮತ್ತೂಂದು ಬೇಟೆಯಾಡಿದರು. ಮೊಯಿನ್ ಅಲಿ ಅವರನ್ನು ಪೆವಿಲಿಯನ್ನಿಗೆ ಕಳುಹಿಸಿದರು. ಅಲಿ ಅವರದೂ ಶೂನ್ಯ ಸಾಧನೆ. ಅನಂತರ ರಾಬಿನ್ ಉತ್ತಪ್ಪ ಅವರನ್ನು ಬುಮ್ರಾ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. 5 ರನ್ನಿಗೆ 3 ವಿಕೆಟ್ ಬಿತ್ತು. ಚೆನ್ನೈ 5 ಹಾಗೂ ಇದಕ್ಕಿಂತ ಕಡಿಮೆ ರನ್ನಿಗೆ 3 ವಿಕೆಟ್ ಉದುರಿಸಿಕೊಂಡ 3ನೇ ನಿದರ್ಶನಿದಾಗಿದೆ. ಮೂರೂ ಸಲ ಅದು ಮುಂಬೈ ವಿರುದ್ಧವೇ ಈ ಸಂಕಟಕ್ಕೆ ಸಿಲುಕಿತ್ತು!
ಇನ್ನೊಂದು ಬದಿಯಲ್ಲಿ ನಿಂತು 3 ವಿಕೆಟ್ ಪತನಕ್ಕೆ ಸಾಕ್ಷಿಯಾದ ಋತುರಾಜ್ ಗಾಯಕ್ವಾಡ್ ಆಟ ಕೂಡ ಸ್ಯಾಮ್ಸ್ ಮುಂದೆ ಸಾಗಲಿಲ್ಲ. 10 ರನ್ ಮಾಡಿದ ರಾಯುಡು ಅವರಿಗೆ ಮೆರಿಡಿತ್ ಕಂಟಕವಾಗಿ ಕಾಡಿದರು. ಹೀಗೆ, ಪವರ್ ಪ್ಲೇ ಮುಗಿಯುವಷ್ಟಲ್ಲಿ 29 ರನ್ನಿಗೆ 5 ವಿಕೆಟ್ ಉದುರಿಸಿಕೊಂಡ ಸಂಕಟ ಚೆನ್ನೈಯದ್ದಾಯಿತು. ಹಾಗೆಯೇ ಈ ಅವಧಿಯಲ್ಲಿ ಮುಂಬೈ ಅತ್ಯಧಿಕ 4 ಸಲ 5 ವಿಕೆಟ್ ಹಾರಿಸಿದ ಸಾಧನೆಗೈದಿತು.
ನಾಯಕ ಧೋನಿ ತಂಡವನ್ನು ಆಧರಿಸುವ ಕಾಯಕದಲ್ಲಿ ನಿರತರಾದರು. 10 ಓವರ್ ಅಂತ್ಯಕ್ಕೆ ಚೆನ್ನೈ ಸ್ಕೋರ್ 6 ವಿಕೆಟಿಗೆ 65ಕ್ಕೆ ಏರಿತು. 15 ಓವರ್ ತಲಪುವಾಗ 9 ವಿಕೆಟ್ ಉದುರಿತ್ತು. ಸ್ಕೋರ್‌ಬೋರ್ಡ್ 87 ರನ್ ದಾಖಲಿಸುತ್ತಿತ್ತು. ಆಗಲೂ ಧೋನಿ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು ನಿಂತಿದ್ದರು. ಅಂತಿಮವಾಗಿ 36 ರನ್ ಮಾಡಿ ಅಜೇಯರಾಗಿ ಉಳಿದರು.
ಚೆನ್ನೈಗೆ ಆಘಾತವಿಕ್ಕಿದ ಮತ್ತೋರ್ವ ಬೌಲರ್ ಕುಮಾರ ಕಾರ್ತಿಕೇಯ. ಅವರು ಒಂದೇ ಓವರ್‌ನಲ್ಲಿ ಬ್ರಾವೊ ಮತ್ತು ಸಿಮರ್ಜೀತ್ ವಿಕೆಟ್ ಕೆಡವಿದರು.
ಬರ್ತ್‌ಡೇಯಂದೇ ಪೊಲಾರ್ಡ್ ಔಟ್ :
ಫಾರ್ಮ್ನಲ್ಲಿಲ್ಲದ ಕೆರಿಬಿಯನ್ ಹಾರ್ಡ್ ಹಿಟ್ಟರ್ ಕೈರನ್ ಪೊಲಾರ್ಡ್ ತಮ್ಮ ಬರ್ತ್‌ಡೇಯಂದೇ (ಮೇ 12) ಮುಂಬೈ ಆಡುವ ಬಳಗದಿಂದ ಬೇರ್ಪಟ್ಟರು. ಇವರ ಬದಲು ದಕ್ಷಿಣ ಆಫ್ರಿಕಾದ ಟ್ರಿಸ್ಟನ್ ಸ್ಟಬ್ಸ್ ಆಡಲಿಳಿದರು. 21 ವರ್ಷದ ಸ್ಟ್ರಬ್ಸ್ ಪಾಲಿಗೆ ಇದು ಚೊಚ್ಚಲ ಐಪಿಎಲ್ ಪಂದ್ಯವಾಗಿದೆ.
ಮುಂಬೈ ತಂಡದಲ್ಲಿ ಕಾಣಿಸಿಕೊಂಡು ಇನ್ನೊಂದು ಬದಲಾವಣೆಯೆಂದರೆ, ಹೃತಿಕ್ ಶೊಕೀನ್ ಮರಳಿದ್ದು. ಇವರಿಗಾಗಿ ಮುರುಗನ್ ಅಶ್ವಿನ್ ಹೊರಗುಳಿದರು.