Advertisement

4ನೇ ಟ್ರೋಫಿ ಮೇಲೆ ಚೆನ್ನೈ ಸೂಪರ್‌ ಕಿಂಗ್ಸ್‌ ಕಣ್ಣು

10:50 PM Oct 13, 2021 | Team Udayavani |

ದುಬಾೖ: ಅದು ಯುಎಇಯಲ್ಲೇ ನಡೆದ ಕಳೆದ ವರ್ಷದ ಐಪಿಎಲ್‌. ಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ ಧೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌ ಪ್ಲೇ-ಆಫ್ ಟಿಕೆಟ್‌ ಪಡೆಯದೇ ಹೊರಬಿದ್ದಿತ್ತು. ಅಷ್ಟೇ ಅಲ್ಲ, ಟೂರ್ನಿಯಿಂದ ನಿರ್ಗಮಿಸಿದ ಮೊದಲ ತಂಡವೆಂಬ ಅವಮಾನಕ್ಕೂ ಸಿಲುಕಿತ್ತು.

Advertisement

ಆಗ ಧೋನಿ ಒಂದು ಮಾತು ಹೇಳಿದ್ದರು, “ನಾವು ಇಂದು ಬೇಗನೇ ಕೂಟದಿಂದ ಹೊರಬಿದ್ದಿರಬಹುದು. ಆದರೆ ಮುಂದಿನ ವರ್ಷ ನಮ್ಮದು ಗ್ರೇಟೆಸ್ಟ್‌ ಕಮ್‌ಬ್ಯಾಕ್‌ ಆಗಲಿದೆ…’

ಇದು ನಿಜವಾಗಿದೆ. 2020ರಲ್ಲಿ ಮೊದಲ ತಂಡವಾಗಿ ಹೊರಬಿದ್ದ ಚೆನ್ನೈ ಈ ಬಾರಿ ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆ ಇರಿಸಿದೆ. ಶುಕ್ರವಾರ ತನ್ನ 9ನೇ ಫೈನಲ್‌ ಆಡಲಿಳಿಯಲಿದೆ. ಪ್ರಶಸ್ತಿ ಸಮರದಲ್ಲಿ ಡೆಲ್ಲಿ ಅಥವಾ ಕೆಕೆಆರ್‌ ಎದುರಾಗಲಿದೆ. ಐಪಿಎಲ್‌ನಲ್ಲಿ ಮತ್ತೆ ಧೋನಿ ಹವಾ ಬೀಸಲಿದೆಯೇ? ಇಂಥದೊಂದು ಸಾಧ್ಯತೆ ದಟ್ಟವಾಗಿದೆ.

ಅತ್ಯಂತ ಯಶಸ್ವಿ ತಂಡ
ಧೋನಿ ಪಡೆ ಮೊದಲ ಸಲ ಐಪಿಎಲ್‌ ಟ್ರೋಫಿ ಎತ್ತಿದ್ದು 2010ರಲ್ಲಿ. ಮರುವರ್ಷ ಮತ್ತೆ ಚಾಂಪಿಯನ್‌ ಆಯಿತು. ಟ್ರೋಫಿ ಉಳಿಸಿಕೊಂಡ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಯಿತು. ಕೊನೆಯ ಸಲ ಚೆನ್ನೈಗೆ ಐಪಿಎಲ್‌ ಟ್ರೋಫಿ ಒಲಿದದ್ದು 2018ರಲ್ಲಿ. ಅಂದು ಅದು ಅತ್ಯಧಿಕ ಹಿರಿಯ ಆಟಗಾರರನ್ನು ಹೊಂದಿದ್ದ ತಂಡವಾಗಿತ್ತು. ಅಪ್ಪಂದಿರ ತಂಡ ಗೆದ್ದು ಬೀಗಿತ್ತು!

ಮುಂಬೈ ಇಂಡಿಯನ್ಸ್‌ ಅತ್ಯಧಿಕ 5 ಸಲ ಐಪಿಎಲ್‌ ಚಾಂಪಿಯನ್‌ ಆಗಿರಬಹುದು. ಆದರೆ ಐಪಿಎಲ್‌ ಇತಿಹಾಸದ ಅತ್ಯಂತ ಯಶಸ್ವಿ ಹಾಗೂ ಸ್ಥಿರತೆಯನ್ನು ಕಾಯ್ದುಕೊಂಡು ಬಂದ ತಂಡವೆಂದರೆ ನಿಸ್ಸಂಶಯವಾಗಿಯೂ ಚೆನ್ನೈ. ಅದು ಮೂರೇ ಸಲ ಪ್ರಶಸ್ತಿ ಗೆದ್ದಿರಬಹುದು, ಆದರೆ ಅತ್ಯಧಿಕ 9 ಸಲ ಫೈನಲ್‌ಗೆ ಲಗ್ಗೆ ಇರಿಸಿದೆ. 5 ಸಲ ರನ್ನರ್ ಅಪ್‌ ಆಗಿದೆ. ಮೊದಲ ಐಪಿಎಲ್‌ನಲ್ಲೇ ಪ್ರಶಸ್ತಿ ಸುತ್ತಿಗೆ ನೆಗೆದಿದ್ದ ಚೆನ್ನೈ ಅಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಎಡವಿತ್ತು.

Advertisement

ಇದನ್ನೂ ಓದಿ:ಟೀಮ್‌ ಇಂಡಿಯಾ ಕ್ರಿಕೆಟಿಗರಿಗೆ ನೂತನ ಜೆರ್ಸಿ

3 ಬಾರಿಯ ಚಾಂಪಿಯನ್‌
ಚೆನ್ನೈ ಮೊದಲ ಸಲ ಐಪಿಎಲ್‌ ಟ್ರೋಫಿ ಹಿಡಿದು ಮೆರೆದದ್ದು 2010ರಲ್ಲಿ. ಅಂದಿನ ಫೈನಲ್‌ ಎದುರಾಳಿ ಮುಂಬೈ ಇಂಡಿಯನ್ಸ್‌. ಸಚಿನ್‌ ತೆಂಡುಲ್ಕರ್‌ ನೇತೃತ್ವದ ಮುಂಬೈಗೆ ಇದು ತವರು ಪಂದ್ಯವಾಗಿತ್ತು. ಆದರೆ ನವೀ ಮುಂಬಯಿ ಮುಖಾಮುಖೀಯನ್ನು ಧೋನಿ ಪಡೆ 22 ರನ್ನುಗಳಿಂದ ಜಯಿಸಿತು. ಚೆನ್ನೈ 5ಕ್ಕೆ 168 ರನ್‌ ಗಳಿಸಿದರೆ, ಚೇಸಿಂಗ್‌ನಲ್ಲಿ ಮುಂಬೈ 9ಕ್ಕೆ 146 ರನ್‌ ಮಾಡಿ ಶರಣಾಯಿತು.
ಮುಂದಿನ ವರ್ಷವೂ ಚೆನ್ನೈ ಅಮೋಘ ಪ್ರದರ್ಶನ ಕಾಯ್ದುಕೊಂಡು ಪ್ರಶಸ್ತಿ ಸುತ್ತಿಗೆ ನೆಗೆಯಿತು. ಅಲ್ಲಿನ ಎದುರಾಳಿ ಆರ್‌ಸಿಬಿ. ಚೆನ್ನೈಯಲ್ಲಿ ನಡೆದ ಈ ಪಂದ್ಯದಲ್ಲಿ ಧೋನಿ ಟೀಮ್‌ 58 ರನ್ನುಗಳಿಂದ ಗೆದ್ದು ಟ್ರೋಫಿ ಉಳಿಸಿಕೊಂಡಿತು. ಚೆನ್ನೈ 5ಕ್ಕೆ 205 ರನ್‌ ಪೇರಿಸಿದರೆ, ಡೇನಿಯಲ್‌ ವೆಟರಿ ಬಳಗ 8ಕ್ಕೆ 147 ರನ್‌ ಮಾಡಿ ಸೋತಿತು.

2018ರಲ್ಲಿ ಕೊನೆಯ ಗೆಲುವಿನ ವೇಳೆ ಚೆನ್ನೈಗೆ ಸನ್‌ರೈಸರ್ ಎದುರಾಗಿತ್ತು. ಸ್ಥಳ ವಾಂಖೇಡೆ ಸ್ಟೇಡಿಯಂ. ಗೆಲುವಿನ ಅಂತರ 8 ವಿಕೆಟ್‌. ಹೈದರಾಬಾದ್‌ 6ಕ್ಕೆ 178 ರನ್‌ ಹೊಡೆದರೆ, ಚೆನ್ನೈ ಎರಡೇ ವಿಕೆಟಿಗೆ 181 ರನ್‌ ಬಾರಿಸಿತು. ವಾಟ್ಸನ್‌ ಅಜೇಯ 117 ರನ್‌ ಸಿಡಿಸಿದ್ದರು.

ಆರಂಭಿಕರ ಪಾತ್ರ…
ಚೆನ್ನೈ ತಂಡದ ಈ ವರ್ಷದ ಯಶಸ್ಸಿನಲ್ಲಿ ಆರಂಭಿಕರಾದ ಋತುರಾಜ್‌ ಮತ್ತು ಡು ಪ್ಲೆಸಿಸ್‌ ಜೋಡಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ರಾಯುಡು, ಜಡೇಜ, ಬ್ರಾವೊ, ಠಾಕೂರ್‌, ಹ್ಯಾಝಲ್‌ವುಡ್‌ ಕೊಡುಗೆಯೂ ಗಮನಾರ್ಹ. ಮತ್ತೆ… ಮತ್ತೆ ಬೆಸ್ಟ್‌ ಫಿನಿಶರ್‌ ಆಗಿ ಮೂಡಿಬಂದ ಕಪ್ತಾನ ಧೋನಿ ಈ ಯಾದಿಯ “ಲೇಟೆಸ್ಟ್‌ ಎಂಟ್ರಿ’ ಆಗಿದ್ದಾರೆ! ಅಂದಹಾಗೆ ಚೆನ್ನೈ ಈ ವರೆಗೆ ವಿದೇಶಿ ಐಪಿಎಲ್‌ ಕೂಟಗಳಲ್ಲಿ ಚಾಂಪಿ ಯನ್‌ ಆಗಿಲ್ಲ. ಈ ಬಾರಿ ಇಂಥದೊಂದು ದಾಖಲೆಗೆ ಅವಕಾಶವಿದೆ.

ಸ್ಥಳ: ದುಬಾೖ
ಆರಂಭ:
ರಾತ್ರಿ 7.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next