Advertisement

ಬೇಸಗೆಯಲ್ಲಿ ನೀರಿಲ್ಲ, ಮಳೆಗಾಲದಲ್ಲಿ ನೆಲೆಯಿಲ್ಲ : ಪಾಲಿಕೆಗೆ ಮದ್ರಾಸ್‌ ಹೈಕೋರ್ಟ್‌ ತರಾಟೆ

09:15 PM Nov 09, 2021 | Team Udayavani |

ಚೆನ್ನೈ: “ಒಂದು ವರ್ಷದ ಅರ್ಧ ಭಾಗ ನೀವು ನಮ್ಮನ್ನು (ಚೆನ್ನೈ ಜನರನ್ನು) ನೀರಿಗಾಗಿ ಪರಿತಪಿಸುವಂತೆ ಮಾಡುತ್ತೀರಿ. ಇನ್ನು ಅರ್ಧ ವರ್ಷದಲ್ಲಿ ನೀರಿನಿಂದ ಮುಳುಗಿ ಸಾಯುವಂತೆ ಮಾಡುತ್ತೀರಿ. 2015ರಿಂದಲೂ ಕೂಡ ನೀವೇನು ಮಾಡುತ್ತಿದ್ದಿರಿ?

Advertisement

– ಹೀಗೆಂದು ಮದ್ರಾಸ್‌ ಹೈಕೋರ್ಟ್‌ ಚೆನ್ನೈ ಮಹಾನಗರ ಪಾಲಿಕೆಯನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ. ಧಾರಾಕಾರ ಮಳೆಯಿಂದಾಗಿ ಗ್ರೇಟರ್‌ ಚೆನ್ನೈ ಮಹಾನಗರ ಪಾಲಿಕೆ ಸರಿಯಾದ ರೀತಿಯಲ್ಲಿ ನೀರು ಹರಿಯದೆ, ನಗರದ ಪ್ರದೇಶಗಳು ಜಲಾವೃತವಾದ ಪರಿಸ್ಥಿತಿ ನಿರ್ಮಾಣವಾದ ಬಗ್ಗೆ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿತು. ಮಳೆಗಾಲ ಬರುತ್ತಿದ್ದರೂ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಬ್ಯಾನರ್ಜಿ, ನ್ಯಾ.ಪಿ.ಡಿ.ಆದಿಕೇಶವುಲು ನೇತೃತ್ವದ ನ್ಯಾಯಪೀಠ ಪ್ರಶ್ನೆ ಮಾಡಿತು. ಮಳೆ ಪ್ರಕೋಪಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.

2015ರಲ್ಲಿ ಧಾರಾಕಾರ ಸುರಿದ ಮಳೆಯಿಂದ ಹಲವು ರೀತಿಯ ಅನಾಹುತಗಳು ಸಂಭವಿಸಿವೆ. ಇದರ ಹೊರತಾಗಿಯೂ ಗ್ರೇಟರ್‌ ಚೆನ್ನೈ ಮಹಾನಗರ ಪಾಲಿಕೆ ಇನ್ನೂ ಯಾಕೆ ಎಚ್ಚೆತ್ತುಕೊಂಡಿಲ್ಲ ಎಂದು ಪ್ರಶ್ನೆ ಮಾಡಿತು ನ್ಯಾಯಪೀಠ. ವಾರಾಂತ್ಯದ ಒಳಗಾಗಿ ಮಳೆಯಿಂದಾಗಿ ಗ್ರೇಟರ್‌ ಚೆನ್ನೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರು ನಿಲ್ಲುವುದನ್ನು ತಡೆಯಬೇಕು. ಈ ಮೂಲಕವಾಗಿ ನಾಗರಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲದೇ ಇದ್ದಲ್ಲಿ, ನ್ಯಾಯಪೀಠವೇ ಮುಂದಿನ ಕ್ರಮಗಳನ್ನು ಪ್ರಕಟಿಸಲಿದೆ ಎಂದು ನ್ಯಾಯಪೀಠ ಕಟುವಾಗಿ ಎಚ್ಚರಿಕೆ ನೀಡಿತು.

ಬೇಸಗೆಯಲ್ಲಿ ಚೆನ್ನೈನ ಜನರು ನೀರಿಗಾಗಿ ಪರದಾಡುವ ಸ್ಥಿತಿ ಇರುತ್ತದೆ. ಮಳೆಗಾಲದ ಅವಧಿಯಲ್ಲಿ ಮಳೆಯಿಂದಾಗಿ ಉಂಟಾಗುವ ಪ್ರವಾಹದಿಂದಾಗಿ ಜನರು ತೊಂದರೆಗೆ ಒಳಗಾಗಿ, ಜೀವ ಕಳೆದುಕೊಳ್ಳುವ ಸ್ಥಿತಿ ಉಂಟಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ನ್ಯಾಯಪೀಠ ವಿಷಾದ ವ್ಯಕ್ತಪಡಿಸಿತು. ಗ್ರೇಟರ್‌ ಚೆನ್ನೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಲಮೂಲಗಳ ಒತ್ತುವರಿಯಾಗಿರುವ ಬಗ್ಗೆ ಸಲ್ಲಿಕೆಯಾಗಿದ್ದ ಮತ್ತೂಂದು ಸಾರ್ವಜನಿಕ ಹಿತಾಸಕ್ತಿ ವಿಚಾರಣೆ ನಡೆಸಿದ ನ್ಯಾಯಪೀಠ ಚೆನ್ನೈ ಮತ್ತು ತಮಿಳುನಾಡಿನ ಇತರ ಭಾಗಗಳಲ್ಲಿ ಮಳೆಯಿಂದ ಉಂಟಾಗಿರುವ ಅನಾಹುತ ಪಾಲಿಕೆ ಮತ್ತು ರಾಜ್ಯ ಸರ್ಕಾರಕ್ಕೆ ಪಾಠವಾಗಬೇಕು’ ಎಂದು ನ್ಯಾಯಪೀಠ ಹೇಳಿತು.

4 ಕೋಟಿ ಬಿಡುಗಡೆ :
ಮದ್ರಾಸ್‌ ಹೈಕೋರ್ಟ್‌ ತರಾಟೆಯ ಬಳಿಕ ಕ್ಷಿಪ್ರವಾಗಿ ಪರಿಹಾರ ಕಾರ್ಯ ಕೈಗೆತ್ತಿಕೊಂಡಿರುವ ಗ್ರೇಟರ್‌ ಚೆನ್ನೈ ಮಹಾನಗರ ಪಾಲಿಕೆ ತುರ್ತು ಕಾಮಗಾರಿಗಳಿಗಾಗಿ 4 ಕೋಟಿ ರೂ. ಬಿಡುಗಡೆ ಮಾಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಇದುವರೆಗೆ 1,288 ಮಂದಿಯನ್ನು ರಕ್ಷಿಸಲಾಗಿದೆ.

Advertisement

ಸಾವಿನ ಸಂಖ್ಯೆ 5ಕ್ಕೆ ಏರಿಕೆ:
ಗ್ರೇಟರ್‌ ಚೆನ್ನೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತ್ತು ತಮಿಳುನಾಡಿನ ಇತರ ಭಾಗಗಳಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ನಾಲ್ಕು ಮನೆಗಳು ಮತ್ತು 538 ಗುಡಿಸಲುಗಳು ಹಾನಿಗೊಳಗಾಗಿವೆ ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣಾ ಖಾತೆ ಸಚಿವ ಕೆ.ಕೆ.ಎಸ್‌.ಎಸ್‌.ಆರ್‌ ರಾಮಚಂದ್ರನ್‌ ತಿಳಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ ಗುರುವಾರ (ನ.11)ದ ವರೆಗೆ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಉಚಿತ ಆಹಾರ:
ರಾಜ್ಯದಲ್ಲಿ ಮಳೆಯಿಂದಾಗಿ ಹೆಚ್ಚು ತೊಂದರೆಗೆ ಒಳಗಾಗಿರುವ ಪ್ರದೇಶಗಳಲ್ಲಿ ಮಳೆಗಾಲ ಮುಕ್ತಾಯದ ವರೆಗೆ ಅಮ್ಮಾ ಕ್ಯಾಂಟೀನ್‌ನಲ್ಲಿ ಉಚಿತವಾಗಿ ಆಹಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿದ್ದಾರೆ. ಚೆನ್ನೈನಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರಿಗೆ ಪರಿಹಾರ ಕೈಗೊಳ್ಳಲು ಸೂಕ್ತ ನೆರವು ನೀಡುವಂತೆ ಮನವಿ ಮಾಡಿದ್ದಾಗಿ ಹೇಳಿದ್ದಾರೆ. ಎಐಎಡಿಎಂಕೆ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಸ್ಮಾರ್ಟ್‌ ಸಿಟಿ ಯೋಜನೆಗಾಗಿನ ಮೊತ್ತ ಸರಿಯಾಗಿ ವಿನಿಯೋಗವಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ, ಸತತ ಮೂರನೇ ದಿನವಾಗಿರುವ ಮಂಗಳವಾರ ಕೂಡ ಪ್ರವಾಹ ಪೀಡಿತ ಸ್ಥಳಗಳ ಪರಿಶೀನೆಯನ್ನು ಮುಖ್ಯಮಂತ್ರಿ ನಡೆಸಿದ್ದಾರೆ. ಜತೆಗೆ ಕೆಲವೆಡೆ, ಸಂತ್ರಸ್ಥರಿಗಾಗಿ ಸಿದ್ಧಪಡಿಸಲಾಗಿರುವ ಭೋಜನ ಗುಣಮಟ್ಟದ್ದಾಗಿದೆಯೇ ಎಂದು ಸವಿದು ಪರೀಕ್ಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next