Advertisement

Mini Taj Mahal: ತಾಯಿಯ ಪ್ರೀತಿಗೆ ಗೌರವ ಸಲ್ಲಿಸಲು ʼಮಿನಿ ತಾಜ್‌ ಮಹಲ್‌ʼ ನಿರ್ಮಿಸಿದ ಮಗ

12:17 PM Jun 12, 2023 | Team Udayavani |

ಷಹಜಹಾನ್‌ – ಮುಮ್ತಾಜ್‌ ಪ್ರೇಮ ಕಥೆಯ ಪ್ರತೀಕವಾಗಿ ವಿಶ್ವ ವಿಖ್ಯಾತಿಯನ್ನು ಪಡೆದಿರುವ ʼತಾಜ್‌ ಮಹಲ್‌ʼ ಯಾರಿಗೆ ಗೊತ್ತಿಲ್ಲ ಹೇಳಿ. ವಿಶ್ವ ಪ್ರಸಿದ್ದ ತಾಜ್‌ ಮಹಲ್‌ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜಗತ್ತಿನ ನಾನಾ ಕಡೆಯಿಂದ ಜನ ಹರಿದು ಬರುತ್ತಾರೆ. ತಾಜ್‌ ಮಹಲ್‌ ಷಹಜಹಾನ್‌ ಪ್ರೇಮಕ್ಕೆ ಸಾಕ್ಷಿಯಾಗಿ ನಿಂತಿದೆ.

Advertisement

ತಾಜ್‌ ಮಹಲ್‌ ನಂತಯೇ ಒಂದು ಕಟ್ಟಡ ತಮಿಳುನಾಡಿನಲ್ಲಿ ಎದ್ದು ನಿಂತಿದೆ. ಈ ʼಮಿನಿ ತಾಜ್‌ ಮಹಲ್‌ʼ ತಾಯಿಯ ಪ್ರೀತಿಗೆ ಮಗ ಕೊಟ್ಟ ಕೊಡುಗೆ.!

ತಮಿಳುನಾಡಿನ ತಿರುವರೂರು ಮೂಲದ ಹಾರ್ಡ್‌ವೇರ್ ಉದ್ಯಮಿ ಅಮ್ರುದೀನ್ ಶೇಖ್ ದಾವೂದ್ ಸಾಹೇಬ್ ತನ್ನ ತಾಯಿಯ ನೆನಪಿಗಾಗಿ ಮಿನಿ ತಾಜ್‌ ಮಹಲ್‌ ನ್ನು ಕಟ್ಟಿದ್ದಾರೆ.

ಅಮ್ರುದೀನ್ ಶೇಖ್ ಅವರಿಗೆ 5 ಮಂದಿ ಒಡಹುಟ್ಟಿದವರು. ಐದರಲ್ಲಿ ನಾಲ್ವರು ಹೆಣ್ಣು ಮಕ್ಕಳು. ಅಮ್ರುದೀನ್ ಒಬ್ಬರು ಮಾತ್ರ ಗಂಡು ಮಗ. ತಂದೆ ಅಬ್ದುಲ್ ಖಾದರ್ ಶೇಕ್ ದಾವೂದ್ ಚೆನ್ನೈನಲ್ಲಿ ಉದ್ಯಮಿಯಾಗಿ, ಚರ್ಮದ ವಸ್ತುಗಳ ಬಗ್ಗೆ ವ್ಯವಹಾರ  ನಡೆಸುತ್ತಿದ್ದರು. ಆದರೆ ಮಕ್ಕಳು ಸಣ್ಣ ವಯಸ್ಸಿನಲ್ಲಿದ್ದಾಗಲೇ ಅವರು ನಿಧನರಾದರು.

Advertisement

ಕುಟುಂಬದ ವ್ಯವಹಾರವನ್ನು ಅಮ್ರುದೀನ್ ಶೇಖ್ ಅವರ ತಾಯಿ ಜೈಲಾನಿ ಬೀವಿ ಅವರು ನೋಡಿಕೊಳ್ಳಲು ಆರಂಭಿಸುತ್ತಾರೆ. ಐದು ಮಕ್ಕಳನ್ನು ಸಾಕುವುದರೊಂದಿಗೆ ವ್ಯವಹಾರವನ್ನು ನೋಡಿಕೊಳ್ಳುವುದು ಜೈಲಾನಿ ಬೀವಿ ಅವರಿಗೆ ಸವಾಲು ಹಾಗೂ ಸಂಕಷ್ಟ ಎರಡನ್ನೂ ಒಟ್ಟಿಗೆ ಎದುರಿಸುವಂತೆ ಮಾಡುತ್ತದೆ. ಆದರೆ ಎಷ್ಟೇ ಕಷ್ಟವಾದರೂ ತನ್ನ ಮಕ್ಕಳಿಗೆ ಯಾವ ಕೊರತೆಯನ್ನು ಜೈಲಾನಿ ಬೀವಿ ಅವರು ಮಾಡಲಿಲ್ಲ. ತಾಯಿಯ ಕಷ್ಟವನ್ನು ಅಮ್ರುದೀನ್ ಶೇಖ್ ಅವರು ನೋಡುತ್ತಾರೆ. ಮಕ್ಕಳು ಬೆಳೆಯುತ್ತಾ ಹೋದಂತೆ ನಾಲ್ವರು ಹೆಣ್ಣು ಮಕ್ಕಳನ್ನು ಒಳ್ಳೆಯ ಸಂಬಂಧವನ್ನು ಹುಡುಕಿ ಮದುವೆ ಮಾಡಿಸಿ  ಜೈಲಾನಿ ಬೀವಿ ಜವಾಬ್ದಾರಿ ನಿಭಾಯಿಸುತ್ತಾರೆ.

ಕಷ್ಟದಿಂದ ಮೇಲೆ ಬಂದ ಅಮ್ರುದೀನ್ ಶೇಖ್ ಹಾರ್ಡ್‌ ವೇರ್‌ ವ್ಯವಹಾರವನ್ನು ಮಾಡಿ, ದೊಡ್ಡ ಉದ್ಯಮಿಯಾಗಿ ಬೆಳೆಯುತ್ತಾರೆ. ಮಗ ಎಷ್ಟೇ ದೊಡ್ಡವನ್ನಾದರೂ ತಾಯಿ ತನ್ನ ಮಗನನ್ನು‌ ಪ್ರೀತಿಯಿಂದ ಆರೈಕೆ ಮಾಡುತ್ತಾರೆ.

ತಾಯಿಯನ್ನು ಖುಷಿಯಾಗಿ ನೋಡಿಕೊಳ್ಳುತ್ತಿದ್ದ ಮಗ ಅಮ್ರುದೀನ್ ಶೇಖ್ ಗೆ 2020 ರ ಅಮಾವಾಸ್ಯೆಯ ದಿನ ಅತ್ಯಂತ ಕರಾಳ ದಿನವಾಗುತ್ತದೆ. ಅಂದು ಅವರ ಪ್ರೀತಿಯ ತಾಯಿ ಜೈಲಾನಿ ಬೀವಿ ಇಹಲೋಕ ತ್ಯಜಿಸುತ್ತಾರೆ. ಆ ವರ್ಷದಿಂದ ಪ್ರತಿ ವರ್ಷದ ಅಮಾವಾಸ್ಯೆಯ ದಿನದಂದು ತಾಯಿಯ ಸ್ಮರಣೆಯಿಂದ, ತಾಯಿಗಾಗಿ ಅವರು 1000 ಸಾವಿರ ಮಂದಿಗೆ ಊಟವನ್ನು ಬಡಿಸುತ್ತಾರೆ.

ಮಕ್ಕಳಿಗಾಗಿ ತನ್ನೆಲ್ಲಾ ಆಸೆ- ಆಕಾಂಕ್ಷೆಗಳನ್ನು ಬದಿಗಿಟ್ಟ ತಾಯಿಯ ನೆನಪಿಗೆ ಊಟವನ್ನು ಬಡಿಸಿದರೆ ಮಾತ್ರ ಸಾಲದು ಎಂದು ಅಮ್ರುದೀನ್ ಶೇಖ್ ʼಮಿನಿ ತಾಜ್‌ ಮಹಲ್ʼ ನಿರ್ಮಿಸಲು ಸಿದ್ದವಾಗುತ್ತಾರೆ.

ಇದಕ್ಕಾಗಿ ಮೊದಲು ತನ್ನ ಪೂರ್ವಜರ ಹಳ್ಳಿಯಾದ ಅಮ್ಮಯ್ಯಪ್ಪನ್‌ನಲ್ಲಿ ಒಂದು ಎಕರೆ ಭೂಮಿಯನ್ನು ಖರೀದಿಸುತ್ತಾರೆ ಹಾಗೂ ಬಿಲ್ಡರ್‌ ಆಗಿರುವ ಸ್ನೇಹಿತನ ಬಳಿ ಈ ಬಗ್ಗೆ ಚರ್ಚೆ ನಡೆಸಿ, 1 ಎಕರೆ ಭೂಮಿಯಲ್ಲಿ ಕಟ್ಟಡ ನಿರ್ಮಿಸಲು ಶುರು ಮಾಡುತ್ತಾರೆ.

ವರ್ಷಾನುಗಟ್ಟಲೇ ಕೆಲಸವನ್ನು ಮಾಡಿದ ತಾಯಿ ನೆನಪಿಗಾಗಿ ಕಟ್ಟಿದ ʼಮಿನಿ ತಾಜ್ ಮಹಲ್‌ʼ ಪೂರ್ಣಗೊಳ್ಳುತ್ತದೆ. ಇದೇ ವರ್ಷದ ಜೂ. 2 ರಂದು ಸಾರ್ವಜನಿಕರ ವೀಕ್ಷಣೆಗಾಗಿ ಇದನ್ನು ತೆರೆಯಲಾಗಿದೆ. ರಾಜಸ್ಥಾನದಿಂದ ಅಮೃತಶಿಲೆಯನ್ನು ತರಿಸಿ ಇದನ್ನು ಮಾಡಲಾಗಿದ್ದು, ಆಗ್ರಾದ ತಾಜ್ ಮಹಲ್‌ನಲ್ಲಿರುವಂತೆಯೇ ಸ್ಮಾರಕದ ಸುತ್ತಲೂ ಮಾರ್ಗಗಳು ಮತ್ತು ಕಾಲುದಾರಿಗಳನ್ನು ನಿರ್ಮಿಸಲಾಗಿದೆ.

ಎಲ್ಲಾ ಧರ್ಮದ ಜನರು ಧ್ಯಾನ ಮಾಡಬಹುದಾದ ಧ್ಯಾನ ಕೇಂದ್ರಗಳು ಇದರಲ್ಲಿದೆ. ಸದ್ಯ ಇದರಲ್ಲಿ 10 ವಿದ್ಯಾರ್ಥಿಗಳು ಉಳಿದುಕೊಳ್ಳುವ ಮದ್ರಾಸ ಕೂಡ ಇದೆ.

ಅಮ್ರುದೀನ್ ಶೇಖ್ ʼಮಿನಿ ತಾಜ್‌ ಮಹಲ್‌ʼ ಬಗ್ಗೆ ಹೆಚ್ಚಿನ ಪ್ರಚಾರವನ್ನು ಮಾಡಿಲ್ಲ. ಜನರಿಂದ ಜನರಿಗೆ ವಿಚಾರ ಹಬ್ಬಿ ʼಮಿನಿ ತಾಜ್‌ ಮಹಲ್‌ʼ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ.

-ಸುಹಾನ್‌ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next