ಚನ್ನಗಿರಿ: ಕನ್ನಡವನ್ನು ರಾಷ್ಟ್ರೀಯ ಭಾಷೆಯನ್ನಾಗಿಸಿ ಇಡೀ ವಿಶ್ವದಲ್ಲಿಯೇ ಪ್ರಖ್ಯಾತಿ ಪಡೆಯಲು ಸರ್ಕಾರಗಳು ವಿಶೇಷ ಕಾನೂನು ಜಾರಿಗೆ ತರಬೇಕು. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಸನ್ನದರಾಗಬೇಕು ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಪ್ರತಿಪಾದಿಸಿದ್ದಾರೆ.
ರಾಮಮೋಹರ ಲೋಹಿಯ ಭವನದಲ್ಲಿ ಭಾನುವಾರ ಕನ್ನಡ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಕನ್ನಡ ಪರೀಕ್ಷೆಯಲ್ಲಿ 120ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ‘ಕನ್ನಡ ಕಸ್ತೂರಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರಗಳು ಕನ್ನಡ ಭಾಷೆ ಉಳಿವಿಗಾಗಿ ಸಾಕಷ್ಟು ಕ್ರಮಗಳನ್ನು ವಹಿಸಿದರೂ ಏನು ಪ್ರಯೋಜನವಾಗುತ್ತಿಲ್ಲ, ಕೇವಲ ಪ್ರಾಂತಿಯ ಭಾಷೆಯಾಗಿ ಉಳಿದಿದ್ದು, ಸದ್ಯ ಭಾಷೆಯು ಜೀವಂತಿಕೆ ಕಳೆದುಕೊಳ್ಳುತ್ತಿದೆ. ಇಲ್ಲಿ ಎಲ್ಲ ಭಾಷೆಗಳಿಗಿಂತ ಕನ್ನಡ ಭಾಷೆಯ ಸಾಹಿತ್ಯ ಶ್ರೀಮಂತಿಕೆಯಿಂದ ಕೂಡಿದ್ದು, 8 ಜ್ಞಾನ ಪೀಠ ಪ್ರಶಸ್ತಿ ಪಡೆದುಕೊಂಡಿದೆ. ಈ ದೃಷ್ಟಿಯಿಂದಲ್ಲೇ ಕನ್ನಡ ಭಾಷೆಯನ್ನು ರಾಷ್ಟ್ರೀಯ ಭಾಷೆಯಾಗಿಸಲು ಪ್ರತಿಯೊಬ್ಬರೂ ಹೋರಾಡಬೇಕು ಎಂದರು.
ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕವನ್ನು ಗಳಿಸುವುದು ಸುಲಭದ ವಿಷಯವಲ್ಲ. ಈ ಮಕ್ಕಳು ರಾಷ್ಟ್ರೀಯ ಸಂಪತ್ತು. ಇಂತಹ ಮಕ್ಕಳನ್ನು ಪಲಾಯಾನ ಮಾಡದೇ, ದೇಶದಲ್ಲಿಯೇ ಉದ್ಯೋಗ ನೀಡಿ ಅವರಿಗೆ ಬೇಕಾದ ಮೂಲಸೌಲಭ್ಯಗಳನ್ನು ನೀಡಬೇಕು. ವಿದೇಶಗಳಿಗೆ ಹೋಗಲು ಅವಕಾಶ ನೀಡಬಾರದು ಎಂದರು.
ಜಿಪಂ ಸದಸ್ಯೆ ಮಂಜುಳಾ ಮಾತನಾಡಿ, ಕನ್ನಡ ಭಾಷೆಯಲ್ಲಿ ಅಡಗಿರುವ ಸಾಹಿತ್ಯ ಇಡೀ ದೇಶವನ್ನು ಅಭಿವೃದ್ಧಿಯತ್ತ ಕೊಂಡೋಯುವ ಶಕ್ತಿ ಹೊಂದಿದೆ. ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರವನ್ನು ಪ್ರತಿಪಾದಿಸುತ್ತಿದೆ. ಇಂತಹ ಭಾಷೆಗೆ ಗೌರವ ಸಿಗದಂತೆ ಮಾಡುತ್ತಿರುವುದು ನಮ್ಮ ದೌರ್ಭಾಗ್ಯ. ಬೆಂಗಳೂರಿಗೆ ಹೋದರೆ ಬೇರೆ ಯಾವುದೋ ವಿದೇಶಕ್ಕೆ ಬಂದಿದ್ದವೇ ಎನ್ನುವ ಭಾವನೆ ಮೂಡುತ್ತದೆ. ಇದು ದುರಂತದ ಸಂಗತಿ ಎಂದರು.
ಪಿಎಸ್‌ಐ ಎಸ್.ಎಸ್ ಮೇಟಿ ಮಾತನಾಡಿದರು. ಕನ್ನಡ ಭಾಷೆಯಲ್ಲಿ 120ರಿಂದ 125ಕ್ಕೂ ಹೆಚ್ಚು ಅಂಕಗಳಿಸಿದ 100 ಮಕ್ಕಳಿಗೆ ‘ಕನ್ನಡ ಕಸ್ತೂರು’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡಭಿಮಾನಿ ಬಳಗದ ಅಧ್ಯಕ್ಷ ಎಸ್. ಶಂಕರಪ್ಪ, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಕೋರಿ, ಪತ್ರಕರ್ತರಾದ ಬಾರಾ ಮಹೇಶ್, ಸತೀಶ್ ಮತ್ತಿತರರು ಇದ್ದರು.