ಚನ್ನಗಿರಿ: ಆರೋಗ್ಯ ಇಲಾಖೆ ಎಲ್ಲೆಡೆ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಿ ಸಭೆ ಕೈಗೊಳ್ಳುತ್ತಿದ್ದು, ಇತ್ತ ಸಿನಿಮಾ ಮಂದಿರ, ಶಾಲಾ, ಕಾಲೇಜುಗಳು ಬಂದ್ ಆಗಿವೆ. ಹೌದು, ದೇಶಾದ್ಯಂತ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಸುದ್ದಿ ಹರಿದಾಡುತ್ತಿದ್ದು. ಕರ್ನಾಟಕದಲ್ಲಿ ಕೆಲವರಿಗೆ ಸೋಂಕು ಹರಡಿರುವ ವಿಚಾರದಿಂದ ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದು. ಮನೆಯಿಂದ ಹೊರಗಡೆ ಹೋಗುವುದಕ್ಕೆ ಭಯಪಡುತ್ತಿದ್ದಾರೆ.
ಇದರಿಂದ ಅಂಗಡಿ-ಮುಂಗಟ್ಟು ವ್ಯಾಪಾರಿಗಳಿಗೆ ವಹಿವಾಟಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಆಸ್ಪತ್ರೆ ಕಡೆ ಸುಳಿದಾಡದ ಜನತೆ: ಕೊರೊನಾ ವೈರಸ್ ಸೋಂಕು ಎಲ್ಲರಿಗೂ ಹರಡುತ್ತದೆ ಎಂಬ ಸುದ್ದಿಗೆ ಬೆಚ್ಚಿದ ರೋಗಿಗಳು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬಾರದಿರುವುದು ಕಂಡು ಬಂತು.
ಆಸ್ಪತ್ರೆಯಲ್ಲಿ ಬೆರಳೆಣಿಕೆಯಷ್ಟು ರೋಗಿಗಳು ಇದ್ದರು. ಸಣ್ಣ-ಪುಟ್ಟ ಕಾಯಿಲೆಗಳಿಗೂ ಬರುತ್ತಿದ್ದ ರೋಗಿಗಳು ಆಸ್ಪತ್ರೆಗೆ ಕಡೆ ಸುಳಿಯಲಿಲ್ಲ. ಇತ್ತ ವೈದ್ಯರು ರೋಗಿಗಳಿಲ್ಲದೆ ಖಾಲಿ ಕುಳಿತುಕೊಂಡಿರುವುದು ಕಂಡು ಬಂತು.
ಸಿನಿಮಾ ಮಂದಿರಗಳು ಬಂದ್: ಕೊರೊನಾ ಎಫೆಕ್ಟ್ನಿಂದ ನಗರದಲ್ಲಿ 2 ಚಿತ್ರಮಂದಿರಗಳಿದ್ದು, ಅವುಗಳನ್ನು ಬಂದ್ ಮಾಡಲಾಗಿತ್ತು. ರಾಜ್ಯದಲ್ಲಿ ಕೊರೊನಾ ವೈರಸ್‌ಗೆ ಕಟ್ಟೆಚ್ಚರ ವಹಿಸಲಾಗಿದೆ. ಚಿತ್ರಮಂದಿರಗಳ ಉದ್ಯಮಕ್ಕೂ ಸಾಕಷ್ಟು ನಷ್ಟ ಉಂಟಾಗಿದೆ. ಚಿತ್ರಮಂದಿರಗಳಿಗೆ ಬೀಗ ಹಾಕಲಾಗಿತ್ತು. ನಗರದತ್ತ ಸುಳಿದಾಡದ ಗ್ರಾಮೀಣರು: ನಗರದಲ್ಲಿ ಜನರಿಲ್ಲದೇ ಬಿಕೋ ಎನ್ನುವ ವಾತಾವಾರಣ ನಿರ್ಮಾಣವಾಗಿತ್ತು.
ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ಖಾಲಿ-ಖಾಲಿ ಸಂಚರಿಸಿದ್ದವು. ನಗರದ ಪ್ರಮುಖ ಬೀದಿಗಳಲ್ಲಿ ಜನರಿಲ್ಲದೇ ರಸ್ತೆಗಳು ಖಾಲಿಯಾಗಿದ್ದವು. ಫುಟ್‌ಪಾತ್ ವ್ಯಾಪಾರಿಗಳಿಗೆ ವ್ಯವಹಾರವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣ ಆಗಿತ್ತು. ಕೊರೊನಾ ವೈರಸ್‌ಗೆ ಹೆದರಿದ ಜನತೆ ನಗರದ ಕಡೆ ಮುಖ ಮಾಡುವುದಕ್ಕೆ ಇನ್ನೂ ಕೆಲವು ದಿನಗಳವರೆಗೆ ಸುಳಿದಾಡುವುದಿಲ್ಲ ಎಂಬ ಮಾತುಗಳು ಕೇಳಿಬಂದವು.
ಶಾಲಾ-ಕಾಲೇಜಿಗೆ ರಜೆ: ಕೊರೊನಾ ವೈರಸ್ ಸೋಂಕಿನ ಮುಂಜಾಗ್ರತೆ ಕ್ರಮಕ್ಕಾಗಿ ಖಾಸಗಿ ಮತ್ತು ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಮಟ್ಟದ ಅಧಿಕಾರಿಗಳ ಆದೇಶದವರೆಗೆ ಶಾಲಾ, ಕಾಲೇಜಿಗೆ ರಜೆ ನೀಡಲಾಗಿದೆ. ಇದರಿಂದ ಶಾಲಾ-ಕಾಲೇಜಿಗೆ ಬೀಗ ಹಾಕಲಾಗಿತ್ತು.
ಕೋಳಿ ವ್ಯಾಪಾರ ಸ್ಥಗಿತ: ಕೊರೊನಾ ವೈರಸ್ ಕೋಳಿಗಳಲ್ಲಿ ಕಾಣಿಸಿಕೊಂಡಿದೆ ಎಂಬ ಸುದ್ದಿಗೆ ಕೋಳಿಗಳನ್ನು ಯಾರೊಬ್ಬರು ಖರೀದಿ ಮಾಡುತ್ತಿಲ್ಲ. ಜನತೆ ಕೋಳಿ ಅಂಗಡಿಗಳತ್ತ ತಲೆ ಹಾಕುತ್ತಿಲ್ಲ. ಇದರಿಂದ ಕೋಳಿಗಳ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ.