ಚನ್ನಗಿರಿ: ವಯೋವೃದ್ಧರು ದೇಶದ ಅಭಿವೃದ್ಧಿಯ ಬೆನ್ನೆಲುಬು ಆಗಿದ್ದಾರೆ. ವೃದ್ಧರನ್ನು ಪ್ರೀತಿ-ವಿಶ್ವಾಸದಿಂದ ಯಾರು ಕಾಣುತ್ತಾರೋ ಅಂತಹ ಮನೆ-ಕುಟುಂಬ… ಆ ದೇಶವು ರತ್ನ ಕಣಜದ್ದಂತೆ ಹೊಳಪಿನಿಂದ ಕೂಡಿರುತ್ತದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅಭಿಪ್ರಾಯಪಟ್ಟರು.
ಮಂಗಳವಾರ ಮೌದ್ಗಲ್ ಆಂಜನೇಯ ಸ್ವಾಮಿ ಸಮುದಾಯಭವನದಲ್ಲಿ ತಾಲೂಕು ನಿವೃತ್ತ ನೌಕರರ ಸಂಘದ ಸುವರ್ಣ ಮಹೋತ್ಸವ ಹಾಗೂ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಗುರು-ಹಿರಿಯರನ್ನು ಗೌರವದಿಂದ ಕಾಣುವ ಸಂಸ್ಕೃತಿಯನ್ನು ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಕಲಿಸಬೇಕು. ಇಲ್ಲವಾದರೆ ಮುಪ್ಪಿನ ದಿನಗಳಲ್ಲಿ ವೃದ್ಧರು ಭಿಕ್ಷೆ ಅಥವಾ ವೃದ್ಧಾಶ್ರಮಗಳ ಆಶ್ರಯ ಬೇಡುವ ಸ್ಥಿತಿ ನಮ್ಮನ್ನು ಕಾಡಲಿದೆ ಎಂದರು.
ನಿವೃತ್ತ ನೌಕರರು ಅನುಭವದ ಜತೆಗೆ ದೂರದೃಷ್ಟಿ ಹೊಂದಿದ್ದು, ಅವರ ಸಲಹೆ, ಸೂಚನೆ ಪಡೆದು ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವುದು. ಸರ್ಕಾರದ ಮುಂದೆ ನಿವೃತ್ತರು ಹಲವು ಬೇಡಿಕೆಗಳನ್ನಿಟ್ಟಿದ್ದು, ಅವುಗಳ ಈಡೇರಿಕೆಗೆ ಸಂಪೂರ್ಣ ಬೆಂಬಲ ನೀಡುತ್ತೇನೆ. ನನ್ನ ಕ್ಷೇತ್ರದಲ್ಲಿ ನಿವೃತ್ತ ನೌಕರರಿಗಾಗಿ ಸಮುದಾಯವ ಭವನ ಮತ್ತು ಇತರೆ ಸೌಲಭ್ಯಗಳಿಗಾಗಿ ತಕ್ಷಣ ಸ್ಪಂದಿ ಸಲಾಗುವುದು. ನಲ್ಲೂರಿನಲ್ಲಿ 4ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದು, ಸಂತೇಬೆನ್ನೂರು, ತಾವರಕೆರೆ, ದೇವರಹಳ್ಳಿ, ಚನ್ನಗಿರಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅದ್ಯತೆ ನೀಡುವುದಾಗಿ ಭರವಸೆ ನೀಡಿದರು.
ಕರ್ನಾಟಕ ಸಾಹಿತ್ಯ ಅಕಾಡಮಿ ರಾಜ್ಯಾಧ್ಯಕ್ಷ ಡಾ. ಬಿ.ವಿ. ವಸಂತಕುಮಾರ್ ಮಾತನಾಡಿ, ಮನೆಯಲ್ಲಿ ಹಿರಿಯರು ಇದ್ದರೆ ಆ ಮನೆಯಲ್ಲಿ ಒಂದು ಶಕ್ತಿಯಿದ್ದಂತೆ. ಆದ್ದರಿಂದ ಯಾವುದೇ ಕಾರಣಕ್ಕೂ ಆ ಶಕ್ತಿಯನ್ನು ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಸ್.ಟಿ. ಶಾಂತಗಂಗಾಧರ್ ಮಾತನಾಡಿ, ನಾಡು ಕಟ್ಟುವಲ್ಲಿ ಶಿಕ್ಷಕರ ಕೊಡುಗೆ ಅಪಾರ. ದೇಶದ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶಿಕ್ಷಣ ರೂಪದಲ್ಲಿ ಉತ್ತಮ ಪ್ರಜೆಯನ್ನು ನೀಡುತ್ತಾರೆ ಎಂದರು.
ಡಾ| ಬಿ.ವಿ. ವಸಂತಕುಮಾರ್ ಹಾಗೂ ಎಸ್.ಟಿ. ಶಾಂತಗಂಗಾಧರ್ ಅವರನ್ನು ಸನ್ಮಾನಿಸಲಾಯಿತು. ಕೇದಾರ ಶಾಖಾ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕು ನಿವೃತ್ತರ ಸಂಘದ ಅಧ್ಯಕ್ಷ ಎ. ತೀರ್ಥಪ್ಪ, ಕೆ.ಜಿ. ಭರತ್‌ರಾಜ್, ಜಿಪಂ ಸದಸ್ಯ ವಾಗೀಶ್, ಉಪಾಧ್ಯಕ್ಷ ಮಂಜುನಾಥ್, ಜಯದೇವಯ್ಯ, ಮಲ್ಲೇಶಪ್ಪ, ಮುನಿದೇವ್ರು, ಚಿನ್ನಸ್ವಾಮಿ ಮತ್ತಿತರರಿದ್ದರು.